ಸಚಿವರ ಪ್ರವಾಸ ಇಂದು
ಬಳ್ಳಾರಿ: ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಆ. 14ರಂದು ಬೆಳಗ್ಗೆ 11 ಗಂಟೆಗೆ ಹರಪ್ಪನಹಳ್ಳಿಯಿಂದ ಹೂವಿನಹಡಗಲಿ ತಾಲೂಕಿನ ಉಪನಾಯಕನಹಳ್ಳಿಗೆ ಆಗಮಿಸಿ, ಶಾಲಾ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅನಂತರ ಮಧ್ಯಾಹ್ನ 12ಕ್ಕೆ ಹೊರಟು ಸಂಜೆ 6 ಗಂಟೆಗೆ ಬಳ್ಳಾರಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಆ. 15ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ಅನಂತರ ಮಧ್ಯಾಹ್ನ 2.30ಕ್ಕೆ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಳ್ಳನ ಬಂಧನ: ಚಿನ್ನಾಭರಣ ವಶ
ಬಳ್ಳಾರಿ: ಇತ್ತೀಚೆಗೆ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ರಾಘವೇಂದ್ರ ದೇವಸ್ಥಾನದ ಸಮೀಪದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಗರಿಬೊಮ್ಮನಹಳ್ಳಿ ಪೊಲೀಸರು ಕಳ್ಳನೋರ್ವನನ್ನು ಬಂಧಿಸಿ, ಆತನಿಂದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನು ಬಾಡಿಗೆ ಮನೆಯ ಮಾಲೀಕನ ಮಗ ಎಂದು ಗುರುತಿಸಲಾಗಿದೆ. ಈತನು ಜು. 21ರಂದು ಮಧ್ಯಾಹ್ನ ನಕಲಿ ಬೀಗದ ಕೈಯನ್ನು ಉಪಯೋಗಿಸಿ, ಮನೆಯಲ್ಲಿದ್ದ ಬೀರುವನ್ನು ತೆಗೆದು ಅದರಲ್ಲಿದ್ದ ಬಂಗಾರದ ಆಭರಣಗಳು ಹಾಗೂ ಮೊಬೈಲ್ ಸೇರಿದಂತೆ ರು. 1,49,500 ಬೆಲೆ ಬಾಳುವ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದ. ಈ ಕುರಿತು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಕೊನೆಗೂ ಆರೋಪಿಯನ್ನು ಬಂಧಿಸಿ ಆತನಿಂದ ಬಂಗಾರದ ಆಭರಣಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಷ ಜಂತು ಕಚ್ಚಿ ರೈತ ಸಾವು
ಬಳ್ಳಾರಿ: ವಿಷದ ಜಂತು ಕಚ್ಚಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕು ಬೆಳ್ಳೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಗ್ರಾಮದ ಮಾರೆಪ್ಪ (45) ಎಂದು ಗುರುತಿಸಲಾಗಿದೆ. ಈತನು ಆ. 11ರಂದು ರಾತ್ರಿ 10.30ರ ಸುಮಾರಿಗೆ ಜಮೀನಿನಲ್ಲಿ ನೀರು ಕಟ್ಟುತ್ತಿರುವಾಗ, ಯಾವುದೋ ವಿಷಜಂತು ಕಚ್ಚಿದ್ದರಿಂದ ಮನೆಗೆ ಬಂದು, ತನ್ನ ಹೆಂಡತಿಗೆ ತಿಳಿಸಿದ್ದಾನೆ. ಚಿಕಿತ್ಸೆಗಾಗಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಾಗಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಈ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

