ಚಿಲವಾರಬಂಡಿ ಏತನೀರಾವರಿಗೆ ಅಸ್ತು
ಹಗರಿಬೊಮ್ಮನಹಳ್ಳಿ: ಸುಮಾರು ಐದು ಸಾವಿರಕ್ಕೂ ಅಧಿಕ ಎಕರೆ ಒಣಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಚಿಲವಾರಬಂಡಿ ಏತನೀರಾವರಿ ಯೋಜನೆಗೆ ಆ. 16ರಂದು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಶಾಸಕ ಎಸ್. ಭೀಮಾನಾಯ್ಕ ತಿಳಿಸಿದರು.
ಹಗರಿಬೊಮ್ಮನಹಳ್ಳಿ ತಾಪಂನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದಿಂದ ಮಂಜೂರಾಗಿರುವ ಪತ್ರವನ್ನು ಬಿಡುಗಡೆಗೊಳಿಸಿ, ಆಡಳಿತಾತ್ಮಕ ಮಂಜೂರಾತಿ ಸಿಗದಿದ್ದರೂ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಗೆ ಕೆಲವೇ ದಿನ ಬಾಕಿ ಇರುವಾಗಲೆ ಕ್ಷೇತ್ರದ ಅಂದಿನ ಶಾಸಕ ನೇಮಿರಾಜ ನಾಯ್ಕ ಅಧಿಕಾರಿಗಳ ಮೇಲೆ ಒತ್ತಡ ತಂದು, ಸರ್ಕಾರ ಅನುಮೋದನೆ ನೀಡಿದೆ ಎಂದು ಸುಳ್ಳು ಹೇಳಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಇದು ಕಾನೂನುಬಾಹಿರ ಎಂದು ಆರೋಪಿಸಿ, ಅನುಮೋದನೆ ಇಲ್ಲದ ಯೋಜನೆಗೆ ಭೂಮಿಪೂಜೆ ನೆರವೇರಿಸಿರುವುದನ್ನು ತನಿಖೆಗೆ ಒಳಪಡಿಸಿದರೆ ಇದಕ್ಕೆ ಸಹಕರಿಸಿದ ಸಾಕಷ್ಟು ಅಧಿಕಾರಿಗಳು ಮನೆಗೆ ಹೋಗುತ್ತಾರೆ ಎಂದರು.
ಎಲೆಕ್ಷನ್ ಸ್ಟಂಟ್: ಮಂಜೂರಾತಿ ಸಿಗದಿರುವ ಯೋಜನೆಗೆ ಭೂಮಿಪೂಜೆ ನೆರವೇರಿಸಿರುವುದು ಎಲೆಕ್ಷನ್ ಸ್ಟಂಟ್ ಹೊರತು ಬೇರೇನೂ ಇಲ್ಲ. ನೇಮಿರಾಜ ನಾಯ್ಕರನ್ನು ಸೋಲಿಸುವ ಮೂಲಕ ಈ ಚುನಾವಣೆ ಗಿಮಿಕ್ಗೆ ತಕ್ಕ ಉತ್ತರವನ್ನೆ ಕ್ಷೇತ್ರದ ಜನತೆ ನೀಡಿದ್ದಾರೆ. ಎಸ್ಇಪಿ- ಎಸ್ಟಿಪಿ ಯೋಜನೆಯಡಿ ನೀರಾವರಿ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಕ್ಷೇತ್ರದ ಜನತೆ ಲಿಖಿತ ಹಾಗೂ ಮೌಖಿಕವಾಗಿ ನನಗೆ ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಜನತೆ ಮಾಡಿರುವ ಆರೋಪದ ಬಗ್ಗೆ ಸತ್ಯಾಸತ್ಯತೆ ಅರಿಯುವ ಸಲುವಾಗಿ ಸಂಬಂಧಿಸಿದ ಇಲಾಖೆಯಿಂದ 3ನೇ ವ್ಯಕ್ತಿಯಿಂದ ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಬಳಿಕ 2ನೇ ಹಂತದ ಕಾಮಗಾರಿಗಳನ್ನು ಆರಂಭಿಸಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ನೇಮಿರಾಜ ಜೈಲಿಗೆ ಹೋಗುತ್ತಾರೆ: ನೇಮಿರಾಜ ನಾಯ್ಕ ಶಾಸಕರಾಗಿದ್ದ ಅವಧಿಯಲ್ಲಿ ಬಸವ ವಸತಿ, ಕೆರೆ ಅಭಿವೃದ್ಧಿ, ಮುಖ್ಯಮಂತ್ರಿ ಪರಿಹಾರಧನ, ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳ ಜಾರಿಯಲ್ಲಿ ಅವರ ಕುಮ್ಮುಕ್ಕಿನಿಂದಲೆ ವ್ಯಾಪಕ ಅವ್ಯವಹಾರ ನೆಡೆದಿವೆ. ಕಾಮಗಾರಿ ಜಾರಿ ಬಗ್ಗೆ ನಾನು ಲೋಕಾಯುಕ್ತ ತನಿಖೆಗೆ ದೂರು ನೀಡುವುದಾಗಿ ಈಗ ಮಾಜಿ ಶಾಸಕರು ಹೇಳುತ್ತಿದ್ದಾರೆ. ಮೊದಲು ಅವರು ಯಾವುದರ ಬಗ್ಗೆ ತನಿಖೆಗೆ ದೂರು ನೀಡುತ್ತಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು. ಕಳೆದ 5 ವರ್ಷದಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತಂತೆ ತನಿಖೆ ನಡೆಸಿದರೆ ಸಾಕು ನೇಮಿರಾಜ ನಾಯ್ಕ ಜೈಲಿಗೆ ಹೋಗುತ್ತಾರೆ ಎಂದು ತಿರುಗೇಟು ನೀಡಿದರು.
ಪಕ್ಷದ ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

