ವಿಎಸ್ಕೆ ವಿವಿ ಕುಲಪತಿ ವಿರುದ್ಧ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 8
ಕುಲಸಚಿವರ ಮೇಲೆ ಜಾತಿ ನಿಂದನೆ ಮಾಡಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳ ಒಕ್ಕೂಟ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದೆ.
ವಿವಿ ಕುಲಪತಿ ಮಂಜಪ್ಪ ಹೊಸಮನಿ ಅವರು ಕುಲಸಚಿವ ಡಾ. ಕೆ. ವಿಜಯಕುಮಾರ್ ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ. ವಿವಿ ಮುಖ್ಯಸ್ಥರಾದ ಕುಲಪತಿ ದೇಶದ ಏಕತೆ, ಭದ್ರತೆ, ಜಾತ್ಯತೀತ ಭಾವನೆಗಳನ್ನು ಬೆಳೆಸುವ ವಿದ್ಯಾನಿಕೇತನದಲ್ಲಿರುವ ಅವರೆ ಜಾತಿ ನಿಂದನೆ ಮಾಡುವ ಮೂಲಕ ಜಾತಿ ಭಾವನೆಗಳನ್ನು ತುಂಬಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಕುಲಸಚಿವ ಡಾ. ಕೆ. ವಿಜಯಕುಮಾರ್ ದಲಿತರೆಂಬ ಕಾರಣಕ್ಕೆ ಅವರ ಮೇಲೆ ಅಧಿಕಾರ ಚಲಾಯಿಸಲು ಮುಂದಾಗಿದ್ದಾರೆ. ಅಲ್ಲದೆ ಅವರನ್ನು ಸಿಂಡಿಕೇಟ್ ಸಭೆಯಿಂದ ದೂರವಿಟ್ಟು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಿರುವುದು ಜಾತಿಯ ಭಾವನೆಯನ್ನು ಎತ್ತಿ ತೋರಿಸುತ್ತದೆ. ಇಂತಹ ನಡೆಯಿಂದ ಬೇಸತ್ತು ಕುಲಸಚಿವರು ಜಾತಿ ನಿಂದನೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿಲ್ಲ. ಕೂಡಲೇ ಕುಲಪತಿಗಳನ್ನು ಬಂಧಿಸಿ, ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು: ಜಾತಿ ನಿಂದನೆ ಪ್ರಕರಣ ಕುಲಪತಿ ವಿರುದ್ಧ ದಾಖಲಾಗಿರುವುದರಿಂದ ಅವರನ್ನು ಕೂಡಲೇ ಬಂಧಿಸಿ, ಕಾನೂನಿನ ಕ್ರಮ ಕೈಗೊಳ್ಳಬೇಕು. ಕುಲಪತಿ ಸಿಬ್ಬಂದಿ ಮೇಲೆ ದೌರ್ಜನ್ಯದಿಂದ ವರ್ತಿಸಿ, ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇಂತಹ ನಡವಳಿಕೆಗೆ ಕಡಿವಾಣ ಹಾಕಬೇಕು. ಕುಲಪತಿಗಳನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ನ್ಯಾಯವಾದಿ ವೆಂಕಟೇಶ್, ಕೆ. ವೆಂಕಟೇಶಮೂರ್ತಿ, ರಮೇಶ ಗೋನಾಳ, ಜೆ. ಕುಂಸಣ್ಣ, ಮಲ್ಲಿಕಾರ್ಜುನ, ತಿರುಮಲಮ್ಮ, ವಿಜಯಕುಮಾರ, ಶಿವಪ್ಪ, ತಾಯಣ್ಣ, ರಾಮಾಂಜನೇಯಲು, ಹುಲ್ತೆಲ್ಲ, ನಾಗಭೂಷಣ, ನಾಗರಾಜ, ನೆಟ್ಟೆಪ್ಪ, ಶಾಂತಕುಮಾರ, ಪಾಲಾಕ್ಷಿ, ತಿಪ್ಪೇಸ್ವಾಮಿ, ಕಾಳಿ, ಚಿನ್ನ, ರಾಘವೇಂದ್ರ, ಮಲ್ಲಿಕಾರ್ಜುನ, ಬಸವರಾಜ, ವಿಶ್ವ, ಗೋಪಾಕೃಷ್ಣ, ಸೀತರಾಂ, ಎರ್ರಿಸ್ವಾಮಿ, ಲೀಲಾವತಿ, ಲಕ್ಷ್ಮಿ ಪಾಲ್ಗೊಂಡಿದ್ದರು.
ಬಿಗಿ ಬಂದೋಬಸ್ತ್...
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ, ಕುಲಸಚಿವರ ಆಂತರಿಕ ಜಗಳದ ಹಿನ್ನೆಲೆಯಲ್ಲಿ ವಿವಿಗೆ ಗ್ರಾಮೀಣ ಡಿವೈಎಸ್ಪಿ ರುದ್ರಮುನಿ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನೀಡಲಾಗಿದೆ.
ವಿವಿಗೆ ಹೆಚ್ಚಿನ ಭದ್ರತೆ ನೀಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಬಂದೋಬಸ್ತ್ ಏರ್ಪಡಿಸಲಾಗಿದೆ. ಓರ್ವ ಸಿಪಿಐ, 3 ಪಿಎಸ್ಐ, 6 ಎಎಸ್ಐ, 12 ಮುಖ್ಯಪೇದೆ, ಪೇದೆಗಳನ್ನು ಹಾಗೂ ಡಿಎಆರ್ ಸೇರಿದಂತೆ 30 ಜನ ಸಿಬ್ಬಂದಿ ವಿವಿ ಭದ್ರತೆಗೆ ನಿಯೋಜಿಸಲಾಗಿದೆ.
ವಿವಿ ಮುಂದೆ ಪೊಲೀಸ್ ಕಣ್ಗಾವಲು ಬಿಗಿಯಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

