ರಂಜಾನ್: ಮಹಿಳೆಯರಿಂದಲೂ ಪ್ರಾರ್ಥನೆ
ಕೊಟ್ಟೂರು: ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ ಸಂಭ್ರಮದೊಂದಿಗೆ ಶುಕ್ರವಾರ ಪಟ್ಟಣದಲ್ಲಿ ಆಚರಿಸಿದರು.
ಇಲ್ಲಿನ ನಾಲ್ಕು ಮಸೀದಿಗಳಿಂದ ಸಾವಿರಾರು ಮುಸ್ಲಿಂ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೈದು ಪರಸ್ಪರ ಶುಭಾಶಯ ಹಂಚಿಕೊಂಡರು.
ಈದ್ಗಾ ಮೈದಾನಕ್ಕೆ ತೆರಳುವ ಮುನ್ನ ದಾನ ಮಾಡಿ ಅನಂತರ ಪ್ರಾರ್ಥನೆ ಮಾಡಲು ಮುಂದಾಗುತ್ತಿದ್ದುದು ಪ್ರಮುಖವಾಗಿ ಕಂಡುಬಂತು. ಕೊಟ್ಟೂರು ಪಟ್ಟಣ, ದೂಪದಹಳ್ಳಿ, ರಾಂಪುರ, ಕೋಡಿಹಳ್ಳಿ, ಚಪ್ಪರದಹಳ್ಳಿ ಗ್ರಾಮದ ಮುಸ್ಲಿಂ ಬಾಂಧವರು ಪಟ್ಟಣದಲ್ಲಿ ಪ್ರಾರ್ಥನೆಗೆಂದೇ ಜಮಾವಣೆಗೊಂಡು ಸಂಭ್ರಮಿಸಿದರು. ಇಲ್ಲಿನ ಹ್ಯಾಳ್ಯಾ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಜಾಮಿಯಾ ಮಸೀದಿಯ ಇಮಾಮೌಲ್ವಿ, ಹಾಫೀಜ್ ಖಾನ್ ಪ್ರಾರ್ಥನೆಯ ವಿಧಿ-ವಿಧಾನಗಳನ್ನು ತಿಳಿಸಿ, ಬೋಧಿಸಿದರು. ಮೌಲ್ವಿಯನ್ನು ನೆರೆದಿದ್ದ ಮುಸ್ಲಿಂ ಬಾಂಧವರು ಒಂದೇ ಧ್ವನಿಯಲ್ಲಿ ಅನುಸರಿಸಿ ಪ್ರಾರ್ಥನೆಗೈದರು.
ಮಹಿಳೆಯರಿಂದಲೂ ಪ್ರಾರ್ಥನೆ: ಮುಸ್ಲಿಂ ಮಹಿಳೆಯರು ಪ್ರಾರ್ಥನೆಗೆಂದೇ ಪಟ್ಟಣದಲ್ಲಿ ಪ್ರಾರಂಭಿಸಿರುವ ಹಾಲ್ ಅತೀಸ್ ಮಸೀದಿಯಲ್ಲಿ ರಂಜಾನ್ ಪ್ರಯುಕ್ತ ಮಹಿಳೆಯರು ಸಹ ಸಾಮೂಹಿಕ ಪ್ರಾರ್ಥನೆಗೈದರು.
ಕೂಡ್ಲಿಗಿ: ಹಬ್ಬದ ಸಡಗರ, ಪ್ರಾರ್ಥನೆ
ಕೂಡ್ಲಿಗಿ: ಇಲ್ಲಿನ ಕೊಟ್ಟೂರು ರಸ್ತೆಯಲ್ಲಿರುವ ಜಾಮಿಯಾ ಮತ್ತು ಅಲಿ ಆದೀಸ್ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ, ಭಕ್ತಿಯಿಂದ ಶುಕ್ರವಾರ ಪ್ರಾರ್ಥನೆ ನಡೆಸಿ ರಂಜಾನ್ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಜಾಮಿಯಾ ಈದ್ಗಾದಲ್ಲಿ ಮಾಜಿ ಸಚಿವ ಎನ್.ಎಂ. ನಬೀಸಾಬ್, ಬಾಷಾಸಾಬ್, ಮಕ್ಬುಲ್ ಮೌಲಿಸಾಬ್ ಸೇರಿ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ಸುಮಾರು ಒಂದು ತಿಂಗಳ ಕಾಲ ಉಪವಾಸ ವ್ರತ ಆಚರಿಸಿದ ಮುಸ್ಲಿಂ ಬಾಂಧವರು ಶುಕ್ರವಾರ ರಂಜಾನ್ ಹಬ್ಬದ ಸಡಗರಕ್ಕಾಗಿ ಹೊಸ ಉಡುಗೆ ತೊಟ್ಟು ಸಂಭ್ರಮಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಮನೆ ಮನೆಗಳನ್ನು ಅಲಂಕರಿಸಿದ್ದರು.
ಹೊಸಪೇಟೆ: ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ
ಹೊಸಪೇಟೆ: ನಗರ ಸೇರಿದಂತೆ ತಾಲೂಕಿನಲ್ಲಿ ಶುಕ್ರವಾರ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು. ರಂಜಾನ್ ಹಿನ್ನೆಲೆಯಲ್ಲಿ ಸಾವಿರಾರು ಮುಸ್ಲಿಮರು ನಗರದ ಐಎಸ್‌ಆರ್ ರಸ್ತೆ ಬಳಿ ಹಾಗೂ ಹರಿಹರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನಂತರ ಪರಸ್ಪರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ರಂಜಾನ್ ಹಬ್ಬದಲ್ಲಿ ಒಂದು ತಿಂಗಳ ಕಾಲ ಉಪವಾಸವಿದ್ದು ನಿತ್ಯವೂ ದೇವರನ್ನು ಮುಸ್ಲಿಂ ಬಾಂಧವರು ಪ್ರಾರ್ಥಿಸಿಕೊಳ್ಳುತ್ತಿದ್ದರು. ಹಬ್ಬದ ಪ್ರಯುಕ್ತ ನಗರದ ವಿವಿಧ ಮಸೀದಿಗಳಲ್ಲಿ ವಿಶೇಷ ಧಾರ್ಮಿಕ ಪ್ರಾರ್ಥನೆ ನಡೆದವು. ಪ್ರಾರ್ಥನೆಯ ನಂತರ ಮುಸ್ಲಿಂ ಬಾಂಧವರು ಬಡವರಿಗೆ ದಾನ ಮಾಡಿದರು. ನಗರದಲ್ಲಿ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ ನೇತೃತ್ವದಲ್ಲಿ ಸ್ಥಳೀಯ ಇನ್‌ಸ್ಪೆಕ್ಟರ್‌ಗಳು ಹಾಗೂ ಪಿಎಸ್‌ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಇದೇ ರೀತಿ ತಾಲೂಕಿನ ಕಮಲಾಪುರ, ಮರಿಯಮ್ಮನಹಳ್ಳಿಯಲ್ಲೂ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದೊಂದಿಗೆ ಆಚರಿಸಿದರು. ಪಟ್ಟಣದ ಹೊರ ವಲಯದಲ್ಲಿರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ನಂತರ ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

