ಸುಕ್ಷೇತ್ರ ಮೈಲಾರ ಸಮಗ್ರ ಅಭಿವೃದ್ಧಿ: ಭರವಸೆ
ಹೂವಿನಹಡಗಲಿ: ಸುಕ್ಷೇತ್ರ ಮೈಲಾರ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಭರವಸೆ ನೀಡಿದರು.
ತಾಲೂಕಿನ ಸುಕ್ಷೇತ್ರ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ದೇವಸ್ಥಾನ ಆವರಣದಲ್ಲಿ ರು. 42 ಲಕ್ಷ ವೆಚ್ಚದ ನೆರಳಿನ ವ್ಯವಸ್ಥೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಭಕ್ತರಿಂದ ಸಂಗ್ರಹವಾಗಿರುವ ರು. 1.47 ಕೋಟಿ ದೇಣಿಗೆ ಹಣವನ್ನು ದೇವಸ್ಥಾನ ಆಡಳಿತ ಮಂಡಳಿಯು ಮೂಲ ಸೌಕರ್ಯಕ್ಕೆ ಬಳಸುವಂತೆ ಅವರು ಸಲಹೆ ನೀಡಿದರು.
ಎಕ್ಕುಂಬಿ-ಮೊಳಕಾಲ್ಮೂರು ರಸ್ತೆ ಅಭಿವೃದ್ಧಿಗೆ ರು. 1 ಕೋಟಿ, ಮೈಲಾರ-ತೋರಣಗಲ್ಲು ರಸ್ತೆಗೆ ರು. 18 ಕೋಟಿ ಮಂಜೂರಾಗಿದೆ. ಮುಂಬರುವ ಮೈಲಾರ ಜಾತ್ರೆಗೆ ಮುನ್ನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ತುಂಗಭದ್ರಾ ನದಿಯಿಂದ ಶಾಶ್ವತ ಕುಡಿವ ನೀರು ಪೂರೈಕೆಗೆ ಕ್ರಿಯಾ ಯೋಜನೆ ಸಿದ್ಧವಾಗಿದೆ. ಕ್ಷೇತ್ರ ವ್ಯಾಪ್ತಿಯ ಹಗರಿಬೊಮ್ಮನಹಳ್ಳಿ ತಾಲೂಕಿನ 13 ಹಳ್ಳಿಗಳ ಸಂಯುಕ್ತ ಕುಡಿವ ನೀರಿನ ಯೋಜನೆಗೆ ರು. 24.25 ಕೋಟಿ ಮಂಜೂರಾಗಿದೆ ಎಂದ ಅವರು, ಕ್ಷೇತ್ರದಲ್ಲಿ ಸಂಯುಕ್ತ ಕುಡಿವ ನೀರಿನ ಯೋಜನೆಗಳ ಅನುಷ್ಠಾನಕ್ಕೆ ಸಿಎಂ ಹಾಗೂ ಪಂಚಾಯತ್ ರಾಜ್ ಸಚಿವರು ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಿದರು.
ಮೈಲಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಹಿತ ಕಾಪಾಡಲು ಮೈಲಾರ ಕೆಇಬಿ ಗ್ರಿಡ್ನ್ನು ಮೇಲ್ದರ್ಜೆಗೇರಿಸಿ ಈಗಿನ 33 ಕೆವಿ ಸ್ಟೇಷನ್ ಬದಲಾಗಿ 110 ಕೆವಿ ಸ್ಟೇಷನ್ ಸ್ಥಾಪಿಸಲಾಗುವುದು. ಶೀಘ್ರದಲ್ಲೇ ಕಾರ್ಯಗತವಾಗುವುದು. ಗಿರಿಯಾಪುರ ಕೆಇಬಿ ಸ್ಟೇಷನ್ಗೆ ಅಗತ್ಯವಿರುವ ಸಲಕರಣೆ ಪೂರೈಕೆಯಾಗುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಮಾತನಾಡಿ, ಮೈಲಾರ ಮೂಲ ಸೌಕರ್ಯಕ್ಕಾಗಿ ಸರ್ಕಾರವು ರು. 5 ಕೋಟಿ ಅನುದಾನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಎಂ.ಪರಮೇಶ್ವರಪ್ಪ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ಜಿಪಂ ಮಾಜಿ ಸದಸ್ಯ ಜಿ. ಬಸವನಗೌಡ, ಕೋಡಿಹಳ್ಳಿ ಮುದುಕಪ್ಪ, ಸಿ. ಚಾಂದಸಾಹೇಬ್, ಅಟವಾಳಗಿ ಕೊಟ್ರೇಶ, ಪ್ರಕಾಶ್ ಒಡೆಯರ್, ಗ್ರಾಪಂ ಅಧ್ಯಕ್ಷ ಚನ್ನಬಸವನಗೌಡ, ತಾಪಂ ಮಾಜಿ ಅಧ್ಯಕ್ಷ ಎಂ. ನರೇಂದ್ರ, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಬಸವನಗೌಡ, ಎಪಿಎಂಸಿ ನಿರ್ದೇಶಕ ಹನುಮಂತಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಬಾಹುಬಲಿ ಪಾಟೀಲ್, ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಸುತಗುಂಡಿ ಇತರರಿದ್ದರು. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎನ್.ಎಚ್. ರವೀಂದ್ರ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

