ಭ್ರಷ್ಟಮುಕ್ತ ಭಾರತ ನಿರ್ಮಾಣ ಅಗತ್ಯ
ಮುನಿರಾಬಾದ್: ಭಾರತ ದೇಶ ಭವ್ಯ ಪರಂಪರೆ ಹೊಂದಿದ ದೇಶವಾಗಿದ್ದು, ಆದರೆ, ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ಅದರ ಸುಲಿಗೆಗೆ ಸಿಕ್ಕಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಹಾಗೂ ಇತರೆ ಕ್ಷೇತ್ರಗಳು ಕೆಟ್ಟು ಹೋಗಿವೆ. ಇದರಿಂದ ದೇಶ ಜಗತ್ತಿನ ಇತರೆ ದೇಶಗಳ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಭಾನುವಾರ ಇಲ್ಲಿನ ವಿಜಯನಗರ ಪದವಿಪೂರ್ವ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಒಂದಾನೊಂದು ಕಾಲದಲ್ಲಿ ದೇಶ ವೈಜ್ಞಾನಿಕ, ಶೈಕ್ಷಣಿಕವಾಗಿ ಮುಂದಿತ್ತು. ರಾಮಾಯಣ ಕಾಲದಲ್ಲಿ ನಾವು ಪುಷ್ಪಕ ವಿಮಾನವನದ ಬಗ್ಗೆ ಕೇಳಿದ್ದೇವೆ. 2,400 ವರ್ಷಗಳ ಹಿಂದೆ ನಲಂದಾ ಹಾಗೂ ತಕ್ಷಶಿಲಾ ವಿಶ್ವ ವಿದ್ಯಾಲಯಗಳನ್ನು ನಾವು ಸ್ಥಾಪಿಸಿದ್ದೆವು. ಆದರಿಂದು ದೇಶದಲ್ಲಿ ಸುಮಾರು 50 ಕೋಟಿ ಜನರು ಅನಕ್ಷರಸ್ಥರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಭ್ರಷ್ಟಾಚಾರ ಹಾಗೂ ಆಜಾಗರೂಕತೆ ಎಂದರು.
ಭ್ರಷ್ಟಾಚಾರ ನಿರ್ಮೂಲನೆ ಮಾಡುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು, ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯುವಕರು ಚಿಂತನೆ ಮಾಡಬೇಕೆಂದು ಎಂದು ಶಾಸಕ ರಾಯರೆಡ್ಡಿ ಕಿವಿಮಾತು ಹೇಳಿದರು.
ದೇಶದ ಪ್ರಗತಿಯನ್ನು ಚೀನಾ ದೇಶದೊಂದಿಗೆ ಹೋಲಿಸಿದ ಶಾಸಕರು, ಚೀನಾ ಆಧಿಕ ಹಾಗೂ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು, ಅದಕ್ಕೆ ಕಾರಣ ಅಲ್ಲಿನ ಜನರ ದೇಶಭಿಮಾನ ಹಾಗೂ ವಿಚಾರಗಳು. ಇನ್ನು 10 ವರ್ಷದಲ್ಲಿ ಚೀನಾ ದೇಶವು ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿರುವ ಅಮೆರಿಕ ದೇಶವನ್ನು ಹಿಂದಕ್ಕೆ ಹಾಕಿ 1ನೇ ಸ್ಥಾನಕ್ಕೇರಲಿದೆ ಎಂದರು.
ವೀವಿ ಸಂಘ ಶ್ಲಾಘಿಸಿದ ಶಾಸಕ: ಸ್ವಾತಂತ್ರ್ಯ ಪೂರ್ವ 1916ರಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಉತ್ತರ ಕರ್ನಾಟಕ ಭಾಗದಲ್ಲಿ ಮದ್ರಾಸ್ ಪ್ರಾಂತ್ಯದ ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಮುಂಬೈ ಪ್ರಾಂತ್ಯದ ಬೆಳಗಾವಿಯಲ್ಲಿ ಕೆಎಲ್ಇ ಸಂಸ್ಥೆ ಜನರಿಗೆ ಅಕ್ಷರ ದಾಸೋಹ ಮಾಡುವ ನಿಟ್ಟಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಂದಿನಿಂದ ಇಂದಿನವರೆಗೂ ಹಿಂದುಳಿದ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿದ್ದು ನಿಜಕ್ಕೂ ಶ್ಲಾಘನೀಯ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ, ಈ ಭಾಗದಲ್ಲಿರುವ ತುಂಗಭದ್ರಾ ಅಣೆಕಟ್ಟಿನಿಂದ ರೈತರ ಗದ್ದೆಗಳಿಗೆ ಗಂಗೆ ಹರಿಯುತ್ತಿದ್ದಾಳೆ. ವೀರಶೈವ ವಿದ್ಯಾವರ್ಧಕ ಸಂಘವು ಹಿಂದುಳಿದ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 100 ವರ್ಷಗಳಿಂದ ಜ್ಞಾನ ಗಂಗೆ ಹರಿಸುತ್ತಿದೆ ಎಂದರು.
ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಕಾರ್ಯದರ್ಶಿ ಎಚ್.ಎಂ. ಗುರುಬಸವರಾಜ್, ಹಳೆ ವಿದ್ಯಾರ್ಥಿಗಳಾದ ಇಂದರ್ಕುಮಾರ್, ವೆಂಕಟರಮಣ, ಜಿಪಂ ಅಧ್ಯಕ್ಷ ಟಿ. ಜನಾರ್ದನ್, ಮುನಿರಾಬಾದ್ ಗ್ರಾಪಂ ಅಧ್ಯಕ್ಷೆ ರಾಧಿಕಾ ರವಿ, ಜಿಪಂ ಸದಸ್ಯರಾದ ರಮೇಶ ಕುಯ್ಯಪ್ಪನವರ್, ಶಾಲೆ ಪ್ರಾಚಾರ್ಯ ಬಸವರಾಜ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಈಶಪ್ಪ ಸೊನ್ನದ, ಖ್ಯಾತ ಸ್ತ್ರೀ ರೋಗ ತಜ್ಞೆ ಹಾಗೂ ಶಾಲೆಯ ಹಳೆ ವಿದ್ಯಾರ್ಥಿನಿ ಡಾ. ಪದ್ಮಿನಿ ಪ್ರಸಾದ್, ಓಂಕಾರ, ಸಂಪತ್ಕುಮಾರ್ ಹಾಗೂ ಶ್ರೀನಿವಾಸ್ ವೇದಿಕೆಯಲ್ಲಿದ್ದರು. ಸಹ ಕಾರ್ಯದರ್ಶಿ ಜೆ.ಎಸ್. ನೇಪಾಕ್ಷಪ್ಪ ಸ್ವಾಗತಿಸಿದರು. ಸ್ವಾತಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

