ಬಳ್ಳಾರಿ

ಕಬ್ಬಿಗೆ ಬೆಲೆ: ತಹಸೀಲ್ದಾರ್ ಕಚೇರಿಗೆ ಮುತ್ತಿಗೆ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಡಿ. 12
ಐಎಸ್‌ಆರ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ 2013-14ನೇ ಸಾಲಿಗೆ ಸಾವಿರಾರು ರೈತರು ಕಬ್ಬು ಬೆಳೆದಿದ್ದು, ಕಾರ್ಖಾನೆಯವರು ಇಲ್ಲಿವರೆಗೂ ಕಬ್ಬು ನುರಿಸುವುದನ್ನು ಆರಂಭಿಸದಿರುವುದು ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಿದ ಬೆಲೆ ನೀಡಲು ಒಪ್ಪಿಕೊಳ್ಳದೆ ಇರುವುದನ್ನು ವಿರೋಧಿಸಿ ಹೊಸಪೇಟೆ ರೈತ ಸಂಘದ ಪದಾಧಿಕಾರಿಗಳು, ನೂರಾರು ರೈತರು ಗುರುವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ರೈತ ಸಂಘದ ಕಾರ್ಯದರ್ಶಿ ಗೋಸಲ ಭರಮಪ್ಪ ಮಾತನಾಡಿ, ಈ ಭಾಗದಲ್ಲಿ ಸುಮಾರು 4-5 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತದೆ. ಈಗಾಗಲೆ 14-15 ತಿಂಗಳ ಕಬ್ಬು ಬೆಳೆದು ನಿಂತಿದ್ದರೂ ಸಹ ಐಎಸ್‌ಆರ್ ಸಕ್ಕರೆ ಕಾರ್ಖಾನೆಯವರು ತಮ್ಮ ಹಠಮಾರಿ ಧೋರಣೆಯಿಂದ ಕಾರ್ಖಾನೆಯನ್ನು ಇನ್ನೂ ಪ್ರಾರಂಭಿಸುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ರೈತರು ಮೌಖಿಕವಾಗಿ ಮತ್ತು ಮನವಿಪತ್ರಗಳ ಮೂಲಕ ಮನವಿ ಮಾಡಿದರೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮರ್ಥ್ಯವಿಲ್ಲ
ಕಾರ್ಖಾನೆ ಸುಮಾರು 79-80 ವರ್ಷಗಳ ಹಳೆಯದಾಗಿದ್ದು, ಇದರ ಯಂತ್ರೋಪಕರಗಳು ಅಧುನೀಕರಣಕ್ಕೊಳಪಟ್ಟು ಕಾರ್ಯನಿರ್ವಹಿಸದೆ ಇರುವುದರಿಂದ ಕಬ್ಬು ಒಣಗಿ ಇಳುವರಿ ಕಡಿಮೆಯಾಗಿ ಆರ್ಥಿಕ ನಷ್ಟವನ್ನು ರೈತರು ಅನುಭವಿಸುತ್ತಿದ್ದಾರೆ. ಕಾರ್ಖಾನೆ ವ್ಯಾಪ್ತಿಯಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಿದ್ದು, ಈ ಸಕ್ಕರೆ ಕಾರ್ಖಾನೆ ಪ್ರತಿದಿನ ಕೇವಲ 1400-1500 ಟನ್ ಕಬ್ಬನ್ನು ಮಾತ್ರ ನುರಿಸುತ್ತದೆ. ಇದರಿಂದ ಈ ಭಾಗದಲ್ಲಿ ಬೆಳೆದುನಿಂತ ಕಬ್ಬನ್ನು ಮುಕ್ತ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಐಎಸ್‌ಆರ್ ಕಾರ್ಖಾನೆಯವರು ರೈತರಿಗೆ ಕೊಡಬೇಕಾದ ಬಾಕಿ ಹಣಕ್ಕೆ, ಅಸಲು ಮತ್ತು ಬಡ್ಡಿ ಸೇರಿ ಸುಮಾರು ರು. 21 ಕೋಟಿ ನೀಡಬೇಕು. ಬಾಕಿ ಹಣ ನೀಡದೇ ಇರುವ ಕಾರ್ಖಾನೆ ವಿರುದ್ಧ ಸರ್ಕಾರ ಇದುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ಕ್ರಮವನ್ನು ಖಂಡಿಸಿದರು.
ಅವಕಾಶ ಕಲ್ಪಿಸಿ
ಡಾ.ಸಿ. ರಂಗರಾಜನ್ ವರದಿ ಪ್ರಕಾರ ಕಬ್ಬನ್ನು ಕಾಯ್ದಿಟ್ಟ ಪ್ರದೇಶದಿಂದ ರೈತರು ಇಚ್ಛೆಪಟ್ಟ ಕಾರ್ಖಾನೆಗೆ ಸಾಗಾಟ ಮಾಡಲು ತಕ್ಷಣ ಸರ್ಕಾರ ಆದೇಶ ಹೊರಡಿಸಬೇಕು ಅಥವಾ ಕಾರ್ಖಾನೆಗೆ ಕಾಯ್ದಿಟ್ಟ ಪ್ರದೇಶದ ಎಲ್ಲಾ ಕಬ್ಬನ್ನು ಬೇರೆಡೆಗೆ ಸಾಗಿಸಲು ಜಿಲ್ಲಾಧಿಕಾರಿಗಳಿಗೆ ರೈತರು ಸಲ್ಲಿಸಿರುವ ಎಕ್ಸ್‌ಪೋರ್ಟ್ ಪರ್ಮಿಟ್ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯ ಕಬ್ಬು ನಿಯಂತ್ರಣ ಮತ್ತು ಮಾರಾಟ ಸಮಿತಿ ನಿರ್ಧರಿಸಿದಂತೆ ಪ್ರತಿ ಟನ್ ಕಬ್ಬಿಗೆ ರು. 2500 ಹಾಗೂ ಬೆಂಬಲ ಬೆಲೆ ಪ್ರತಿ ಟನ್‌ಗೆ ರು. 150 ನಿಗದಿಯಾಗಿದ್ದನ್ನು ಕಬ್ಬು ಬೆಳೆದ ರೈತರಿಗೆ ಕೊಡಿಸಬೇಕು. ರೈತರ ಬಾಕಿ ಹಣವನ್ನು ಬಡ್ಡಿ ಸಮೇತ ನೀಡಬೇಕು. ಕಬ್ಬು ಮುಕ್ತ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ತಾರಿಹಳ್ಳಿ ಹುಲುಗಜ್ಜಪ್ಪ, ಉಪಾಧ್ಯಕ್ಷ ಬಿ.ಕೆ. ನಾಗರಾಜ್ ರಾವ್, ಖಜಾಂಚಿ ಪ್ಯಾಟಿ ಜಂಬಣ್ಣ, ಸಹ ಕಾರ್ಯದರ್ಶಿ ಬಿ. ನಾಗರಾಜ್, ಮುಖಂಡರಾದ ಎಲ್. ಸಿದ್ದಪ್ಪ, ಎಂ.ಜೆ. ಜೋಗಯ್ಯ, ಸಿ. ಸಂಶುದ್ದೀನ್, ಎ. ಬಡಕಪ್ಪ, ಅರಳಿ ಕೊಟ್ರಪ್ಪ, ತಳವಾರ್ ವೆಂಕಟೇಶ್, ಕಿಚಿಡಿ ಶ್ರೀನಿವಾಸ, ಆರ್. ಕೊಟ್ರೇಶ್, ಬಂಡೆ ರಂಗಪ್ಪ, ಭೀಮಪ್ಪ, ಬಿ. ಸಣ್ಣೆಪ್ಪ, ರಾಮನಗೌಡ, ಬಂಡೆ ಶ್ರೀನಿವಾಸ, ಬಿ.ಎಸ್. ಜಂಬಯ್ಯ ನಾಯಕ, ಪೂಜಾರಿ ವೆಂಕೋಬ ನಾಯಕ, ಗುಂಡಿ ಪ್ರಸಾಂತ್ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು. ನಂತರ ತಹಸೀಲ್ದಾರ್ ರಮೇಶ್ ಕೋನಡ್ಡಿ ಅವರಿಗೆ ಮನವಿಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.