ಪಠ್ಯಪುಸ್ತಕಕ್ಕಾಗಿ ಮಕ್ಕಳ ಪರದಾಟ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 10
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಎರಡೂವರೆ ತಿಂಗಳು ಕಳೆಯುತ್ತಾ ಬಂದರೂ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಇದುವರೆಗೂ ಪಠ್ಯ ಪುಸ್ತಕಗಳು ಸಮರ್ಪಕವಾಗಿ ದೊರೆಯದೇ ವಿದ್ಯಾರ್ಥಿಗಳು ಹಾಗೂ ಪಾಲಕರು ಪರದಾಡುವಂತಾಗಿದೆ.
ವಿದ್ಯಾರ್ಥಿಗಳು ಕೆಲ ವಿಷಯಗಳ ಪಠ್ಯ ಪುಸ್ತಕಗಳನ್ನು ಇದುವರೆಗೂ ನೋಡಿಲ್ಲ ಮತ್ತು ಓದಿಲ್ಲ. ಆದರೂ ಸೆಮಿಸ್ಟರ್ ಪದ್ಧತಿಯಂತೆ ಪರೀಕ್ಷೆಗಳನ್ನು ಬರೆಯಬೇಕಾಗಿದೆ. ಸೆಮಿಸ್ಟರ್ ಪದ್ಧತಿಯಂತೆ ಪರೀಕ್ಷೆಗಳಿರುವುದರಿಂದ ವಿದ್ಯಾರ್ಥಿಗಳು ಈ ಪದ್ಧತಿಯಂತೆ ಪರೀಕ್ಷೆ ಬರೆಯಲು ಸಿದ್ಧರಾಗಬೇಕು. ಆದರೆ, ವಿದ್ಯಾರ್ಥಿಗಳಿಗೆ ಮಾತ್ರ ಇದುವರೆಗೆ ತಾಲೂಕಿನಲ್ಲಿ ಕೆಲ ಪಠ್ಯ ಪುಸ್ತಕಗಳು ಇನ್ನೂ ಬರದೇ ಇರುವುದರಿಂದ ನಿತ್ಯವೂ ಪುಸ್ತಕಗಳಿಗಾಗಿ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಕರು ದಾರಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೆಲ ಪುಸ್ತಕಗಳು ವಿತರಣೆಯಾಗಿವೆ. ಇನ್ನೂ ಕೆಲ ಪುಸ್ತಕಗಳು ವಿತರಣೆಯಾಗಬೇಕಾಗಿದೆ. ಸೆಮಿಸ್ಟರ್ ಪದ್ದತಿ ಇರುವುದರಿಂದ ವಿದ್ಯಾರ್ಥಿಗಳು ಏನು ಓದಿಕೊಳ್ಳಬೇಕು. ಪರೀಕ್ಷೆಯಲ್ಲಿ ಏನು ಬರೆಯಬೇಕು ಎನ್ನುವ ಸಮಸ್ಯೆ ವಿದ್ಯಾರ್ಥಿಗಳಿಗೆ ಉಂಟಾಗಿದೆ.
ಶಾಲೆಯ ಆರಂಭದಲ್ಲಿ ಕೆಲವೊಂದು ಪುಸ್ತಕಗಳನ್ನು ಮಾತ್ರ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು. ಆದರೆ, ಕಳೆದ ಎರಡು ತಿಂಗಳಿಂದಲೂ ಬಹುತೇಕ ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನೇ ನೋಡಿಲ್ಲ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಆ. 6ರಂದು ಕೆಲ ಪುಸ್ತಕಗಳು ಬಂದಿವೆ. ಆದರಲ್ಲಿ ಕೆಲ ಶಾಲಾ ಶಿಕ್ಷಕರು ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ಕೆಲವರು ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿಲ್ಲ. ಕಳೆದ ಎರಡು ಬಾರಿ ಪುಸ್ತಕ ಶಾಲೆಗೆ ವಿತರಿಸಲಾಗಿದ್ದರೂ ಇನ್ನೂ ಸಾಕಷ್ಟು ಪುಸ್ತಕಗಳ ಕೊರತೆ ವಿದ್ಯಾರ್ಥಿಗಳು ಅನುಭವಿಸುತ್ತಿದ್ದಾರೆ.
ಶಿಕ್ಷಕರ ಕೊರತೆ...
ಪಠ್ಯಪುಸ್ತಕಗಳ ಕೊರತೆ ಒಂದು ಕಡೆಯಾದರೆ, ಇನ್ನೊಂದು ಶಿಕ್ಷಕರ ಕೊರತೆ ತಾಲೂಕಿನಲ್ಲಿ ಸಾಕಷ್ಟು ಇದೆ. ತಾಲೂಕಿನಲ್ಲಿ 204 ಶಿಕ್ಷಕರ ಕೊರತೆ ಇದೆ. ಇದರಲ್ಲಿ 23 ಟಿಜಿಜೆ ಹುದ್ದೆಗಳು ಖಾಲಿ ಇವೆ. 47 ನೇರ ನೇಮಕಾತಿಗೆ ಮೀಸಲಿರಿಸಲಾಗಿದೆ. ಉಳಿದ 134 ಶಿಕ್ಷಕರ ಹುದ್ದೆಗಳು ತಾಲೂಕಿನಲ್ಲಿ ಖಾಲಿ ಇವೆ.
ಬಹುತೇಕ ಪಠ್ಯ ಪುಸ್ತಕಗಳು ಬಂದಿದ್ದು, ಇನ್ನು ಕೆಲ ಪಠ್ಯ ಪುಸ್ತಕಗಳು ಮಾತ್ರ ಬರಬೇಕಾಗಿದೆ. ಬೇಡಿಕೆಗೆ ತಕ್ಕಂತೆ ಪಠ್ಯ ಪುಸ್ತಕಗಳು ಪೂರೈಕೆ ಮಾಡಲಾಗಿದೆ. ಆದರೆ, ಹೆಚ್ಚುವರಿಯಾಗಿ ಬೇಡಿಕೆಯಾಗಿರುವುದರಿಂದ ಹೆಚ್ಚುವರಿ ಪಠ್ಯ ಪುಸ್ತಕ ತರಿಸಿಕೊಡಲಾಗುತ್ತಿದೆ. ಪಠ್ಯ ಪುಸ್ತಕಗಳಿಗಾಗಿ ಶಾಲಾ ಆಡಳಿತ ಮಂಡಳಿಯವರಿಂದ ಬೇಡಿಕೆ ತರಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದಷ್ಟು ಬೇಗನೆ ಹೆಚ್ಚುವರಿ ಪಠ್ಯಪುಸ್ತಕ ತರಿಸಿಕೊಡಲಾಗುತ್ತದೆ.
- ಪಿ. ಸುನಂದಾ, ಕ್ಷೇತ್ರಶಿಕ್ಷಣಾಧಿಕಾರಿ
-ಸಿ.ಕೆ. ನಾಗರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

