ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನಿಧನಕ್ಕೆ ಸಂತಾಪ
ಬಳ್ಳಾರಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ (ಜಿಎಸ್ಎಸ್)ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಸಂತಾಪ ಸೂಚಿಸಿದೆ.
ಜಿಎಸ್ಎಸ್ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಓರ್ವ ಸಾಹಿತ್ಯ ದಿಗ್ಗಜರನ್ನು ಕಳೆದುಕೊಂಡಂತಾಗಿದೆ. ತಮ್ಮ ಬರವಣಿಗೆಯ ಮೂಲಕ ಇಡೀ ಸಾಹಿತ್ಯ ಪ್ರಪಂಚದಲ್ಲಿ ಛಾಪು ಮೂಡಿಸಿದ್ದ ಜಿ.ಎಸ್. ಶಿವರುದ್ರಪ್ಪನವರು ಆಧುನಿಕ ಕಾವ್ಯ ಲೋಕಕ್ಕೆ ತಮ್ಮದೇ ಆದ ಬಳುವಳಿ ನೀಡುವ ಮೂಲಕ ಮೇರು ವ್ಯಕ್ತಿತ್ವದ ಸಾಹಿತಿಯಾಗಿದ್ದರು. ರಾಷ್ಟ್ರಕವಿಗಳಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವದಂತಹ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರಾಗಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ತಮ್ಮ ವ್ಯಕ್ತಿತ್ವದಿಂದ ಇಂದಿನ ಯುವ ಲೇಖಕರಿಗೆ ಆದರ್ಶಪ್ರಿಯರಾಗಿದ್ದರು. ಜಿ.ಎಸ್. ಶಿವರುದ್ರಪ್ಪನವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿರಿಗೇರಿ ಯರಿಸ್ವಾಮಿ ಪ್ರಾರ್ಥಿಸಿದ್ದಾರೆ.
ಹಂಪಿ ವಿವಿಯಲ್ಲಿ ಸಂತಾಪ
ಹೊಸಪೇಟೆ: ಕನ್ನಡ ನಾಡಿನ ವೈಚಾರಿಕ ಕವಿ ಹಾಗೂ ಜ್ಯಾತಾತೀತ ಲೇಖಕ ನಾಡೋಜ ಡಾ. ಜಿ.ಎಸ್. ಶಿವರುದ್ರಪ್ಪ ಅವರನ್ನು ಕನ್ನಡ ನಾಡು ಇಂದು ಕಳೆದುಕೊಂಡಿದೆ. ಆದರೂ ಅವರ ಕವಿತೆ ಮತ್ತು ಬರಹಗಳ ಮೂಲಕ ಜಿಎಸ್ಎಸ್ ಎಂದಿಗೂ ನಮ್ಮೊಂದಿಗೆ ಇರುತ್ತಾರೆ ಜಿಎಸ್ಸೆಸ್ ನಿಧನಕ್ಕೆ ಹಂಪಿ ಕನ್ನಡ ವಿವಿ ಸಂತಾಪ ಸೂಚಿಸಿದೆ. ಹಂಪಿ ವಿವಿಯ ಎಲ್ಲ ಹಂತದ ಬೆಳವಣಿಗೆಗಳಲ್ಲಿ ಜಿಎಸ್ಸೆಸ್ ಅವರು ನೀಡಿದ ಸಲಹೆ ಮತ್ತು ಮಾರ್ಗದರ್ಶನವನ್ನು ಹಂಪಿ ವಿವಿಯು ಸದಾ ಸ್ಮರಿಸುತ್ತದೆ ಎಂದು ವಿವಿಯ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ, ಪ್ರಾಧ್ಯಾಪಕರು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ವಿವಿಧ ಸಂಘಗಳಿಂದ ಸಂತಾಪ
ಹೊಸಪೇಟೆ: ಸಾಹಿತಿ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನದಿಂದ ಕನ್ನಡ ನಾಡಿಗೆ ತುಂಬಲಾಗದ ನಷ್ಟವಾಗಿದೆ ಎಂದು ಎಸ್ಎಫ್ಐ ವಿದ್ಯಾರ್ಥಿ ತಾಲೂಕು ಸಮಿತಿ ಸಂತಾಪ ಸೂಚಿಸಿದೆ.
ಕವಿ ಜಿಎಸ್ಸೆಸ್ ನಿಧನಕ್ಕೆ ಎಸ್ಎಫ್ಐ ತಾಲೂಕು ಸಮಿತಿ ಅಧ್ಯಕ್ಷ ಪಂಪಾನಂದ, ಕಾರ್ಯದರ್ಶಿ ವಸಂತ ಕಲಾಲ್, ಕಸಾಪ ತಾಲೂಕು ಘಟಕ, ಹೊಸಪೇಟೆ ಭಾವಕ್ಯತೆ ವೇದಿಕೆ, ಟಿ.ಬಿ. ಡ್ಯಾಂನ ಕನ್ನಡ ಕಲಾ ಸಂಘ, ಮರಿಯಮ್ಮನಹಳ್ಳಿಯ ಲಲಿತ ಕಲಾರಂಗ, ನಾಟ್ಯ ಕಲಾರಂಗ, ಸೃಷ್ಟಿ ಕಲಾಬಳಗ, ಮಾರುತಿ ಕಲಾರಂಗ, ಮಹಿಳಾ ವೃತ್ತಿ ರಂಗ ಕಲಾವಿದರ ಸಂಘ, ಮಾತಾ ಮಂಜಮ್ಮ ಜೋಗತಿ ಕಲಾ ಬಳಗದವರು ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

