ಮೆಕ್ಕೆಜೋಳ ಖರೀದಿ ಕೇಂದ್ರ: ವಿಳಂಬಕ್ಕೆ ಅಧಿಕಾರಿಗಳೇ ಹೊಣೆ
ಹಗರಿಬೊಮ್ಮನಹಳ್ಳಿ: ರೈತರ ಬಗ್ಗೆ ಅಧಿಕಾರಿಗಳು ತಾಳಿರುವ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನವೇ ರಾಜ್ಯ ಸರ್ಕಾರದಿಂದ ಮೆಕ್ಕೆಜೋಳ ಖರೀದಿ ಕೇಂದ್ರ ವಿಳಂಬವಾಗಿ ಆರಂಭವಾಗಲು ಮೂಲಕಾರಣ. ವಿಳಂಬತೆಯಿಂದಾಗಿ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ಸೌಲಭ್ಯದಿಂದ ತಾಲೂಕಿನ ಶೇ. 75ರಷ್ಟು ಮೆಕ್ಕೆಜೋಳ ಬೆಳೆಗಾರರು ವಂಚಿತರಾಗಿದ್ದಾರೆ. ಇದಕ್ಕೆ ಅಧಿಕಾರಿಗಳೇ ಹೊಣೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್. ಭೀಮಾನಾಯ್ಕ ಹೇಳಿದರು.
ಶನಿವಾರ ಹಗರಿಬೊಮ್ಮನಹಳ್ಳಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಳೆಗಾರರ ಹಿತರಕ್ಷಣೆಗಾಗಿ ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದಿದೆ. ಈ ಕೇಂದ್ರದಿಂದ ಬೆಳೆಗಾರರನಿಗೆ ನ್ಯಾಯ ಸಿಗಬೇಕು. ಅದನ್ನು ಬಿಟ್ಟು ಇಲ್ಲಸಲ್ಲದ ದಾಖಲೆ ಹೆಸರಿನಲ್ಲಿ ಕಿರುಕುಳ ನೀಡುವುದಾಗಲಿ ಇಲ್ಲವೆ ಮಧ್ಯವರ್ತಿ, ದಲ್ಲಾಳಿಗಳ ಜತೆಗೆ ಸೇರಿಕೊಂಡು ಅವ್ಯವಹಾರಕ್ಕೆ ಅವಕಾಶ ನೀಡಿದ್ದು ಕಂಡು ಬಂದರೆ ಅಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲು ಶಿಫಾರಸು ಮಾಡುವುದಾಗಿ ಭೀಮಾನಾಯ್ಕ ಎಚ್ಚರಿಸಿದರು.
ನಿಗಾ ವಹಿಸಿ: ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಈಗಾಗಲೆ ಶೇ. 75ರಷ್ಟು ಬೆಳೆಯನ್ನು ರೈತರು ಮಾರಾಟ ಮಾಡಿದ್ದಾರೆ. ಉಳಿದ ಶೇ. 25ರಷ್ಟು ಬೆಳೆಗಾರರಿಗೆ ಸರ್ಕಾರದ ಸೌಲಭ್ಯ ಸಿಗಬೇಕು. ಮುಖ್ಯವಾಗಿ ರೈತ ಸಂಘದ ಪ್ರತಿನಿಧಿಗಳು ಖರೀದಿ ಕೇಂದ್ರದ ಬಗ್ಗೆ ಸದಾ ಜಾಗೃತರಾಗಿದ್ದುಕೊಂಡು ಇಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ನಿಗಾ ವಹಿಸಬೇಕು. ಅನ್ಯಾಯ ನಡೆದಿದ್ದು ಕಂಡು ಬಂದರೆ ಕೂಡಲೆ ನನ್ನನ್ನು ಸಂಪರ್ಕಿಸುವಂತೆ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತ ಸಂಘದ ಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡರು.
ಮನವಿ: ಇದಕ್ಕೂ ಮುನ್ನ ಎಪಿಎಂಸಿ ಮುಖ್ಯ ದ್ವಾರದಲ್ಲಿ ಹಮಾಲರ ಸಂಘದವರು ಶಾಸಕರನ್ನು ಸ್ವಾಗತಿಸಿ, ತಮ್ಮ ಕುಂದು-ಕೊರತೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು. ವಸತಿ, ಪಡಿತರ ಕಾರ್ಡ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಆದ್ಯತೆ ಮೇರೆಗೆ ಕಲ್ಪಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದರು.
ಎಪಿಎಂಸಿ ಅಧ್ಯಕ್ಷ ಟಿ. ಬುಳ್ಳಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಿರ್ದೇಶಕ ಹೂಗಾರ ಮಲ್ಲಣ್ಣ, ನೀಲಗಾರ ಚಂದ್ರಪ್ಪ, ಕೆ.ಎಂ. ಗಂಗಾಧರ, ವಿ. ಕೃಷ್ಣ, ಕೆ. ರೋಹಿತ್, ಕೋರಿ ಸಿದ್ದಲಿಂಗಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ತಾಪಂ ಸದಸ್ಯ ಉಮೇಶ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉಡೇದ್ ಗುರುಬಸವರಾಜ, ಮಾಜಿ ಅಧ್ಯಕ್ಷ ಅರಸಿಕೇರಿ ಹನುಮಂತಪ್ಪ, ಮುಖಂಡರಾದ ಎಚ್.ಎಂ. ಚೋಳರಾಜ, ಹಂಚಿನಮನಿ ಹನುಮಂತಪ್ಪ, ಬಡಲಡಿಕಿ ಕೃಷ್ಣಪ್ಪ, ಹಮಾಲರ ಸಂಘದ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷ ರಾಚಣ್ಣನವರ ಸಣ್ಣ ಹುಚ್ಚಪ್ಪ, ದಾದಮ್ಮನವರ ಹೇಮಣ್ಣ, ಆರ್. ಪರುಶುರಾಮ, ತಹಸೀಲ್ದಾರ್ ಇಜಾಜ್ ಬೇಗ್, ರಾಜ್ಯ ಉಗ್ರಾಣ ನಿಗಮ ವ್ಯವಸ್ಥಾಪಕ ರಾಮಣ್ಣ ಇತರರು ಭಾಗವಹಿಸಿದ್ದರು. ಎಪಿಎಂಸಿ ಕಾರ್ಯದರ್ಶಿ ಕುಲಕರ್ಣಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

