ಜನೋತ್ಸವವಾಗಿ ಹಂಪಿ ಉತ್ಸವ ಆಚರಣೆ
ಹೊಸಪೇಟೆ: ಹಂಪಿ ಉತ್ಸವವನ್ನು ಜನೋತ್ಸವವನ್ನಾಗಿ ಆಚರಿಸಬೇಕು. ಯಾವುದೆ ಕಾರಣಕ್ಕೂ ಅಧಿಕಾರಿಗಳ ಉತ್ಸವ ಆಗಬಾರದು. ಹಂಪಿ ಉತ್ಸವವನ್ನು ವೈಭವ ಮತ್ತು ವಿಜೃಂಭಣೆಯಿಂದ ಜನವರಿ 10, 11 ಮತ್ತು 12ರಂದು ಆಚರಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಂಪಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರು. 5 ಕೋಟಿ ವೆಚ್ಚದಲ್ಲಿ ಉತ್ಸವ ಆಚರಿಸಲಾಗುತ್ತದೆ. ಈಗಾಗಲೆ ಜಿಲ್ಲಾಡಳಿತ ಉತ್ಸವ ಸಂಬಂಧ ಸಕಲ ಸಿದ್ಧತೆಗಳಲ್ಲಿ ತೊಡಗಿಕೊಂಡು ಉತ್ಸವದ ಕಾರ್ಯಕ್ರಮಗಳ ರೂಪುರೇಷಗಳ ತಯಾರಿ ನಡೆಸಿದೆ. ಈ ಬಾರಿಯ ಹಂಪಿ ಉತ್ಸವದಲ್ಲಿ ವಿಶೇಷವಾಗಿ ಹಂಪಿ ಬೈ ಸ್ಕೈ, ಫುಡ್ ಕೋರ್ಟ್, ಅಂಗವಿಕಲರ ಕ್ರೀಡಾಕೂಟ, ಕುಸ್ತಿ, ಕಲ್ಲುಕಂಬ ಸೇರಿದಂತೆ ಸಾಹಸ ಕ್ರೀಡೆಗಳು ಹಾಗೂ ಜಲಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಊಟ ತಯಾರಿಕಾ ಸ್ಪರ್ಧೆ ಹಾಗೂ ಮಾರಾಟ ಮಳಿಗೆ, ಹಂಪಿ ಕುರಿತು ಛಾಯಾಚಿತ್ರ ಪ್ರದರ್ಶನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ಇತರೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳಲ್ಲಿ ಜಯಗಳಿಸಿದವರಿಗೆ ಪ್ರಥಮ ಬಹುಮಾನ ರು. 25 ಸಾವಿರ, ದ್ವಿತೀಯ ಬಹುಮಾನ ರು. 15 ಸಾವಿರ, ತೃತೀಯ ಬಹುಮಾನ ರು. 10 ಸಾವಿರವನ್ನು ಎಲ್ಲ ಸ್ಪರ್ಧೆಗಳಿಗೆ ವಿತರಿಸಲಾಗುತ್ತದೆ ಎಂದರು.
ಸಿದ್ದು ಉದ್ಘಾಟನೆ: ಉತ್ಸವಕ್ಕಾಗಿ ಮೂರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ವೇದಿಕೆಗಳಿಗೆ ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ವೇದಿಕೆ, ಶ್ರೀಕೃಷ್ಣದೇವರಾಯ ವೇದಿಕೆ, ಶ್ರೀ ವಿದ್ಯಾರಣ್ಯ ವೇದಿಕೆ ಎಂದು ಹೆಸರಿಡಲಾಗಿದೆ. ಈ ವೇದಿಕೆಗಳಲ್ಲಿ ಮೂರು ದಿನಗಳ ಕಾಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜ. 10ರಂದು ಹಂಪಿ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು ಎಂದರು. ಬೆಂಗಳೂರಿನಲ್ಲಿ ಡಿ. 19ರಂದು ಹಂಪಿ ಉತ್ಸವದ ಅಂತಿಮ ಪೂರ್ವಭಾವಿ ಸಭೆ ನಡೆಸಲಾಗುತ್ತದೆ. ಈ ಸಭೆಯಲ್ಲಿ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚರ್ಚಿಸಿ ಉತ್ಸವದ ರೂಪುರೇಷಗಳನ್ನು ಅಂತಿಮಗೊಳಿಸಲಾಗುತ್ತದೆ. ಹಂಪಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರು. 1 ಕೋಟಿ, ಹೆಚ್ಚುವರಿಯಾಗಿ ಇದೇ ಇಲಾಖೆಯಿಂದ ರು. 25 ಲಕ್ಷ, ಪ್ರವಾಸೋದ್ಯಮ ಇಲಾಖೆಯಿಂದ ರು. 1 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಸ್ಥಳೀಯ ದಾನಿಗಳಿಂದ ಮತ್ತು ಕೆಲ ಕಂಪನಿಗಳಿಂದ ದೇಣಿಗೆ ಪಡೆದು ಆಚರಿಸಲಾಗುತ್ತದೆ ಎಂದು ವಿವರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಅರವಿಂದ ಜಾದವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರವಿಕುಮಾರ್, ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿಪಂ ಸಿಇಒ ಮಂಜುನಾಥ ನಾಯಕ್, ಅಡಿಷನಲ್ ಎಸ್ಪಿ ಸಿ.ಕೆ. ಬಾಬ, ವಾರ್ತಾ ಇಲಾಖೆ ಜಂಟಿ ನಿರ್ದೇಶಕ ರವಿ ಕುಮಾರ್, ಎಸಿ ಪಿ. ಸುನೀಲ್ಕುಮಾರ್, ತಹಸೀಲ್ದಾರ್ ರಮೇಶ್ ಕೋನರಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

