ಬಳ್ಳಾರಿ

ಕಾಮಗಾರಿಗಳಿಲ್ಲದೆ ಡ್ರಾ ಆಯ್ತು ಹಣ!

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಆ. 20
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕುಡಿಯುವ ನೀರು ಶೌಚ ಸೇರಿ ಇತರ ಮೂಲ ಸೌಲಭ್ಯಗಳಿಗೆ ಕೋಟ್ಯಂತರ ರು. ವ್ಯಯ ಮಾಡಿದೆ. ಆದರೆ ತಾಲೂಕಿನಲ್ಲಿ ಕಾಮಗಾರಿಯಾಗದೇ ಬಿಲ್ ಡ್ರಾ ಆಗಿದ್ದು, ಸರ್ಕಾರದ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡಿದೆ.
ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ನಳದ ನೀರು ಸರಬರಾಜು ಯೋಜನೆಯ ಭಾರತ್ ನಿರ್ಮಾಣ ಯೋಜನೆಯಡಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಸಂಪು ಹಾಗೂ ಟ್ಯಾಂಕ್, ಮೋಟಾರ್ ಅಳವಡಿಕೆ ಮಾಡಿ ಆ ಮೂಲಕ ಮಕ್ಕಳಿಗೆ ನಳ ನೀರು ಒದಗಿಸಬೇಕೆಂದು ಸರ್ಕಾರದ ಆಶಯ.
ರು. 57.30 ಲಕ್ಷ ಬಿಲ್: ಇದಕ್ಕಾಗಿ 2008-09ನೇ ಸಾಲಿನಲ್ಲಿ ತಾಲೂಕಿನ 100 ಅಂಗನವಾಡಿ ಕೇಂದ್ರ ಮತ್ತು 91 ಶಾಲೆಗಳನ್ನು ಆಯ್ಕೆ ಮಾಡಿ ತಲಾ ರು. 30 ಸಾವಿರ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ಕುಡಿವ ನೀರಿನ ಸಂಪು ನಿರ್ಮಾಣ, ಸಿಂಟ್ಯಾಕ್ಸ್ ಹಾಗೂ ಮೋಟಾರ್ ಅಳವಡಿಕೆ ಮಾಡದೇ ಸುಮಾರು ರು. 57.30 ಲಕ್ಷ ಬಿಲ್ ಆಗಿದೆ. ಈ ಹಿಂದೆ ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಇಒ ಹಾಗೂ ತಾಪಂ ಸದಸ್ಯರು ಅಧಿಕಾರಿಗಳ ಜತೆಗೆ ಚೆರ್ಚೆಯಾಗಿತ್ತು, ಸಂಬಂಧಿಸಿದ ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಕ್ಕೆ ಈವರೆಗೂ ಪಂಚಾಯತ್ ರಾಜ್ ಇಲಾಖೆ ಎಇಇಯಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ಸಂಶಯ ಕಾಡುತ್ತಿದೆ.
ನೀರಿಗಾಗಿ ಪರದಾಟ: ತಾಲೂಕಿನ ಅಂಗನವಾಡಿ ಕೇಂದ್ರ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕಾಮಗಾರಿ ನಡೆದಿರುವ ಗುರುತು ಕೂಡ ಇಲ್ಲ. ಕೆಲವಡೆ ಸಂಪು ನಿರ್ಮಾಣವಾಗಿದ್ದರೆ, ಇನ್ನು ಕೆಲವಡೆ ಮೋಟಾರ್ ಅಳವಡಿಸಿಲ್ಲ, ಸಿಂಟ್ಯಾಕ್ಸ್‌ಗಳು ಕಣ್ಮರೆಯಾಗಿವೆ, ನಳಗಳ ಸಂಪರ್ಕಗಳಿಲ್ಲದೆ ಮಕ್ಕಳು ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಯೋಜನೆಯ ನಿಯಮಗಳನ್ನು ಗಾಳಿಗೆ ತೋರಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಶಾಲಾ ಮುಖ್ಯಗುರುಗಳ ವರದಿ ಆಧಾರದ ಮೇಲೆ ಇಲಾಖೆಯಿಂದ ಬಿಲ್ ಪಾಸ್ ಮಾಡಿದ್ದಾರೆ. ಆದರೆ ಯೋಜನೆಯಿಂದ ಕಾಮಗಾರಿಗಳ ಸ್ಥಿತಿಗತಿಗಳೇನು? ಕಾಮಗಾರಿ ಪೂರ್ಣಗೊಂಡಿದಿಯೇ? ಹೇಗೆ? ಎಂಬುದನ್ನು ಪರಿಶೀಲಿಸದೆ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಿದ್ದಾರೆ.
ಚರ್ಚೆಗೆ ಗ್ರಾಸ: ಭಾರತ್ ನಿರ್ಮಾಣ ಕುಡಿವ ನೀರು ಯೋಜನೆಯ ಅವ್ಯವಹಾರ ಕುರಿತು ತಾಪಂ ಸಾಮಾನ್ಯ ಸಭೆಯಲ್ಲಿ ಅನೇಕ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಅವ್ಯವಹಾರ ಕುರಿತು ಮೇಲಧಿಕಾರಿಗಳು ಈವರೆಗೂ ತನಿಖೆಗೆ ಮುಂದಾಗಿಲ್ಲ. ತಾಲೂಕಿನ ಯಾವ ಅಂಗನವಾಡಿ ಕೇಂದ್ರಗಳಲ್ಲಿ ಸಂಪು ನಿರ್ಮಾಣವಿಲ್ಲ, ಮೋಟಾರ್ ಇದ್ದರೂ ನಳಕ್ಕೆ ಸಂಪರ್ಕ ಇಲ್ಲ. ಸಿಂಟ್ಯಾಕ್ಸ್‌ಗಳಿವೆ ಆದರೆ ಅವುಗಳಲ್ಲಿ ನೀರಿಲ್ಲ. ಈ ಕುರಿತು ಜಿಪಂ ಇಲಾಖೆಗೆ ಅನೇಕ ಬಾರಿ ಪತ್ರ ವ್ಯವಹಾರ ಮಾಡಿದ್ದರೂ ಯಾವ ಪ್ರಯೋಜನವಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಗುತ್ತಿಗೆದಾರರು ಕಾಮಗಾರಿಗಳನ್ನು ಹಸ್ತಾಂತರ ಮಾಡಿದ್ದಾರೆಂದು ಜಿಪಂ ಅಧಿಕಾರಿಗಳು ಹೇಳುತ್ತಾರೆ. ಯೋಜನೆಗಿರುವ ನಿಯಮಗಳ ಪಾಲನೆಯಾಗಿಲ್ಲ ನೇರವಾಗಿ ಸಿಡಿಪಿಒ ಕಚೇರಿಗೆ ಹಸ್ತಾಂತರಿಸಬೇಕಿತ್ತು ಎನ್ನುತ್ತಾರೆ ಸಿಡಿಪಿಒ ಎ.ಎಂ. ಅಸ್ತಿರ್.
ತಾಲೂಕಿನ 91 ಶಾಲೆಗಳಲ್ಲಿ ಕಾಮಗಾರಿ ಆಗಿದೆ ಎಂಬ ಮಾಹಿತಿ ಇದೆ. ಆದರೆ ಕಾಮಗಾರಿಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ನಂತರ ಕಾಮಗಾರಿ ನಡೆಯದಿದ್ದರೆ ಅದಕ್ಕೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ಬಿಇಒ ಬಿ. ವಿಜಯಕುಮಾರ.

ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.