ಕೋಳಿ ಸಾಕಾಣಿಕೆ: ಸಹಾಯ ಧನಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ವತಿಯಿಂದ ಮೊಟ್ಟೆ ಕೋಳಿ ಘಟಕ ಕ್ಷೇತ್ರ ಸ್ಥಾಪನೆ ಮಾಡಲು ಹಾಗೂ ಮಾಂಸದ ಕೋಳಿ ಸಾಕಲು ಸಾಲ- ಸಹಾಯಧನ ನೀಡುವುದಕ್ಕಾಗಿ ಕೋಳಿ ಸಾಕಾಣಿಕೆದಾರರಿಂದ ಅರ್ಜಿ ಆಹ್ವಾನಿಸಿದೆ.
ಮೊಟ್ಟೆ ಕೋಳಿ ಘಟಕ ಸ್ಥಾಪನೆ: ಈ ಯೋಜನೆಯು ಫಲಾನುಭವಿ ಆಧಾರಿತವಾಗಿದ್ದು, ಮೊಟ್ಟೆ ಕೋಳಿ ಸಾಕಾಣಿಕೆಯನ್ನು ಜನಪ್ರಿಯಗೊಳಿಸಿ ಜಿಲ್ಲೆಯ ರೈತರ, ಗ್ರಾಮೀಣ ಯುವಕರ ಆದಾಯವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಜಿಲ್ಲೆಯ ಬಳ್ಳಾರಿ, ಸಿರುಗುಪ್ಪ, ಸಂಡೂರು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ, ಕೂಡ್ಲಿಗಿ ತಾಲೂಕಿನ ತಲಾ 2ರಂತೆ ಒಟ್ಟು 14 ಸಾಮಾನ್ಯ ವರ್ಗದ ಬಳ್ಳಾರಿ, ಹೊಸಪೇಟೆ, ಹಡಗಲಿಯ ತಲಾ 1ರಂತೆ ಪ. ಜಾತಿಯ ಹಾಗೂ ಕೂಡ್ಲಿಗಿ ತಾಲೂಕಿನ 1 ಪ. ಪಂಗಡದ ಫಲಾನುಭವಿ ಸೇರಿ ಒಟ್ಟು 18 ಫಲಾನುಭವಿಗಳಿಗೆ ಈ ಯೋಜನೆ ಲಭ್ಯವಾಗಲಿದೆ. ಇಲಾಖೆಯಿಂದ ಫಲಾನುಭವಿಗಳಿಗೆ 1000 ಮೊಟ್ಟೆ ಕೋಳಿ ಮರಿಗಳ ಸಾಕಾಣಿಕೆ ಹಾಗೂ ನಿರ್ವಹಣೆಗಾಗಿ ರು. 9 ಲಕ್ಷ ನೀಡಲಿದ್ದು, ಇದರಲ್ಲಿ ರು. 8 ಲಕ್ಷ ಸಾಲವಾಗಿ ಹಾಗೂ ಉಳಿದ ರು. 1 ಲಕ್ಷ ಸಹಾಯಧನವಾಗಿ ನೀಡಲಾಗುವುದು.
ಮಾಂಸದ ಕೋಳಿ ಸಾಕಾಣಿಕೆ: ಜಿಲ್ಲೆಯ ಪ್ರತಿ ತಾಲೂಕಿಗೆ 10 ಫಲಾನುಭವಿಗಳಂತೆ ಒಟ್ಟು 70 ಫಲಾನುಭವಿಗಳು ಮಾಂಸದ ಕೋಳಿ ಸಾಕಾಣಿಕೆ ಕಾರ್ಯಕ್ರಮದ ಲಾಭ ಪಡೆಯಬಹುದು. ಈ ಕಾರ್ಯಕ್ರಮದಡಿ ಕೋಳಿ ಮರಿಗಳ ಖರೀದಿ ಹಾಗೂ 6 ವಾರಗಳ ನಿರ್ವಹಣಾ ವೆಚ್ಚಕ್ಕಾಗಿ ರು. 1 ಲಕ್ಷ ನೀಡಲಾಗುವುದು. ಅದರಲ್ಲಿ ರು. 50 ಸಾವಿರ ಸಾಲ ಹಾಗೂ ರು. 50 ಸಾವಿರ ಸಹಾಯಧನ ಒಳಗೊಂಡಿರುತ್ತದೆ. ಫಲಾನುಭವಿಯು ಮರಿಗಳನ್ನು ಸಾಕಲು ಪ್ರಾರಂಭಿಸಿದ ದಿನದಂದು ಮೊದಲನೇ ಕಂತಾಗಿ ಶೇ. 50ರಷ್ಟು ( 25000) ಪ್ರೋತ್ಸಾಹ ಧನ ಹಾಗೂ ಒಂದು ತಿಂಗಳ ಮಾಂಸದ ಕೋಳಿ ಮರಿಗಳನ್ನು ಸಾಕಿದ ನಂತರ ಉಳಿದ ಶೇ. 50ರಷ್ಟು ಅಂದರೆ ರು. 25 ಸಾವಿರ ಪ್ರೋತ್ಸಾಹ ಧನವನ್ನು ನೀಡಲಾಗುವುದು.
ಅಗತ್ಯ ದಾಖಲೆಗಳು: ಆಸಕ್ತರು ಭಾವಚಿತ್ರವಿರುವ ಅರ್ಜಿಯೊಂದಿಗೆ ಸಹಾಯಧನಕ್ಕಾಗಿ ಬೇಡಿಕೆ ಪತ್ರ ಸಲ್ಲಿಸಬೇಕು. ಸೂಕ್ತ ಸ್ಥಳಾವಕಾಶ ಹೊಂದಿದ ಬಗ್ಗೆ ದಾಖಲಾತಿ ಹಾಗೂ ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು. ಅಲ್ಲದೆ ಪ.ಜಾತಿ, ಪಂಗಡದವರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್, ಪಿಎಲ್ಡಿ ಬ್ಯಾಂಕ್, ಡಿಸಿಸಿ ಬ್ಯಾಂಕಿನ ಸಾಲ ಮಂಜೂರಾತಿ ಬಗ್ಗೆ ಒಪ್ಪಿಗೆ ಪತ್ರ, ತನ್ನ ವಂತಿಗೆ (ಬ್ಯಾಂಕಿನ ಸಾಲದ ಬದಲಾಗಿ) ನೀಡಲು ಬರೆದ ಮುಚ್ಚಳಿಕೆ ಪತ್ರ, ಬ್ಯಾಂಕಿನಿಂದ ಸಹಾಯಧನ ಪಡೆಯಲು ಮುಂಗಡ ರಸೀದಿ (ದ್ವಿಪ್ರತಿಯಲ್ಲಿ), ಇಲಾಖಾ ವತಿಯಿಂದ ಸಹಾಯಧನ ಪಡೆಯಲು ಮುಂಗಡ ರಸೀದಿ(ದ್ವಿಪ್ರತಿಯಲ್ಲಿ) ಹಾಗೂ ಮತ್ತಿತರ ಅಗತ್ಯ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
ಮಾಂಸದ ಕೋಳಿ ಸಾಕಾಣಿಕೆ ಮಾಡಲಿಚ್ಛಿಸುವವರು ಆ. 21 ಹಾಗೂ ಮೊಟ್ಟೆ ಕೋಳಿ ಘಟಕ ಸ್ಥಾಪನೆ ಮಾಡಲಿಚ್ಛಿಸುವವರು ಆ. 23ರೊಳಗಾಗಿ ಆಯಾ ತಾಲೂಕಿನ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಬಳ್ಳಾರಿ- 08392- 276358, ಸಿರುಗುಪ್ಪ- 08396-220336, ಸಂಡೂರು- 08395 260338, ಹೊಸಪೇಟೆ- 08394- 227320, ಹಗರಿಬೊಮ್ಮನಹಳ್ಳಿ- 08397- 238352, ಹಡಗಲಿ-08399- 240314, ಕೂಡ್ಲಿಗಿ-08391- 220371ಗೆ ಸಂಪರ್ಕಿಸಬಹುದು ಎಂದು ಇಲಾಖೆ ಉಪನಿರ್ದೇಶಕ ಡಾ. ಜಿ. ಪಂಪಾಪತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

