ಸುದ್ದಿ ಸಂಕ್ಷೇಪ
ಮೇವಿನ ಬಣವೆ ಭಸ್ಮ
ಕೂಡ್ಲಿಗಿ: ತಾಲೂಕಿನ ಹಿರೆ ಹೆಗ್ಡಾಳ್ದಲ್ಲಿ ಭಾನುವಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕಣದಲ್ಲಿದ್ದ ಮೆಕ್ಕೆಜೋಳದ ತೆನೆ, ಐದಾರು ಮೇವಿನ ಬಣವೆಗಳು ಭಸ್ಮವಾಗಿವೆ. ಗ್ರಾಮದ ವೀರಯ್ಯ ಅವರ ಕಣದಲ್ಲಿ ಗಂಟೆ ಪಂಪಣ್ಣ, ದುರುಗಪ್ಪ, ಅಂಡೇರ ನಿಂಗಪ್ಪ, ರಾಮಪ್ಪ ಎಂಬುವವರ 25ಕ್ಕೂ ಹೆಚ್ಚು ಟ್ರ್ಯಾಕ್ಟರ್ನಷ್ಟು ಮೇವಿನ ಬಣವೆಗಳನ್ನು ಹಾಕಿಕೊಂಡಿದ್ದರು. ರಾಮಪ್ಪ 5 ಗಾಡಿಯಷ್ಟು ಮೆಕ್ಕೆಜೋಳದ ತೆನೆಗಳ ದಾಸ್ತಾನು ಶೇಖರಿಸಿದ್ದರು. ಪಂಪಣ್ಣರಿಗೆ ಸೇರಿದ 1 ಚಕ್ಕಡಿ ಗಾಡಿ, ಗುಡಿಸಲು ಸುಟ್ಟು ರು. 4 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವೀರಯ್ಯ ಅವರ ಕಣದ ಹತ್ತಿರ ವಿದ್ಯುತ್, ಡಿಷ್ ತಂತಿಗಳು ಹಾದು ಹೋಗಿದ್ದು, ಅವುಜಂಟಿಯಾಗಿ ಶಾರ್ಟ್ಸರ್ಕ್ಯೂಟ್ ಉಂಟಾಗಿ ಬೆಂಕಿ ತಗುಲಿದೆ ಎಂದು ಗ್ರಾಮಸ್ಥರು ತಿಳಿಸಿದರು. ತಕ್ಷಣ ಕೂಡ್ಲಿಗಿ ಅಗ್ನ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಕಳೆದ ವರ್ಷ ಶಾರ್ಟ್ ಸರ್ಕ್ಯೂಟ್ನಿಂದ ಈಗ ಸುಟ್ಟ ಕಣದ ಹಿಂಬದಿಯ ಕಣಕ್ಕೆ ಬೆಂಕಿ ತಗುಲಿತ್ತು. ಆ ಸಂದರ್ಭದಲ್ಲಿ ವಿದ್ಯುತ್ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದೆ ಮತ್ತೆ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ದೂರಿದರು. ಎಎಸೈ ಸದ್ಯೋಜಾತನಗೌಡ, ಕಂದಾಯ ನಿರೀಕ್ಷಕ ಚನ್ನಬಸಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಅಪಘಾತ-ಚಾಲಕ ಸಾವು: ದೂರು ದಾಖಲು
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ಠಾಣೆ ವ್ಯಾಪ್ತಿಯ ಎ.ಆರ್.ಎಸ್. ಫಾರಂ ಸಮೀಪ ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕನೊಬ್ಬ ಮೃತಪಟ್ಟ ಘಟನೆ ಶನಿವಾರ ರಾತ್ರಿ ಜರುಗಿದೆ. ಮೃತನು. ಕೆ. ವೀರೇಶಪ್ಪ (58). ಈತ ಬಿ.ಎಂ. ಸೂಗೂರುದಿಂದ ಸಿರುಗುಪ್ಪ ಮಾರ್ಗದಲ್ಲಿ ಬರುತ್ತಿದ್ದಾಗ ರಾತ್ರಿ 8.30ಕ್ಕೆ ರಸ್ತೆ ಪಕ್ಕದಲ್ಲಿ ತಗ್ಗು ಗುಂಡಿ ಗಮನಿಸದೆ ಟ್ರ್ಯಾಕ್ಟರ್ ಚಲಾಯಿಸಿದ್ದು, ನಿಯಂತ್ರಣ ತಪ್ಪಿ ಪಕ್ಕದ ನಾಲೆಗೆ ಪಲ್ಟಿ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಾಗಿದೆ.
ಪಡಿತರ ಅಕ್ಕಿ ಸಾಗಾಟ: ಲಾರಿ ವಶ
ಬಳ್ಳಾರಿ: ಬಳ್ಳಾರಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿ 6 ಜನರನ್ನು ಬಂಧಿಸಿ, 130 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಶನಿವಾರ ಠಾಣಾ ವ್ಯಾಪ್ತಿಯ ಮುಂಡ್ರಗಿ ಇಂಡಸ್ಟ್ರೀಯಲ್ ಏರಿಯಾ 2ನೇ ಸ್ಟೇಜ್ನ ಹರಿಪ್ರಿಯಾ ಇಂಡಸ್ಟ್ರೀಸ್ ಮುಂದೆ ಪಡಿತರ ಅಕ್ಕಿಯನ್ನು ಲಾರಿಯಲ್ಲಿ ಅಕ್ರಮವಾಗಿ ಸಾಗಿಸುವಾಗ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಂ.ವೈ. ತಿಪ್ಪೇಸ್ವಾಮಿ, ಆಹಾರ ನಿರೀಕ್ಷಕ ರವಿಕುಮಾರ ರಾಠೋಡ ಜತೆ ಪೊಲೀಸರು ದಾಳಿ ಮಾಡಿ, ರು. 1,30,000 ಮೌಲ್ಯದ 130 ಕ್ವಿಂಟಲ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ಶಿವಪ್ಪ, ವಿಜಯಕುಮಾರ್, ರಾಮು, ಲಾರಿ ಮಾಲೀಕ, ಲಾರಿ ಚಾಲಕ ಸುರೇಶ್, ಮಹಾದೇವಸ್ವಾಮಿ ಅಲಿಯಾಸ್ ಮನು ಸೇರಿದಂತೆ ಆರು ಜನರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇಂದು ರೈತರಿಂದ ಧರಣಿ
ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆಗಳ ಜಾರಿಗಾಗಿ ಆಗ್ರಹಿಸಿ ಡಿ. 23ರಂದು ರೈತರಿಂದ ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧರಣಿ ಯಶಸ್ವಿ ಮಾಡುವಂತೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮನವಿ ಮಾಡಿದ್ದಾರೆ. ತಾಲೂಕು ಸಮಗ್ರ ನೀರಾವರಿ ಯೋಜನೆ ಜಾರಿ ಹೋರಾಟ ಸಮಿತಿ ಧರಣಿ ಪೂರ್ವಭಾವಿಯಾಗಿ ಹಮ್ಮಿಕೊಂಡಿದ್ದ ರೈತರ ಬೈಕ್ರ್ಯಾಲಿಗೆ ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಸುಮ್ಮನಿದ್ದರೆ ಸುಲಿಗೆ ತಪ್ಪದು, ಹೋರಾಡಿದರೆ ಜಯ ನಮ್ಮದು ಎಂಬ ಘೋಷಣೆ ಮುಖಾಂತರ ರೈತರನ್ನು ಹುರಿದುಂಬಿಸಿ, ಚಿಲವಾರ ಬಂಡಿ ಏತ ನೀರಾವರಿ ಯೋಜನೆ ಈಗಾಗಲೆ ಟೆಂಡರ್ ಹಂತ ತಲುಪಿದ್ದು ಜರೂರಾಗಿ ಕಾಮಗಾರಿಗೆ ಚಾಲನೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸಮಿತಿ ಸಂಚಾಲಕ ಎ. ಅಡಿವೆಪ್ಪ ಮಾತನಾಡಿ, ನೀರಾವರಿ ಯೋಜನೆ ಜಾರಿಗೆ ಹಂತ ಹಂತದ ಹೋರಾಟ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಬೇಕಾಗಿದೆ. ಧರಣಿ ಸತ್ಯಾಗ್ರಹಕ್ಕೆ ಗ್ರಾಮದ ರೈತರು, ಯುವಜನರು, ಮಹಿಳೆಯರು ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಲು ವಿನಂತಿಸಿದರು.
ಇಂದು ಪರಿನಿರ್ವಾಣ ಕಾರ್ಯಕ್ರಮ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿ. 23ರಂದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ಕಾರ್ಯಕ್ರಮವನ್ನು ಆಯೋಜಿಸಿದೆ. ನಗರದ ಕೋಟೆ ಪ್ರದೇಶದ ಮೆಟ್ರಿಕ್ ನಂತರದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಂದು ಸಂಜೆ 6 ಗಂಟೆಗೆ ಎನ್.ಡಿ. ವೆಂಕಮ್ಮ ವಿಶೇಷ ಉಪನ್ಯಾಸ ನೀಡಲಿದ್ದಾರೆ. ವೆಂಕಟಾಪುರದ ಎಸ್.ಎಂ. ಹುಲುಗಪ್ಪ ಹಾಗೂ ತಿಮ್ಮಲಾಪುರದ ಹನುಮಯ್ಯ ಅವರು ಅಂಬೇಡ್ಕರ್ ಕುರಿತು ಕ್ರಾಂತಿಗೀತೆಗಳ ಗಾಯನ ಮಾಡಲಿದ್ದಾರೆ ಎಂದು ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ತಿಳಿಸಿದ್ದಾರೆ.
ಬದ್ದಿ ಹುಚ್ಚೆಂಗೆಮ್ಮ ನಿಧನ
ಕೊಟ್ಟೂರು: ಪಟ್ಟಣದ ಅಂಬೇಡ್ಕರ್ ನಗರದ ಬದ್ದಿ ಹುಚ್ಚೆಂಗೆಮ್ಮ (68) ಶನಿವಾರ ನಿಧನರಾಗಿದ್ದಾರೆ. ಮೃತರಿಗೆ ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ. ದುರುಗೇಶ್, ಡಿಎಸ್ಎಸ್ ಮುಖಂಡ ಮರಿಸ್ವಾಮಿ ಸೇರಿದಂತೆ 6 ಪುತ್ರರು, 3 ಪುತ್ರಿಯರು, 32 ಮೊಮ್ಮಕ್ಕಳು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

