ಲೋಕಸಭಾ ಚುನಾವಣೆ ಕಸರತ್ತು ಶುರು
ಬಳ್ಳಾರಿ: ಲೋಕಸಭೆ ಚುನಾವಣೆ ಏಳೆಂಟು ತಿಂಗಳು ಬಾಕಿ ಇದ್ದಾಗಲೇ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಳ್ಳಾರಿಯ ಪ್ರಬಲ ನಾಯಕರು ಕಸರತ್ತು ನಡೆಸಿದ್ದಾರೆ.
ಹೈದ್ರಾಬಾದ್ ಕರ್ನಾಟಕದಲ್ಲಿಯೇ ಬೀದರ್ ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಹೆಚ್ಚು ಕುತೂಹಲ ಕೆರಳಿಸಿದ್ದು, ಇದೀಗ ಹೈ.ಕದಲ್ಲಿರುವ ವಿಧಾನಸಭೆ ಚುನಾವಣೆ ಟಿಕೆಟ್ ಪಡೆಯದೇ, ಪ್ರಬಲ ರಾಜಕಾರಣಿಗಳಾಗಿದ್ದವರು, ಇದೀಗ ಲೋಕಸಭೆಯಲ್ಲಿ ರಾಜಕೀಯ ಕಂಡುಕೊಳ್ಳಲು ಮುಂದಾಗಿದ್ದಾರೆ.
ಬಳ್ಳಾರಿ ಜೆಡಿಎಸ್ ಮುಖಂಡ, ಮಾಜಿ ಶಾಸಕ ಎನ್. ಸೂರ್ಯನಾರಾಯಣ ರೆಡ್ಡಿ ಅವರನ್ನು ಕೊಪ್ಪಳ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸಿದ್ದು, ಇವರು ಆಕಾಂಕ್ಷಿಯಾಗಿದ್ದಾರೆಂಬ ಸುದ್ದಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಪ್ರಬಲ ನಾಯಕರೆಂದು ಕರೆಸಿಕೊಂಡವರಿಗೆ ಇದೀಗ ಲೋಕಸಭೆಯಲ್ಲಿ ಕೊಪ್ಪಳ ಮೇಲೆ ಕಣ್ಣಿಟ್ಟಿದ್ದು, ಬಿಜೆಪಿ, ಜೆಡಿಎಸ್ ಮುಂದಿನ ಲೋಕಸಭೆಯ ಮೈತ್ರಿ ಎಂಬ ಸುದ್ದಿ ಹರಡುತ್ತಿದ್ದಂತೆ, ಈಗಾಗಲೇ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎಂಬ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎನ್. ಸೂರ್ಯನಾರಾಯಣ ರೆಡ್ಡಿ ಕಣಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅರ್ಜಿ ಸಲ್ಲಿಸಿದರೆ, ಅದರ ಬೆನ್ನಲ್ಲೆ ಜೆಡಿಎಸ್ನ ಸೂರ್ಯನಾರಾಯಣ ರೆಡ್ಡಿ ಹೆಸರು ಕೇಳಿಬರುತ್ತಿರುವುದು ನೋಡಿದರೆ, ಈಗಿನಿಂದಲೇ ಕೊಪ್ಪಳ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ.
ಬಳ್ಳಾರಿ ನಾಯಕರಿಗೆ ಕೊಪ್ಪಳದ ಮೇಲೆ ಕಣ್ಣು: ಹಲವು ರಾಜಕೀಯ ಕಾರಣ ಮುಂದಿಟ್ಟುಕೊಂಡು ಬಳ್ಳಾರಿಯ ಕೆಲ ನಾಯಕರು ಕೊಪ್ಪಳದಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಹೊರಟಿದ್ದಾರೆ. ಎನ್. ಸೂರ್ಯನಾರಾಯಣ ರೆಡ್ಡಿ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕೊಪ್ಪಳ, ಸಿರುಗುಪ್ಪ, ಕನಕಗಿರಿ ಸೇರಿದಂತೆ ಇತರ ಜಿಲ್ಲೆಯಲ್ಲಿ ರಾಜಕೀಯ ಒಡನಾಟವನ್ನು ಮೊದಲಿನಿಂದ ಇಟ್ಟುಕೊಂಡಿದ್ದು, ಇನ್ನು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಸೇರ್ಪಡೆಯಾಗಿರುವುದರಿಂದ ತಮ್ಮ ರಾಜಕೀಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಮೈತ್ರಿ ಬಲ ಮತ್ತಷ್ಟು ಚರ್ಚೆಗೆ ಗ್ರಾಸ: ಈಗಾಗಲೇ ಮಂಡ್ಯ, ರಾಮನಗರ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆಯಲ್ಲಿ ಅವರ ಮೈತ್ರಿ ಮಾತು ಕೇಳಿಬರುತ್ತಿರುವುದರಿಂದ ಬಿಜೆಪಿ, ಜೆಡಿಎಸ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಕೊಪ್ಪಳದಿಂದ ಜೆಡಿಎಸ್ ಅಭ್ಯರ್ಥಿ ಚುನಾವಣೆ ಕಣಕ್ಕೆ ಇಳಿದಿದ್ದೆಯಾದರೆ, ಕೊಪ್ಪಳ ಲೋಕಸಭಾ ಕ್ಷೇತ್ರ ಮತ್ತಷ್ಟು ರಂಗೇರಲಿದೆ. ಬಳ್ಳಾರಿ ರಾಜಕಾರಣ ಎಂದಾಕ್ಷಣ ಎಲ್ಲರಿಗೂ ಕುತೂಹಲ, ಇದೀಗ ಬಳ್ಳಾರಿಯ ರಾಜಕಾರಣ ಕೊಪ್ಪಳಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ.
ಇನ್ನು ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು (ಬಿಸ್ಸಾರ್ ಪಕ್ಷ) ಬಿಜೆಪಿಯಲ್ಲಿ ವಿಲೀನವಾದರೆ, ಬಳ್ಳಾರಿಯಿಂದ ಶ್ರೀರಾಮುಲು, ಕೊಪ್ಪಳದಲ್ಲಿ ಸೋಮಶೇಖರ ರೆಡ್ಡಿ ನಿಲ್ಲುತ್ತಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಮೈತ್ರಿಯಾದರೆ ಹೊಂದಾಣಿಕೆಯ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ.
ಲಾಭ, ನಷ್ಟಗಳ ಲೆಕ್ಕಾಚಾರ: ಈಗಾಗಲೇ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿರುವ ಹಾಗೂ ಪಕ್ಷದ ಹಿರಿಯರು ಒಪ್ಪಿಕೊಳ್ಳುವ ಸಾಧ್ಯತೆ ಇರುವ ಆಕಾಂಕ್ಷಿಗಳು ಕೊಪ್ಪಳದಲ್ಲಿ ಸ್ಪರ್ಧೆಯಿಂದ ಆಗುವ ಲಾಭ ನಷ್ಟದ ಬಗ್ಗೆ ಚರ್ಚೆ, ಆಂತರಿಕ ಚಿಂತನೆ ನಡೆಸುತ್ತಿದ್ದಾರೆ. ಜೆಡಿಎಸ್ನಲ್ಲಿ ಹೈದ್ರಾಬಾದ್ ಕೋರ್ ಕಮಿಟಿ ಅಧ್ಯಕ್ಷರಾಗಿದ್ದ ಎನ್. ಸೂರ್ಯನಾರಾಯಣ ರೆಡ್ಡಿ, ಕೊಪ್ಪಳವು ಹೈ-ಕದಲ್ಲಿ ಬರುವುದರಿಂದ ತಮಗೆ ಕೊಪ್ಪಳದಲ್ಲಿ ಸ್ಪರ್ಧಿಸುವುದರಿಂದ ಅನುಕೂಲತೆಗಳ ಬಗ್ಗೆ ಚಿಂತನೆ ಮಾಡಿದ್ದರೆ, ಮಾಜಿ ಸಂಸದ ಕೆ.ಸಿ. ಕೊಂಡಯ್ಯ ತಾವು ಸಂಸದರಾಗಿದ್ದ ಸಂದರ್ಭ ಸಿರುಗುಪ್ಪ ಕ್ಷೇತ್ರವು ತನ್ನ ವ್ಯಾಪ್ತಿಗೆ ಬಂದಿತ್ತು ಎಂಬ ಲೆಕ್ಕಾಚಾರ ಮುಂದಿಟ್ಟುಕೊಂಡು, ಸ್ಪರ್ಧೆಯ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಈ ಭಾಗದ ಪ್ರಮುಖ ನಾಯಕರಿಗೆ ವಿಧಾನಪರಿಷತ್, ರಾಜ್ಯಸಭಾ ಸದಸ್ಯತ್ವ ನೀಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಅವರಿಗೆ ಟಿಕೆಟ್ ನೀಡುವ ಮೂಲಕ ಅವರನ್ನು ತೃಪ್ತಿಪಡಿಸುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹೈ.ಕ.ದ 5 ಕ್ಷೇತ್ರದಲ್ಲಿ 3 ಕ್ಷೇತ್ರಗಳು ಮೀಸಲು ಇರುವುದರಿಂದ, ಈಗ ಅನಿವಾರ್ಯವಾಗಿ ಬೀದರ್, ಕೊಪ್ಪಳ ಕ್ಷೇತ್ರದಲ್ಲಿ ದೃಷ್ಟಿ ಹರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ನಾಯಕರು, ಕೊಪ್ಪಳ ಕ್ಷೇತ್ರದತ್ತ ಆಸಕ್ತಿ ತೋರುತ್ತಿದ್ದಾರೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

