ಬಳ್ಳಾರಿ

ಎಂ.ಬಿ. ಅಯ್ಯನಹಳ್ಳಿ: ಮೆಕ್ಕೆಜೋಳ ಬೆಳೆ ಕ್ಷೇತ್ರೋತ್ಸವ

Published On :

ಕೂಡ್ಲಿಗಿ: ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಗ್ರಾಮದಲ್ಲಿ ಮಾನ್ಸಂಟೋ ಕಂಪನಿಯ ಡಿಕಾಲ್ಬ್ ಡಿಕೆಸಿ 9126 ತಳಿಯ ಮೆಕ್ಕೆಜೋಳ ಬೆಳೆ ಕ್ಷೇತ್ರೋತ್ಸವ ನಡೆದಿದ್ದು, ಕ್ಷೇತ್ರೋತ್ಸವದಲ್ಲಿ ಅತಿಹೆಚ್ಚು ಇಳುವರಿ ಪಡೆದ ರೈತರನ್ನು ಜಮೀನಿನಲ್ಲಿಯೇ ಸನ್ಮಾನಿಸಲಾಯಿತು. ಕಂಪೆನಿಯ ಬಳ್ಳಾರಿ ಜಿಲ್ಲಾ ಮಾರಾಟಾಧಿಕಾರಿ ಕೊಟ್ರೇಶ್ ಕುಪ್ಪಸದ ಮಾತನಾಡಿ, ಡಿಕಾಲ್ಬ್ ಮೆಕ್ಕೆಜೋಳ ಬೆಳೆ ನೀರಾವರಿ, ಇತರೆ ವಾತಾವರಣದಲ್ಲೂ ಬೆಳೆಯಲು ಸೂಕ್ತವಾಗಿದೆ. ರೋಗ ಸಹಿಷ್ಣುತೆ ಹೊಂದಿದೆ, ತೆನೆಯಲ್ಲಿ ಹೆಚ್ಚು ಕಾಳು ಕಟ್ಟುವ, ಶೇಖರಣೆ ಮಾಡುವ ಸಾಮರ್ಥ್ಯ ಇದ್ದು, ಪ್ರತಿ ಎಕರೆಗೆ ಹತ್ತು ಕಿಲೋ ಸಲ್ಫೇಟ್ ಹಾಗೂ ಲಘು ಪೋಷಕಾಂಶ ಗೊಬ್ಬರ ಬಳಸುವಂತೆ ರೈತರಿಗೆ ಸಲಹೆ ನೀಡಿದರು.
ಪ್ರಗತಿಪರ ರೈತರಾದ ಗೊಲ್ಲರ ಚಿತ್ತಪ್ಪ ಮುಂತಾದವರಿಗೆ ಕಂಪನಿ ವತಿಯಿಂದ ಸನ್ಮಾನಿಸಲಾಯಿತು. ಕಂಪನಿ ಪ್ರತಿನಿಧಿ ಎಂ.ಕೆ. ರಾಘವೇಂದ್ರ, ಟಿ. ತಿಪ್ಪೇಸ್ವಾಮಿ, ಕಿರಣ್‌ಕುಮಾರ್, ಎಂ.ಬಿ. ಅಯ್ಯನಹಳ್ಳಿ ಹಾಗೂ ಸುತ್ತಮುತ್ತಲ ರೈತರು ಹಾಜರಿದ್ದರು.
ಇಂದು ಜಿಲ್ಲೆಯ ವಿವಿಧೆಡೆ ಚಿಗುರು ಕಾರ್ಯಕ್ರಮ
ಬಳ್ಳಾರಿ:  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಡಿಸೆಂಬರ್ 2ರಂದು ಜಿಲ್ಲೆಯ ವಿವಿಧೆಡೆ ಚಿಗುರು ಕಾರ್ಯಕ್ರಮ ಆಯೋಜಿಸಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ  ಬಿ. ನಾಗರಾಜ್ ತಿಳಿಸಿದ್ದಾರೆ.
ಚಿಗುರು ಕಾರ್ಯಕ್ರಮದಲ್ಲಿ ಡಿ. 2ರ ಬೆಳಗ್ಗೆ 11.30ಕ್ಕೆ ಬಳ್ಳಾರಿ ತಾಲೂಕಿನ ಅಲ್ಲೀಪುರ ಶ್ರೀ ಮಹಾದೇವ ತಾತಾನವರ ಮಠದಲ್ಲಿ ಬಳ್ಳಾರಿಯ ಡಬ್ಲ್ಯೂ. ಕೀರ್ತಿಕಾಳಿಂದ ಕೂಚಿಪುಡಿ ನೃತ್ಯ ಹಾಗೂ ಕೂಡ್ಲಿಗಿ ತಾಲೂಕಿನ ಲೋಕಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೋಕಿಕೆರೆಯ ಸಣ್ಣಪಾಲಯ್ಯನಿಂದ ನೃತ್ಯ ರೂಪಕ ನಡೆಯಲಿದೆ.
ಮಧ್ಯಾಹ್ನ 3ಕ್ಕೆ ಕೂಡ್ಲಿಗಿ ತಾಲೂಕು ಖಾನಾಹೊಸಳ್ಳಿಯ ಕಾಳಿದಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುವರಾಜ್ ಬಿ.ಎಸ್. ಜಾನಪದ ನೃತ್ಯ ಹಾಗೂ ಸಂಜೆ 6.30ಕ್ಕೆ ಬಳ್ಳಾರಿ ತಾಲೂಕು ಚೆಳ್ಳಗುರ್ಕಿಯ ಶ್ರೀ ಎರ್ರಿತಾತಾ ದೇವಸ್ಥಾನದ ಆವರಣದಲ್ಲಿ ಚೆಳ್ಳಗುರ್ಕಿಯ ಪಿ.ಎಂ. ಪ್ರೀತಿ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಲ್ಲಲಿ ಅಕ್ರಮ ಕಲ್ಲು ಗಣಿಗಾರಿಕೆ
ಕೂಡ್ಲಿಗಿ ಪಟ್ಟಣದ ಉಜ್ಜಿನಿ ರಸ್ತೆ ಹಾಗೂ ಸಂಡೂರು ರಸ್ತೆಯಲ್ಲಿರುವ ಬೆಟ್ಟಗುಡ್ಡಗಳಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಹಾಡಹಗಲೇ ಕಲ್ಲು ಬ್ಲಾಸ್ಟ್ ಮಾಡುವುದರಿಂದ ಪಟ್ಟಣದಲ್ಲಿ ಮನೆಗಳು ಸಹ ಅಲುಗಾಡುತ್ತವೆ. ಪರಿಸರ ನಾಶದ ಜತೆಗೆ ಧೂಳಿನಿಂದ ಸುತ್ತಲ ಜನತೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಕೂಡ್ಲಿಗಿ ಮತ್ತು ಸುತ್ತಲ ಹಳ್ಳಿಗಳ ಜನತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲು ಮನವಿ ಮಾಡಿದ್ದರೂ ಇದುವರೆಗೆ ಜನತೆಗೆ ನ್ಯಾಯ ದೊರಕಿಲ್ಲ. ಕಲ್ಲು ಗಣಿಗಾರಿಕೆ ಮಾಡಿರುವ ಜಾಗದಲ್ಲಿ ಪಟ್ಟಣ ಬಿಟ್ಟು ಒಂದೆರಡು ಕಿ.ಮೀ. ದೂರದಲ್ಲಿಯೇ ಆಳವಾದ ಪ್ರಪಾತಗಳು ಸೃಷ್ಟಿಯಾಗಿದ್ದು, ಮಳೆಗಾಲದಲ್ಲಿ ನೀರು ನಿಂತರೆ ಮಕ್ಕಳು, ಜನತೆ ಈ ಹೊಂಡಗಳಲ್ಲಿ ಬೀಳುವ ಅಪಾಯವಿದೆ. ಪಟ್ಟಣದ ಸಿದ್ದಯ್ಯನ ಬೆಟ್ಟ ಐತಿಹಾಸಿಕ ಸ್ಥಳವಾಗಿದ್ದು, ಪ್ರಾಕೃತಿಕವಾಗಿ ನಿಸರ್ಗಧಾಮವಾಗಿದೆ. ಆದರೆ ಈ ವಿಶಾಲ ಬೆಟ್ಟದ ಇಳಿಜಾರಿನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಮಾತ್ರ ತಣ್ಣಗೆ ಕುಳಿತಿದ್ದಾರೆ. ಐತಿಹಾಸಿಕ ಸ್ಥಳವಾದ ಸಿದ್ದಯ್ಯನ ಬೆಟ್ಟ ಈ ಭಾಗದವರಿಗೆ ಧಾರ್ಮಿಕ ಹಾಗೂ ಪ್ರಾಕೃತಿಕ ತಾಣವಾಗಿದೆ. ಈ ಬೆಟ್ಟದ ಸೌಂದರ್ಯ ಉಳಿಯಬೇಕಾದರೆ ಇಲ್ಲಿರುವ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುವುದನ್ನು  ತಡೆಯಬೇಕಿದೆ. ಸಿದ್ದಯ್ಯನ ಬೆಟ್ಟಕ್ಕೆ ಸುತ್ತಲೂ ಹದ್ದುಬಸ್ತು ಮಾಡಿ ಈ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ನಿಲ್ಲಿಸಲು ಸ್ಥಳೀಯಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಕಾರ್ಯ ಮಾಡದಿದ್ದಲ್ಲಿ ಕೂಡ್ಲಿಗಿ ನಾಗರಿಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಆಶ್ರಯದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ರೋಗ
ಜನತೆಯ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಹೊತ್ತಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಒಳ ಆವರಣದಲ್ಲಿನ ಅರ್ಧಂಬರ್ಧ ನಿರ್ಮಾಣದ ಕಟ್ಟಡಗಳು ಹಂದಿ, ನಾಯಿ, ಕತ್ತೆಗಳ ವಾಸ ಸ್ಥಳವಾಗಿ ರೋಗ ಹರಡುವ ತಾಣಗಳಾಗಿವೆ.
ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ವಾಸಕ್ಕೆಂದು ಸೋನಿಯಾ ಪ್ಯಾಕೇಜ್‌ನಡಿ 2000-01ರಲ್ಲಿ ಕಟ್ಟಡಗಳನ್ನು ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಪರಿಪೂರ್ಣ ರೀತಿಯಲ್ಲಿ ಕಟ್ಟಡಗಳನ್ನು  ಗುತ್ತಿಗೆದಾರರು ಸಂಪೂರ್ಣಗೊಳಿಸದೆ ಇದ್ದ ಕಾರಣದಿಂದಾಗಿ ಆರೋಗ್ಯ ಇಲಾಖೆ ಈ ಯಾವ ಕಟ್ಟಡಗಳನ್ನು ಬಳಸಿಕೊಳ್ಳಲು ಮುಂದಾಗದೇ ಖಾಲಿ ಬಿಟ್ಟಿದೆ. ಖಾಲಿ ಇರುವ ಈ ಕಟ್ಟಡಗಳನ್ನು ತ್ಯಾಜ್ಯ ವಸ್ತುಗಳನ್ನು ಬಿಸಾಡುವುದಕ್ಕೆ ಇಲ್ಲಿನ ನಿವಾಸಿಗಳು ಬಳಸಿಕೊಳ್ಳತೊಡಗಿದ್ದಾರೆ. ಇದರ ಪರಿಣಾಮ ಪರಿಸರ ಸಂಪೂರ್ಣ ಹಾಳಾಗಿದೆ. ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಸಂಪೂರ್ಣ ನೈರ್ಮಲ್ಯ ವಾತಾವರಣ ಎಂಬುದು ಕಾಣೆಯಾಗಿದೆ. ನಿಜಕ್ಕೂ ಜನಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸದೆ ಇರುವುದು ಇಂತಹ ವಾತಾವರಣದ ದುಸ್ಥಿತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇಡೀ ವಾತಾವರಣ ಸೊಳ್ಳೆ ಮತ್ತಿತರ ಕೀಟಗಳು ಸೃಷ್ಟಿಯಾಗಲು ಹೇಳಿ ಮಾಡಿಸಿದ ಸ್ಥಳವಾಗಿದೆ. ಈಗಲಾದರೂ ಸಂಬಂಧಪಟ್ಟವರು ಗಮನ ಹರಿಸಬೇಕು.
ಸ್ಥಳೀಯ ನಿವಾಸಿಗಳು
ದೀಪದ ಕೆಳಗೆ ಕತ್ತಲು...
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮ ತುಂಗಭದ್ರಾ ಜಲಾಶಯದ ಪಕ್ಕದಲ್ಲಿದ್ದರೂ ಈ ಗ್ರಾಮಕ್ಕೆ 5-6 ದಿನಕ್ಕೆ ಕುಡಿಯುವ ನೀರನ್ನು ಬಿಡುತ್ತಿರುವುದರಿಂದ ದೀಪದ ಬುಡದಲ್ಲಿ ಕತ್ತಲು ಎನ್ನುವಂತಾಗಿದೆ ಜನಜೀವನ.
ಜಲಾಶಯ ನಿರ್ಮಾಣಕ್ಕಾಗಿ ನಾರಾಯಣದೇವರ ಕೆರೆಯನ್ನು ಬಿಟ್ಟು ಮರಿಯಮ್ಮನಹಳ್ಳಿಗೆ ಬಂದು ನೆಲಸಿದ ಜನರಿಗೆ ಜಲಾಶಯ ನಿರ್ಮಾಣವಾಗಿ ಸುಮಾರು 60 ವರ್ಷ ಕಳೆದರೂ ಸಮರ್ಪಕ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ.
10 ವರ್ಷಗಳ ಹಿಂದೆ ಸಮುದಾಯ ಆಧಾರಿತ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅಂದಿನ ಶಾಸಕ ಶಿರಾಜ್ ಶೇಖ್ ರೂಪಿಸಿ, ಹನುಮನಹಳ್ಳಿ ಗ್ರಾಮದಲ್ಲಿ ಶುದ್ಧೀಕರಣ ಘಟಕ ನಿರ್ಮಿಸಿದ್ದರು. ಉನಂತರ ಅನಿಲ್ ಲಾಡ್ ಅಧಿಕಾರವಧಿಯಲ್ಲಿ ಸಮರ್ಪಕ ನೀರು ದೊರೆಯಲಿಲ್ಲ. ತದನಂತರ ಬಂದ ಸ್ಥಳೀಯರೆ ಆದ ಕೆ. ನೇಮಿರಾಜ್ ನಾಯ್ಕ ಅವಧಿಯಲ್ಲೂ ಜನತೆಗೆ ಶುದ್ಧ ಆ ಯೋಜನೆಯಿಂದ ನೀರು ಕುಡಿಯುವ ಭಾಗ್ಯ ಸಿಗಲಿಲ್ಲ. ಹಾಲಿ ಶಾಸಕ ಭೀಮಾನಾಯ್ಕ ಆಯ್ಕೆಯಾಗಿ 6 ತಿಂಗಳಾದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ.
ಗ್ರಾಪಂನವರು ಕೆಲ ಬಾರಿ 10-12 ದಿನಗಳಿಗೊಮ್ಮೆ ನೀರು ಬಿಡುತ್ತಾರೆ. 10-12 ದಿನಗಳ ಕಾಲ ಜನರು ನೀರನ್ನು ಯಾವ ರೀತಿ ಸಂಗ್ರಹಿಸಿಟ್ಟುಕೊಳ್ಳಬೇಕು? ಮತ್ತೆ ನೀರು ಬಿಡುವವರೆಗೆ ಕುಡಿಯಲು ನೀರು ಬೇಕಾದರೆ ಕಿ.ಮೀ. ದೂರ ಅಲೆಯಬೇಕು. ಈಗಲೂ ಮರಿಯಮ್ಮನಹಳ್ಳಿಯ 3ನೇ ವಾರ್ಡ್‌ಗೆ ಇಲ್ಲವೆ ಅಯ್ಯನಹಳ್ಳಿಗೆ ಹೋಗಿ ನೀರು ತಂದು ಕುಡಿಯುವ ಸ್ಥಿತಿ ಜನತೆಗೆ ಬಂದೊದಗಿದೆ.
ನೀರು ಬಿಡುವಾಗ ಸಹ ಸ್ಥಳೀಯ ಗ್ರಾಪಂನ ನೀರುಗಂಟಿಗಳು ವಾರ್ಡ್‌ಗಳಿಗೆ ಸಮರ್ಪಕ ನೀರು ಬಿಡುತ್ತಿಲ್ಲ. ಇನ್ನು ಹಬ್ಬ ಜಾತ್ರೆಗಳು ಬಂದರೆ ನೀರಿಗಾಗಿ ಜನರ ಪರದಾಟ ಆ ದೇವರಿಗೆ ಪ್ರೀತಿ. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶುದ್ಧ ಕುಡಿಯುವ ನೀರು ಬಿಡುತ್ತಾರಾ?
- ಕೊಟ್ಗಿ ಶಿವಕುಮಾರ್, ಮರಿಯಮ್ಮನಹಳ್ಳಿ ಗ್ರಾಮಸ್ಥ
ಅನುಚಿತ ವರ್ತನೆ ಖಂಡಿಸಿ ಪ್ರತಿಭಟನೆ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಕೆಲ ಸ್ಥಳೀಯರು ವೈದ್ಯರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ ಘಟನೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಶನಿವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಹಳೇ ಸರ್ಕಾರಿ ಆಸ್ಪತ್ರೆಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ತಾಲೂಕು ಕಚೇರಿ ಮುಂದೆ ಬಹಿರಂಗ ಸಭೆ ನಡೆಸಿದರು. ನಂತರ ತಹಸೀಲ್ದಾರ್ ರಮೇಶ್ ಕೋನರೆಡ್ಡಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಮಂಗಳವಾರ ಮಧ್ಯರಾತ್ರಿ ಮರಿಯಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆಂದು ಬಂದಿದ್ದ ಇ. ವೆಂಕಟೇಶ್, ಪಿ. ಉಮೇಶ್ ಎಂಬುವರು ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಮುಂದಾಗಿದ್ದರು.
ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಗುರುಬಸವರಾಜ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ರೇವಣಿಸಿದ್ದಪ್ಪ, ಟಿ.ಕೆ. ವೆಂಕಟೇಶ್ವರರೆಡ್ಡಿ, ರಾಘವೇಂದ್ರ ಹೆಗಡಿಯಾಳ್, ಡಾ. ಶಂಕರ್ ನಾಯ್ಕ, ಡಾ ಮಲ್ಲೇಶ್, ಉಮಾದೇವಿ, ಕಾಳಪ್ಪಗೌಡ, ಬಾಬುರಾವ್, ದೊಡ್ಡಮನಿ, ಧರ್ಮನಗೌಡ, ಪ್ರಸನ್ನ, ಪ್ರಶಾಂತ, ಸುನೀತ, ಶ್ರೀನಿವಾಸ ಕಡ್ಲಿ, ವೀರಭದ್ರೇಶ, ಸುಬ್ಬಾರಾವ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಾಳೆ ಸಾಂಸ್ಕೃತಿಕ ಸೌರಭ
ಬಳ್ಳಾರಿ:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿಸೆಂಬರ್ 3ರಂದು ಸಂಡೂರು ತಾಲೂಕಿನಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಾಗೂ ಕೂಡ್ಲಿಗಿಯಲ್ಲಿ ಯುವ ಸೌರಭ ಕಾರ್ಯಕ್ರಮ ಆಯೋಜಿಸಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ತಿಳಿಸಿದ್ದಾರೆ. ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿ ಡಿ. 3ರ ಮಧ್ಯಾಹ್ನ 3.30ಕ್ಕೆ ಸಂಡೂರು ತಾಲೂಕಿನ ಪ್ರಭುದೇವರ ಜನಕಲ್ಯಾಣ ಸಂಸ್ಥಾನ ವಿರಕ್ತಮಠದಲ್ಲಿ ಹೊಸಪೇಟೆಯ ಸವಿತಾ ಅಮರೇಶ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನಡೆಸಿಕೊಡಲಿದ್ದಾರೆ. ಯುವ ಸೌರಭ ಕಾರ್ಯಕ್ರಮದಡಿ ಸಂಜೆ 7ಕ್ಕೆ ಕೂಡ್ಲಿಗಿ ತಾಲೂಕಿನ ಲೋಕಿಕೆರೆ ಪ್ರಾಥಮಿಕ ಶಾಲೆಯಲ್ಲಿ ಬಿ. ಸುನೀಲ್ ಹಾಗೂ ಖಾನಾಹೊಸಳ್ಳಿಯ ಪ್ರೌಢಶಾಲೆಯಲ್ಲಿ ಬಿ.ಆರ್. ಆಶಾ ಜಾನಪದ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ವೋಲ್ವೋ ಬಸ್ ಆರಂಭ
ಬಳ್ಳಾರಿ: ದಾವಣಗೆರೆ ವಿಭಾಗದ ಶಿವಮೊಗ್ಗ ಘಟಕದಿಂದ ಬಳ್ಳಾರಿಗೆ ನವೆಂಬರ್ 27ರಿಂದ ಕಡಿಮೆ ದರದಲ್ಲಿ ವೋಲ್ವೋ ಸಾರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿದೆ ಎಂದು ದಾವಣಗೆರೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಈ ಬಸ್ ಶಿವಮೊಗ್ಗ- ಚಿತ್ರದುರ್ಗ- ಚಳ್ಳಕೆರೆ- ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲಿದೆ.  ಶಿವಮೊಗ್ಗದಿಂದ ಬಳ್ಳಾರಿಗೆ ರು. 225 ಪ್ರಯಾಣ ದರ ನಿಗದಿಪಡಿಸಲಾಗಿದೆ. ಶಿವಮೊಗ್ಗದಿಂದ ಪ್ರತಿದಿನ ಬೆಳಗ್ಗೆ 7.30ಕ್ಕೆ ಹಾಗೂ ಸಂಜೆ 4 ಗಂಟೆಗೆ ಮತ್ತು ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಬೆಳಗ್ಗೆ 7.30 ಹಾಗೂ ಮಧ್ಯಾಹ್ನ 2.30ಕ್ಕೆ ಹೊರಡಲಿದೆ. ಶಿವಮೊಗ್ಗದಿಂದ ಬಳ್ಳಾರಿಗೆ ಬರುವ ಮಾರ್ಗದಲ್ಲಿ ಚನ್ನಗಿರಿಗೆ ಬೆಳಗ್ಗೆ 8 ಗಂಟೆ ಮತ್ತು ಸಂಜೆ 4.30, ಚಿತ್ರದುರ್ಗಕ್ಕೆ ಬೆಳಗ್ಗೆ 9.45 ಮತ್ತು ಸಂಜೆ 6.15 ಹಾಗೂ ಚಳ್ಳಕೆರೆಗೆ ಬೆಳಗ್ಗೆ 10.15 ಹಾಗೂ ಸಂಜೆ 7 ಗಂಟೆಗೆ ಆಗಮಿಸಲಿದೆ. ಚನ್ನಗಿರಿಯಿಂದ ಬಳ್ಳಾರಿಗೆ ರು. 200, ಚಿತ್ರದುರ್ಗದಿಂದ ಬಳ್ಳಾರಿಗೆ ರು. 130 ಹಾಗೂ ಚಳ್ಳಕೆರೆಯಿಂದ ಬಳ್ಳಾರಿಗೆ ರು. 110 ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರು ಈ ಸಾರಿಗೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜಾಗೃತಿ ಜಾಥಾ
ಬಳ್ಳಾರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕಗಳ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಭಾನುವಾರ ನಡೆದ ಜಾಗೃತಿ ಜಾಥಾಕ್ಕೆ ಜಿಲ್ಲಾ ನ್ಯಾಯಾಧೀಶ ವಿಶ್ವೇಶ್ವರ ಭಟ್ ಚಾಲನೆ ನೀಡಿದರು. ಪವನ್ ಹೋಟೆಲ್, ಶ್ರೀರಾಂಪುರ ಕಾಲೋನಿ, ರೂಪನಗುಡಿ ರಸ್ತೆ, ವಡ್ಡರಬಂಡೆ, ಅಯ್ಯಪ್ಪನಗುಡಿ, ಬೆಂಗಳೂರು ರಸ್ತೆ, ಕಾಳಮ್ಮ ಬೀದಿ, ಮೋತಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಏಡ್ಸ್ ಕುರಿತು ಜಾಗೃತಿ ಮೂಡಿಸಲಾಯಿತು. ಸಿಜೆಎಂ ಎಂ.ಎಚ್. ಶಾಂತಾ, ವಕೀಲರ ಸಂಘದ ಕಾರ್ಯದರ್ಶಿ ರಾಮಕೃಷ್ಣ, ಡಾ. ಎಂ.ಕೆ. ಪಾಟೀಲ್, ಡಾ. ಪಂಪಾಪತಿ, ಡಾ. ವೆಂಕಟೇಶಮೂರ್ತಿ, ಡಾ. ನರಸಿಂಹಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.
ಶಿಕ್ಷಣದ ಉನ್ನತಿಗೆ ಸಹಕಾರ ಅಗತ್ಯ: ತೇನ್‌ಸಿಂಗ್ ನಾಯ್ಕ
ಹಗರಿಬೊಮ್ಮನಹಳ್ಳಿ: ತಾಲೂಕಿನ ಮರಬ್ಬಿಹಾಳ ತಾಂಡಾದ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಕ್ಷೇತ್ರ ಸಮನ್ವಯಾಧಿಕಾರಿ ಡಿ.ಟಿ. ತೇನಸಿಂಗ್ ನಾಯ್ಕ ದಾನಿಗಳನ್ನು ಸನ್ಮಾನಿಸಿ ಮಾತನಾಡಿ,  ಶಿಕ್ಷಣದ ಉನ್ನತಿ ಹಾಗೂ ಶಾಲೆಗಳ ಅಭಿವೃದ್ಧಿಗೆ ಆಯಾ ಗ್ರಾಮಗಳ ಸಮುದಾಯದ ಸಹಕಾರ ಅಗತ್ಯವಿದೆ. ಶೈಕ್ಷಣಿಕ ರಂಗದ ಪ್ರಗತಿಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ನಿರಂತರವಾಗಿರಬೇಕು ಎಂದರು. ಮರಬ್ಬಿಹಾಳ ಕ್ಲಸ್ಟರ್ ಶಿಕ್ಷಕರ ಸಮಾಲೋಚನ ಸಭೆಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ಜ್ಞಾನೇಶ್ವರಯ್ಯ ಉದ್ಘಾಟಿಸಿ, ಮಾತನಾಡಿದರು. ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗೆ ತಟ್ಟೆ, ಲೋಟಗಳನ್ನು ದಾನವಾಗಿ ನೀಡಿದ ಗ್ರಾಪಂ ಉಪಾಧ್ಯಕ್ಷ ಎಲ್. ಥಾವರೆನಾಯ್ಕ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಡಯಟ್ ಉಪನ್ಯಾಸಕ ವೀರೇಶ್, ಸಿಆರ್‌ಪಿ ನಬಿಸಾಬ್, ಗ್ರಾಮದ ಮುಖಂಡ ಲಕ್ಷ್ಮಣ ನಾಯ್ಕ, ಬಡ್ತಿ ಮುಖ್ಯಗುರು ಡಿ. ವಿಶ್ವನಾಥ ಉಪಸ್ಥಿತರಿದ್ದರು. ಶಿಕ್ಷಕ ಎಸ್. ಕೊಟ್ರೇಶ್ ಸ್ವಾಗತಿಸಿದರು. ಕೊಟ್ರೇಶ್ ನಾಯ್ಕ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.