ಮರಳು ಸಾಗಾಟ ನಿಷೇಧ: ಬಡವರಿಗೆ ಕಷ್ಟ
ಹೂವಿನಹಡಗಲಿ: ಮೂರು ವರ್ಷಗಳಿಂದ ತಾಲೂಕಿನ ತುಂಗಭದ್ರಾ ನದಿಯಲ್ಲಿ ಮರಳು ಎತ್ತಲು ಜಿಲ್ಲಾಧಿಕಾರಿ ಪರವಾನಿಗೆ ನೀಡಿಲ್ಲ. ಆದರೂ ನದಿಯಲ್ಲಿ ಬೊಗಸೆ ಮರಳು ಉಳಿದಿಲ್ಲ. ಕಾರಣ ಸರ್ಕಾರ ಜಾರಿಗೆ ತಂದ ಹೊಸ ಮರಳು ನೀತಿ, ಊರ ಕೊಳ್ಳೆ ಹೊಡೆದ ಮೇಲೆ ಡಿಂದಿ ಬಾಗಿಲು ಹಾಕಿದ್ರಂತೆ ಎಂಬಂತಾಗಿದೆ.
ತಾಲೂಕಿನ ತುಂಬೆಲ್ಲ ಯಾರ ಬಾಯಿಯಲ್ಲಿ ಕೇಳಿದರೂ ಮರಳಿನದ್ದೇ ಸುದ್ದಿ, ಯಾಕಿಷ್ಟು ಮರಳು ಪ್ರಚಲಿತ ಅಂತ ಕೇಳಿದ್ರೆ, 2011ರಿಂದ ತುಂಗಭದ್ರಾ ನದಿಯಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿತ್ತು. ಮರಳು ಸಾಗಾಟಕ್ಕೆ ಪರವಾನಗಿ ನೀಡಿಲ್ಲ. ಬಡವರಿಗೆ ಸರ್ಕಾರ ವಿತರಿಸಿರುವ ಮನೆ ನಿರ್ಮಾಣಕ್ಕೆ ಬೊಗಸೆ ಮರಳು ಸಿಗುತ್ತಿಲ್ಲ. ಬಡ ಫಲಾನುಭವಿಗಳು ಪರದಾಡುವಂತಾಗಿದೆ.
ಬಂಗಾರದ ಬೆಲೆ: ಹಿಂದಿನ ಸರ್ಕಾರ ಹೊಸ ಮರಳು ನೀತಿ ಜಾರಿಗೊಳಿಸಿತ್ತು. ಆಗ ಡಿಸಿ ಕೆಲ ಕಾರಣಗಳಿಂದ ಈ ಭಾಗದಲ್ಲಿ ಮರಳು ಎತ್ತಲು ಪರವಾನಗಿ ರದ್ದುಪಡಿಸಿದ್ದರಿಂದ ಸರ್ಕಾರಿ ಸ್ಟಾಕ್ ಯಾರ್ಡ್ಗಳಲ್ಲಿ ಬೊಗಸೆ ಮರಳು ಸಂಗ್ರಹಿಸದಿರುವುದರಿಂದ ಭಾರಿ ಪ್ರಮಾಣದಲ್ಲಿ ಮರಳಿನ ಬೇಡಿಕೆ ಹೆಚ್ಚಾಗಿ ಮರಳಿಗೆ ಬಂಗಾರದ ಬೆಲೆ ಬಂದಿದೆ. ತಾಲೂಕಿನ ತುಂಗಭದ್ರಾ ನದಿಯ ಹರವಿ ಸಿದ್ದಾಪುರದಿಂದ ಮದಲಗಟ್ಟಿವರೆಗೂ ಸುಮಾರು 54 ಮರಳಿನ ಬ್ಲಾಕ್ಗಳಲ್ಲಿ 40 ಬ್ಲಾಕ್ಗಳಿಗೆ ಟೆಂಡರ್ ಆಗಿತ್ತು. ಹರವಿ, ನವಲಿಯಲ್ಲಿ ಮರಳು ಸಂಗ್ರಹಿಸಲೆಂದೇ ಸ್ಟಾಕ್ಯಾರ್ಡ್ ಕಾಮಗಾರಿ ನಿರ್ಮಾಣ ಮಾಡಲಾಗಿದೆ. ಆದರೆ, ಹಿರೇಬನ್ನಿಮಟ್ಟಿಯಲ್ಲಿ ಈವರೆಗೂ ಸ್ಟಾಕ್ಯಾರ್ಡ್ ನಿರ್ಮಾಣ ಮಾಡಿಲ್ಲ. ಲೋಕೋಪಯೋಗಿ ಇಲಾಖೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಗೋಜಿಗೆ ಹೋಗಿಲ್ಲ.
ಗಸ್ತು ತಿರುಗುವ ತಹಸೀಲ್ದಾರ್: ಅಕ್ರಮ ಮರಳು ದಂಧೆಕೋರರಿಗೆ ಸಿಂಹಸ್ವಪ್ನವಾಗಿರುವ ತಹಸೀಲ್ದಾರ್ ಎ.ಬಿ. ವಿಜಯಕುಮಾರ ಗಸ್ತು ತಿರುಗುತ್ತಿದ್ದಾರೆ. ಬೆಳಗಿನಿಂದ ಸಂಜೆವರೆಗೂ ಕಚೇರಿ ಕೆಲಸ ಮುಗಿಸಿ, ಮಾರುವೇಷಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುವ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ದಂಡ ವಿಧಿಸಿದ್ದಾರೆ. ನದಿ ತೀರದ ಹೊನ್ನೂರು ಗ್ರಾಮದಲ್ಲಿ ರಾತ್ರಿ ವೇಳೆ ಬೈಕ್ನಲ್ಲಿ ಹೆಲ್ಮೇಟ್ ಧರಸಿ ಟ್ರ್ಯಾಕ್ಟರ್ಗಳನ್ನು ಹಿಡಿದ್ದಾರೆ. ನಿತ್ಯ ರಾತ್ರಿ ಕಣ್ಣಿಗೆ ನಿದ್ದೆ ಇಲ್ಲದೇ ತಾಲೂಕಿನಿಂದ 50-60 ಕಿ.ಮೀ ದೂರದ ಹರವಿ, ಸಿದ್ದಾಪುರ, ಕುರುವತ್ತಿ, ಮೈಲಾರ ಭಾಗಗಳಲ್ಲಿ ಗಸ್ತು ತಿರುಗುತ್ತಿರುವ ಹಿನ್ನೆಲೆಯಲ್ಲಿ ಮರಳು ದಂಧೆಕೋರರು ಮರಳಿನ ಸಹವಾಸವೇ ಸಾಕು ಎನ್ನುವಂತಾಗಿದೆ. ಅಕ್ರಮ ಮರಳು ಸಾಗಾಟ ಮಾಡುವ ಪ್ರಭಾವಿ ವ್ಯಕ್ತಿಗಳೇ ದಂಗುಬಡಿದು ಹೋಗಿದ್ದಾರೆ.
ಸರ್ಕಾರಿ ಕಾಮಗಾರಿ ನಿರಾತಂಕ: ಸಿಂಗಟಾಲೂರು ಏತ ನೀರಾವರಿ, ಲೋಕೋಪಯೋಗಿ, ಪಂಚಾಯತ್ ರಾಜ್, ಕೆಆರ್ಐಡಿಎಲ್ ಇತರೆ ಇಲಾಖೆಗಳ ಕಾಮಗಾರಿಗಳಿಗೆ ಮರಳಿನ ತೊಂದರೆ ಕಾಡದೇ ನಿರಾತಂಕವಾಗಿ ಸಾಗಿವೆ. ಪ್ರಭಾವಿಗಳು ಮರಳು ಸಾಗಾಟ ಮಾಡುತ್ತಿದ್ದಾರೆ. ಆದ್ದರಿಂದ ಇಲಾಖೆಗಳ ಅಧಿಕಾರಿಗಳೇ ಮರಳು ಮಾಫಿಯಾಕ್ಕೆ ಪ್ರೋತ್ಸಾಹಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಏನೇ ಆಗಲಿ ಸರ್ಕಾರದ ನೂತನ ಮರಳು ನೀತಿ ಆದಷ್ಟು ಬೇಗ ಅನುಷ್ಠಾನ ಮಾಡಿ ಎಲ್ಲರಿಗೂ ಸುಲಭ ರೀತಿಯಲ್ಲಿ ಮರಳು ಸಿಗಲಿದೆಯೇ ಕಾಯ್ದು ನೋಡಬೇಕು.
ಕೆಆರ್ಐಡಿಎಲ್ ಇಲಾಖೆಗೆ ಸುವರ್ಣ ಗ್ರಾಮೋದಯ ಯೋಜನೆಯ ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ, ಅಂಗನವಾಡಿ ಕೇಂದ್ರ ಹಾಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಕಾಮಗಾರಿಗಳಿಗೆ ಮರಳು ಎಲ್ಲಿಂದ ಬಂತು? 3 ವರ್ಷದಿಂದ ಮರಳು ಪರವಾನಗಿ ಇಲ್ಲ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಯಾಕೆ ಮಾಡುತ್ತಾರೆ. ನಮಗೂ ಮನೆ ಕಟ್ಟಲು ಮರಳು ನೀಡಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಗಮನಹರಿಸುತ್ತಿಲ್ಲ.
- ಬಡ ಫಲಾನುಭವಿಗಳು
- ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

