ಕೊಂಡಯ್ಯ ವಿರುದ್ಧ ಆರೋಪ ಸುಳ್ಳು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 7
ಕೆ.ಸಿ. ಕೊಂಡಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡಿ, ಅವರ ತೇಜೋವಧೆ ಮಾಡಲು ಹೊರಟಿರುವ ಆಂಜನೇಯಲು ಹಾಗೂ ಶಾಸಕ ಅನಿಲ್ ಲಾಡ್ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಹೈಕಮಾಂಡ್ಗೆ ರಾಜ್ಯ ನೇಕಾರರ ಸಮುದಾಯದ ಒಕ್ಕೂಟದಿಂದ ಮನವಿ ಮಾಡಲಾಗುವುದು. ಈ ಕುರಿತು ಹೈಕಮಾಂಡ್ಗೆ ಪತ್ರ ಬರೆಯಲಾಗುತ್ತದೆ, ಅಲ್ಲದೆ ಬಳ್ಳಾರಿಯಲ್ಲಿ ಡಿ. 9ರಂದು ಸಮಾಜದಿಂದ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ನೇಕಾರ ಸಮುದಾಯ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ದೇವಾನಂದ್ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಂಡಯ್ಯ ಹಾಗೂ ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಕುರಿತು ಕೆಪಿಸಿಸಿ ಹಾಗೂ ಹೈಕಮಾಂಡ್ಗೆ ಕಾಂಗ್ರೆಸ್ ಜಿಲ್ಲಾ ಘಟಕಾಧ್ಯಕ್ಷ ಆಂಜನೇಯಲು ನೀಡಿರುವ ವರದಿ ಸುಳ್ಳಿನಿಂದ ಕೂಡಿದೆ. ಕೊಂಡಯ್ಯನವರು ರಾಜಕೀಯ ಜೀವನದಲ್ಲಿ ತಪ್ಪು ಮಾಡಿಲ್ಲ, ಅವರನ್ನು ರಾಜಕೀಯವಾಗಿ ತೇಜೋವಧೆ ಮಾಡುವ ಪ್ರಯತ್ನ ಇದಾಗಿದೆ ಎಂದರು.
ತುಳಿಯುವ ಯತ್ನ: ನೇಕಾರರ ಸಂಘ ರಾಜಕೀಯ, ಆರ್ಥಿಕ ಹಾಗೂ ಸಮಾಜಿಕವಾಗಿ ಹಿಂದುಳಿದಿದ್ದು, ಸಮಾಜದ ಕೊಂಡಯ್ಯನವರಿಗೆ ಈಗಾಗಲೇ ವಿಧಾನಸಭೆ ಟಿಕೆಟ್ ತಪ್ಪಿಸಿದ್ದಾರೆ, ಅಲ್ಲದೆ ವಿಧಾನಪರಿಷತ್ ಸ್ಥಾನವನ್ನೂ ತಪ್ಪಿಸಿದ್ದಾರೆ. ಇದೀಗ ಮುಂದಿನ ಲೋಕಸಭಾ ಚುನಾವಣೆಗೆ ಟಿಕೆಟ್ ತಪ್ಪಿಸುವ ಉದ್ದೇಶದಿಂದಾಗಿ ತಪ್ಪು ಇಲ್ಲದ ವಿಷಯವನ್ನು ಮುಂದಿಟ್ಟುಕೊಂಡು ಕೊಂಡಯ್ಯ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ. ಶಾಸಕ, ಜನಪ್ರತಿನಿಧಿ ಅಲ್ಲದಿದ್ದರೂ, ಜನಪರ ವಿಷಯಗಳ ಕಾಳಜಿಯೊಂದಿಗೆ ಕೆಲಸ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಇತರರಿಗೆ ಸಹಿಸದಾಗಿದೆ. ಅವರ ಮೇಲೆ ಆರೋಪ ಮಾಡಿ, ಅವರನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನವನ್ನು ಆಂಜನೇಯಲು ಹಾಗೂ ಶಾಸಕ ಅನಿಲ್ ಲಾಡ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನೇಕಾರರಿಗೆ ಅವಮಾನ: ರಾಜ್ಯ ನೇಕಾರರ ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಕೊಂಡಯ್ಯ ಮೇಲೆ ಆರೋಪ ಮಾಡಿರುವುದು ರಾಜ್ಯದ ಸುಮಾರು 70 ಲಕ್ಷ ನೇಕಾರರಿಗೆ ಅವಮಾನ ಮಾಡಿದಂತಾಗಿದೆ. ಆಂಜನೇಯಲು ಹಾಗೂ ಶಾಸಕ ಅನಿಲ್ ಲಾಡ್ ಅವರ ನಿಲುವನ್ನು ಖಂಡಿಸಿ ಡಿ. 9ರಂದು ಬೃಹತ್ ಪ್ರತಿಭಟನಾ ರ್ಯಾಲಿ ಮಾಡಲಾಗುತ್ತದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ಇಬ್ಬರ ಮೇಲೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ನಲ್ಲಿ ನೇಕಾರ ಸಮುದಾಯಕ್ಕೆ ಸೂಕ್ತ ಭದ್ರತೆ ಕಾಯ್ದುಕೊಳ್ಳದಿದ್ದರೆ, ಸಮಾಜದ ನಾಯಕರ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಹೋರಾಟ ಮಾಡಲಾಗುತ್ತದೆ. ನೇಕಾರರಲ್ಲಿ ಸಾಕಷ್ಟು ನಾಯಕರಿಲ್ಲ, ಜಿಲ್ಲೆಯಲ್ಲಿ ನಮ್ಮ ನಾಯಕರ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಯಾವುದೇ ಅಧಿಕಾರ ಇಲ್ಲದೆ ಜನಪರ ಕಾರ್ಯಗಳನ್ನು ಕೊಂಡಯ್ಯ ಮಾಡುತ್ತಿರುವುದನ್ನು ಸಹಿಸದೆ ಇಂತಹ ಆರೋಪ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಚಿನ್ನಬಸಯ್ಯ, ತುಕ್ಕಾ ರಾಜೇಶ್, ದೊಡ್ಡಗಟ್ಟಿ ಶಿವಪ್ಪ, ಎಂ. ಮಂಜುನಾಥ್, ದೊಡ್ಡಗಟ್ಟಿ ನೀಲಕಂಠಪ್ಪ, ಕುಲಯಸ್ವಾಮಿ, ಇಸ್ವಿ ಪಂಪಾಪತಿ, ಸುರೇಶ್, ಕಾಶೀನಾಥ, ಕೊಡಿಗಂಟಿ ಗೋಪಾಲ್, ಉದಯಕುಮಾರ್, ಮಂಜುನಾಥ್, ಡಿ.ಸಿ. ಬಸಣ್ಣ, ಎನ್.ಎಲ್. ಮಲ್ಲಿಕಾರ್ಜುನ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

