ಕೇಂದ್ರಕ್ಕೆ ಸಮಗ್ರ ವರದಿ ಸಲ್ಲಿಕೆ: ಕೃಷ್ಣನ್, ತುಳಸಿದಾಸ್
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಡಿ. 25
ಸತತ ಬರಗಾಲದಿಂದ ತಾಲೂಕಿನ ರೈತ ಸಮುದಾಯ ತತ್ತರಿಸಿದ್ದು, ಕೇಂದ್ರ ಬರ ಅಧ್ಯಯನ ತಂಡ ಬುಧವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಕೆರೆ, ಬೆಳೆ ನಷ್ಟ, ಅಂತರ್ಜಲ ಕುಸಿತದ ಪರಿಣಾಮಗಳನ್ನು ವೀಕ್ಷಿಸಿ ರೈತರಲ್ಲಿ ಅಚ್ಚರಿ ಮೂಡಿಸಿದರು.
ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರೈತರ, ಜನಪ್ರತಿನಿಧಿಗಳ ಅಹವಾಲು ಆಲಿಸಿದ ಕೇಂದ್ರ ಬರ ಅಧ್ಯಯನ ತಂಡ ಇದಕ್ಕೂ ಮುಂಚೆ ತಾಲೂಕಿನ ಬೊಪ್ಪಲಾಪುರ, ಹಿರೇಹೆಗ್ಡಾಳ್, ಕೈವಲ್ಯಾಪುರ, ಅಮಲಾಪುರ ಹಾಗೂ ಹೊಸಹಳ್ಳಿ ಕೆರೆ ವೀಕ್ಷಿಸಿದರು. ಸುಮಾರು 7 ವರ್ಷಗಳಿಂದ ಕೆರೆ ತುಂಬದೇ ಇರುವುದನ್ನು ಅರಿತ ಅಧಿಕಾರಿಗಳ ತಂಡ ಸೂಕ್ತ ವರದಿ ಸಲ್ಲಿಸಲಾಗುವುದೆಂದರು.
ವಿವಿಧೆಡೆ ಪರಿಶೀಲನೆ: ಬರ ಅಧ್ಯಯನ ತಂಡದಲ್ಲಿದ್ದ ಕೇಂದ್ರದ ಜಲಸಂಪನ್ಮೂಲ ಇಲಾಖೆಯ ಕೃಷ್ಣನ್ ಉನ್ನಿ, ಆಹಾರ ಇಲಾಖೆ ಅಧಿಕಾರಿ ತುಳಸಿದಾಸ್ ಮಾತನಾಡಿ, ರಾಜ್ಯದ ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಾಗಿದೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ 8 ಹಾಗೂ ಕೂಡ್ಲಿಗಿಯ 5 ಕೆರೆಗಳನ್ನು ವೀಕ್ಷಣೆ ನಡೆಸಲಾಯಿತು. ಇಲ್ಲಿ ಕುಡಿಯುವ ನೀರು ಸಮಸ್ಯೆ, ಮಳೆ ಕೊರತೆಯಿಂದ ಬೆಳೆನಷ್ಟ, ಮೇವಿನ ಕೊರತೆಯಿಂದ ಜಾನುವಾರುಗಳ ಸ್ಥಿತಿ ಅತಂತ್ರ ತಲುಪಿರುವುದು ಗಮನಕ್ಕೆ ಬಂದಿದೆ ಎಂದರು. ಈ ಎಲ್ಲ ಅಂಶಗಳನ್ನು ಒಳಗೊಂಡಂತೆ ಸಮಗ್ರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆ ಹಾಗೂ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಜಿಪಂ ಸದಸ್ಯ ಕೆ.ಎಂ. ಶಶಿಧರ, ಗ್ರಾಪಂ ಅಧ್ಯಕ್ಷೆ ಗಿರಿಜಾ ಜಗದೀಶ್, ಉಪಾಧ್ಯಕ್ಷ ನಾಗೇಂದ್ರಪ್ಪ, ಪಿಡಿಒ ಕೆ. ಗಂಗಾಧರ, ಜೆಇ ಅಶೋಕ್, ಸದಸ್ಯರಾದ ಎಂ.ಒ. ಮಂಜುನಾಥ, ನಡುವಲಮನೆ ನಾಗರಾಜ, ಜಿ. ತಿಪ್ಪೇಸ್ವಾಮಿ, ಕಂದಾಯ ಇಲಾಖೆಯ ರಾಮರಾವ್ ದೇಸಾಯಿ, ಚನ್ನಬಸಪ್ಪ, ಯಜಮಾನಪ್ಪ, ಶ್ರೀನಿವಾಸ ಕೊಂಡಿ, ಸೋಮಶೇಖರ್, ಗ್ರಾಮಸ್ಥರಾದ ಸುಭಾಸ್ಚಂದ್ರ, ಸುರೇಶ್ಗೌಡ ರೈತರಾದ ಬಡಜ್ಜಿ ಮಂಜುನಾಥ, ಬೋಸೆಮಲ್ಲಯ್ಯ, ಸುಭಾಸ್ಚಂದ್ರ, ಕಾತ್ರಿಕೆಹಟ್ಟಿ ಬೈಯಣ್ಣ, ಮಂಜುನಾಥ, ನಡುವಲಮನೆ ತಿಪ್ಪೇಸ್ವಾಮಿ, ಕಾತ್ರಿಕೆಹಟ್ಟಿ ಚಂದ್ರಪ್ಪ, ಕೃಷ್ಣಮೂರ್ತಿ, ಸೋಮಶೇಖರ್, ಶಶಿಕುಮಾರ್, ಅನಿಲ್ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ರೈತರ ಬವಣೆ ನೀಗೀತೆ: ತಾಲೂಕಾದ್ಯಂತ ಸುಮಾರು ಏಳೆಂಟು ವರ್ಷಗಳಿಂದ ಮಳೆ ಇಲ್ಲದೆ ನಲುಗಿದ ರೈತರು, ಜಾನುವಾರುಗಳ ಮೂಕರೋದನೆ ಬರ ಅಧ್ಯಯನ ತಂಡದಲ್ಲಿ ಆಗಮಿಸಿದ ಅಧಿಕಾರಿಗಳಿಗೆ ಅರ್ಥವಾದೀತೆ ಎನ್ನುವ ಪ್ರಶ್ನೆ ರೈತರಲ್ಲಿ ಮನೆ ಮಾಡಿತ್ತು. ಹೊಸಹಳ್ಳಿ ಗ್ರಾಪಂ ಕಚೇರಿಯಲ್ಲಿ ಅಧಿಕಾರಿಗಳು ಬರ ಪರಿಸ್ಥಿತಿ ಬಗ್ಗೆ ಕೇಳುತ್ತಿದ್ದಂತೆ ತಾಲೂಕಿನ ಹುಡೇಂ, ತಾಯಕನಹಳ್ಳಿ, ಕಾತ್ರಿಕೆಹಟ್ಟಿ, ಜುಮ್ಮೋಬನಹಳ್ಳಿ ಇತರ ಹಳ್ಳಿಗಳ ರೈತರು ಬರಕ್ಕೆ ತಕ್ಕ ಫಲ ನೀಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಬರ ಅಧ್ಯಯನ ತಂಡದ ಅಧಿಕಾರಿಗಳಿಗೆ ಒತ್ತಾಯಿಸಿದರು.
ರೈತರ ಮನವಿ: ಈ ಸಂದರ್ಭ ರೈತರಾದ ಹುಡೇಂ ಜಿ. ಪಾಪನಾಯಕ ಮಾತನಾಡಿ, ನಮ್ಮ ತಾಲೂಕಿನಲ್ಲಿ ಮಳೆಯಾಶ್ರಿತ ಭೂಮಿ ನಂಬಿದ ರೈತರಿಗೆ ಸಾವೇ ಗತಿ ಎಂಬಂಥ ಪರಿಸ್ಥಿತಿ ಎದುರಾಗಿದೆ. ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಬೆಂಬಲ ಬೆಲೆ ಸಿಗದೆ ನಾವು ಕಂಗಾಲಾಗಿದ್ದೇವೆ. ಇಂಥ ಸಂದರ್ಭ ವಲಸೆ ಹೋಗುವುದು ಅನಿವಾರ್ಯವಾಗಿದೆ. ಗೋ ಶಾಲೆಗಳನ್ನು ಪ್ರಾರಂಭಿಸಬೇಕು. ತಾಲೂಕಿನ ಎಲ್ಲ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಸಾಕಾರಗೊಳ್ಳುವಂತೆ ಮಾಡಿ ಎಂದು ಬರ ಅಧ್ಯಯನ ತಂಡದ ಗಮನಕ್ಕೆ ತಂದರು.
ಬರ ಅಧ್ಯಯನ ತಂಡದ ಸದಸ್ಯರು ಪ್ರತಿಕ್ರಿಯಿಸಿ, ಇಡೀ ತಾಲೂಕಿನ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ. ಇಲ್ಲಿನ ಸಮಸ್ಯೆಗಳನ್ನು ಕೇಂದ್ರಕ್ಕೆ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಸೂಚಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ರೈತರು ಮನವಿ ಸಲ್ಲಿಸಿದರು.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ 8, ಕೂಡ್ಲಿಗಿಯ 5 ಕೆರೆಗಳನ್ನು ವೀಕ್ಷಣೆ ನಡೆಸಲಾಯಿತು. ಇಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಳೆ ಕೊರತೆಯಿಂದ ಬೆಳೆನಷ್ಟ, ಮೇವಿನ ಕೊರತೆಯಿಂದ ಜಾನುವಾರುಗಳ ಸ್ಥಿತಿ ಅತಂತ್ರವಾಗಿರುವುದು ತಂಡದ ಗಮನಕ್ಕೆ ಬಂದಿದೆ. ಈ ಎಲ್ಲ ಅಂಶಗಳನ್ನು ಒಳಗೊಂಡಂತೆ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.
ಕೃಷ್ಣನ್ ಉನ್ನಿ, ತುಳಸಿದಾಸ್,
ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

