ಹಾಲಪ್ಪಯ್ಯನಮಠ ಜೀರ್ಣೋದ್ಧಾರ ಯಾವಾಗ?
ಕನ್ನಡಪ್ರಭ ವಾರ್ತೆ, ಕನಕಗಿರಿ, ಆ. 28
ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಿದ್ಧ ಕನಕಗಿರಿಯಲ್ಲಿ ತ್ರಿಮೂರ್ತಿ ಪವಾಡ ಪುರುಷರು ಜೀವಂತ ಸಮಾಧಿಯಾಗಿದ್ದಾರೆ. ಹಾಗಾಗಿ, ಮೂರು ಅಗಸಿ ಊರು, ಆರು ಚಕ್ರದ ತೇರು, ಹಾಗೂ ಮೂರು ನದಿಗಳ ಸಂಗಮ, ಮೂರು ನಾಮದ ದೇವರೆಂಬ ಈ ಭಾಗದ ನಾಣ್ಣುಡಿ ಇಂದಿಗೂ ಪ್ರಚಲಿತದಲ್ಲಿದೆ.
ಮೂವರು ಜೀವಂತ ಸಮಾಧಿಯಾದವರಲ್ಲಿ ಹಾಲಪ್ಪ ಸ್ವಾಮೀಜಿಗಳೂ ಒಬ್ಬರು. ತಮ್ಮ ಪವಾಡಗಳಿಂದ ರೋಗಗಳ ಹರಡುವಿಕೆ ತಡೆಗಟ್ಟಿದ ಮಹಾನ್ ಪುರುಷರಿವರು. ಇಂತಹ ಪವಾಡ ಪುರುಷರ ಮಠ ಈಗ ಶಿಥಿಲಾವಸ್ಥೆಯಲ್ಲಿದೆ. ಪವಿತ್ರತೆ ಹೊಂದಿರಬೇಕಾಗಿದ್ದ ಮಠ ಶೌಚಾಲಯವಾಗಿ ಮಾರ್ಪಟ್ಟಿದೆ.
ಇಲ್ಲಿನ 7ನೇ ವಾರ್ಡಿನ ಹಾಲಪ್ಪಯ್ಯನ ಮಠ ಜಾಗ್ರತ ಪವಾಡ ಶಕ್ತಿಗೆ ಪ್ರಸಿದ್ಧಿಯಾಗಿದೆ. ಉಪನಯನ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಈ ಮಠದಲ್ಲಿ ಗುರುಕುಲ ಪ್ರಾರಂಭಿಸದ್ದಲ್ಲದೇ, ಸಕಲರಿಗೂ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸಿ ನೂರಾರು ಜನರಿಗೆ ದೀಕ್ಷೆ ಕೊಟ್ಟು ಪವಾಡಗಳನ್ನು ಧಾರೆಯೆರೆದ ಮಹಾ ಜನಕರ ಮಠ ಎಂಬ ಇತಿಹಾಸವಿದೆ.
ಚಾರಿತ್ರಿಕ ಪುರುಷರಾದ ಹಾಲಪ್ಪ ಸ್ವಾಮಿಗಳು ಮೂಲತಃ ಮೈಸೂರು ಜಿಲ್ಲೆಯವರು. ನಂತರ ಪಕ್ಕದ ಬಳ್ಳಾರಿ ಜಿಲ್ಲೆಯ ಹಡಗಲಿ, ಕಂಪ್ಲಿ ಪಟ್ಟಣಗಳಲ್ಲಿ ನೆಲೆಸಿ ಧಾರ್ಮಿಕ ಭಾವನೆಯನ್ನು ಮೂಡಿಸಿದ್ದರು. ಕ್ರಿ.ಶ. 1885ರ ಸುಮಾರಿಗೆ ಕನಕಗಿರಿ ಗ್ರಾಮಕ್ಕೆ ಆಗಮಿಸಿ ಸನ್ಯಾಸಿ ದೀಕ್ಷೆ ಪಡೆದು ಇಲ್ಲಿಯೇ ನೆಲೆಸಿದರು.
ಆಧ್ಯಾತ್ಮಿಕತೆಯ ನೂರಾರು ಶಿಷ್ಯಂದಿರಲ್ಲಿ ನೀರಲಕೇರಿ ಬಸವಲಿಂಗಪ್ಪ ತಾತ ಒಬ್ಬರು. ಸ್ವಾಮಿಗಳು ಜಠ-ಜೂಟ ದಾರಿಗಳಾಗಿದ್ದೂ, ದಿನನಿತ್ಯ ಹಸುವಿನ ಹಾಲನ್ನೆ ಸೇವಿಸುತ್ತಿರುವುದರಿಂದ ಭಕ್ತರು ಇವರಿಗೆ ಹಾಲಪ್ಪಯ್ಯಸ್ವಾಮಿ ಎಂದು ಕರೆಯುತ್ತಿದ್ದರು. ಸಚ್ಚಿದಾನಂದ ಅವಧೂತರು ಹಾಗೂ ವಿರಕ್ತ ಮಠದ ಶ್ರೀಗುರು ರುದ್ರಮುನಿ ಮಹಾಸ್ವಾಮಿಗಳಂತೆ ಇವರೂ ಜೀವಂತ ಸಮಾಧಿಯಾಗಿದ್ದಾರೆ. ಈ ತ್ರಿಮೂರ್ತಿಗಳ ಪವಾಡಗಳು ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿವೆ.
ಈ ಮೊದಲು ಶ್ರಾವಣ ಮಾಸದಲ್ಲಿ ನಿತ್ಯ ಅಭಿಷೇಕ, ಭಜನೆ, ನಾನಾ ಪೂಜಾ ಕೈಂಕರ್ಯಗಳು, ಶಂಕು, ನಗಾರಿಗಳ ನಿನಾದ ಗ್ರಾಮದ ತುಂಬೆಲ್ಲ ಕೇಳಿಸುತ್ತಿತ್ತು. ಊರ ಜಂಗಮರ ಓಣಿಯಲ್ಲಿರುವ ಈ ದೇವಾಲಯಕ್ಕೆ ಪೂಜೆ ಇಲ್ಲದೆ ಭಕ್ತರಿಗೆ ಮುಜುಗರ ಉಂಟಾಗಿದೆ. ಶ್ರಾವಣ ಮಾಸದಲ್ಲಿ ಹಿರೇಹಳ್ಳದ ಬಸವೇಶ್ವರ ಜಾತ್ರೆಯಲ್ಲಿ ನಂದಿಕೋಲನ್ನು ಇರಿಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಹಾಲಪ್ಪಯ್ಯನ ಮಠ ಶಿಥಿಲಾವಸ್ಥೆ ತಲುಪಿದ್ದರಿಂದ ನಂದಿಕೋಲನ್ನು ಬೇರೆಕಡೆಗೆ ವರ್ಗಾಯಿಸಲಾಗಿದೆ.
ಇತ್ತೀಚಿಗೆ ಮಠದ ಅಕ್ಕಪಕ್ಕದ ಮನೆಯಲ್ಲಿ ಮಹಿಳೆಯರಿಗೆ ಇದು ಶೌಚಾಲಯವಾಗಿ ಮಾರ್ಪಟ್ಟಿದೆ. ಇತಿಹಾಸ ಪ್ರಸಿದ್ಧ ಮಠ ಪಾಳುಬಿದ್ದು, ನಶಿಸಿ ಹೋಗುವ ದುಸ್ಥಿಯಲ್ಲಿದೆ. ಇನ್ನು ಮುಂದಾದರೂ ಸಂಬಂಧಪಟ್ಟ ಇಲಾಖೆಯವರು ಹಾಲಪ್ಪನ ಮಠಕ್ಕೆ ಕಾಯಕಲ್ಪ ನೀಡಬೇಕೆನ್ನುವುದು ಪ್ರಜ್ಞಾವಂತರ ಆಶಯವಾಗಿದೆ.
ಸೋಮಶೇಖರಯ್ಯಸ್ವಾಮಿ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

