ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಗುಳುಂ
ಕನ್ನಡಪ್ರಭ ವಾರ್ತೆ, ಸಂಡೂರು, ಫೆ. 3
ಖೊಟ್ಟಿ ದಾಖಲೆ ಸೃಷ್ಟಿಸಿ ತಾಲೂಕಿನ ದೇವಗಿರಿ ಹತ್ತಿರ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಾಭಾರೆ ಮಾಡಲು ಸಹಕರಿಸಿದ ಈ ಹಿಂದೆ ಗ್ರಾಮ ಲೆಕ್ಕಿಗರಾಗಿದ್ದ ಎಂ. ಈಶ್ವರಪ್ಪ, ಕಂದಾಯ ನಿರೀಕ್ಷಕ ಎಚ್. ಲಂಕೆಪ್ಪನನ್ನು ಭಾನುವಾರ ಸಂಡೂರು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ.
ತಹಸೀಲ್ದಾರ್ ಆರ್. ತಿಮ್ಮಯ್ಯ ನೀಡಿದ ದೂರಿನನ್ವಯ ಈ ವಿಚಾರಣೆ ನಡೆಸಲಾಯಿತು. ಈ ಕೇಸ್ನಲ್ಲಿ ಶಾಮೀಲಾಗಿರುವ ಆರೋಪಿ ತಾಲೂಕು ಕಚೇರಿಯ ಕಂಪ್ಯೂಟರ್ ಆಪರೇಟರ್ ಹೊನ್ನೂರು ಭಾಷಾ ಎಂಬುವವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಖೊಟ್ಟಿ ದಾಖಲೆ ಸೃಷ್ಟಿ: ತಾಲೂಕಿನ ದೇವಗಿರಿ ಹತ್ತಿರವಿರುವ ಸರ್ವೆ ನಂ. 33ರಲ್ಲಿನ 3 ಎಕರೆ 64 ಸೆಂಟ್ಸ್ ಸರ್ಕಾರಿ ಜಮೀನನ್ನು ತಾವು ಸಾಗುವಳಿ ಮಾಡುತ್ತಿರುವುದಾಗಿ ತಿಳಿಸಿ ಭೀಮಪ್ಪ ಎಂಬುವವರು ಖೊಟ್ಟಿ ದಾಖಲೆ ಸೃಷ್ಟಿಸಿ ತಮ್ಮದನ್ನಾಗಿ ಮಾಡಿಕೊಂಡಿದ್ದರು. ನಂತರ ಆ ಜಮೀನನ್ನು ವರಲಕ್ಷ್ಮಿ ಮೈನಿಂಗ್ ಕಂಪನಿ ಮಾಲೀಕ ಗಾದಿಲಿಂಗಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಸರ್ವೆ ನಂ. 37ರಲ್ಲಿನ 5 ಎಕರೆ 53 ಸೆಂಟ್ಸ್ ಹಾಗೂ 2 ಎಕರೆ ಸರ್ಕಾರಿ ಜಮೀನನ್ನು ತಾವು ಸಾಗುವಳಿ ಮಾಡುತ್ತಿರುವುದಾಗಿ ತಿಳಿಸಿ ಯೂಸೂಫ್ ಎಂಬುವ ವ್ಯಕ್ತಿ ತಮ್ಮದನ್ನಾಗಿ ಮಾಡಿಕೊಂಡು ಅವುಗಳನ್ನು ಪ್ರವೀಣ್ಕುಮಾರ್ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಇವರ ಕಡೆಯಿಂದ ಗಾದಿಲಿಂಗಪ್ಪ ಜಮೀನು ಖರೀದಿಸಿದ್ದಾರೆ.
13 ಎಕರೆ ಖರೀದಿ: ಸರ್ವೆ ನಂ. 38ರಲ್ಲಿನ 2 ಎಕರೆ ಸರ್ಕಾರಿ ಜಮೀನನ್ನು ತಾವು ಸಾಗುವಳಿ ಮಾಡುತ್ತಿರುವುದಾಗಿ ನಲ್ಲಂಗಿ ಪಾಲಾಕ್ಷಿ ತಮ್ಮದನ್ನಾಗಿ ಮಾಡಿಕೊಂಡು, ಸದರಿ ಜಮೀನನ್ನು ಗಾದಿಲಿಂಗಪ್ಪಗೆ ಮಾರಾಟ ಮಾಡಿದ್ದಾರೆ. ಗಾದಿಲಿಂಗಪ್ಪ ಈ ಮೂವರ ಕಡೆಯಿಂದ ಒಟ್ಟು 13 ಎಕರೆ 17 ಸೆಂಟ್ಸ್ ಜಮೀನನ್ನು ಖರೀದಿಸಿ, ತಮ್ಮ ಹೆಸರಿಗೆ ಮ್ಯುಟೇಷನ್ ಮಾಡಿಸಿಕೊಂಡು, ವರಲಕ್ಷ್ಮಿ ಮೈನಿಂಗ್ ಕಂಪನಿ ಹೆಸರಿನಲ್ಲಿ ಈ ಜಮೀನುಗಳಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿದ್ದರು. ಈ ಎಲ್ಲಾ ಪ್ರಕ್ರಿಯೆಗಳು 2004 ರಿಂದ 2007ರೊಳಗೆ ನಡೆದಿವೆ ಎನ್ನಲಾಗಿದೆ.
ಆದರೆ ಈ ಸರ್ಕಾರಿ ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದೇವೆಂದು ತಮ್ಮದನ್ನಾಗಿ ಮಾಡಿಕೊಳ್ಳಲು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಲಾಗಿತ್ತೆಂದು ತಿಳಿದು ಬಂದಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ, ತಹಸೀಲ್ದಾರ್ಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ ಸಂಡೂರು ತಹಸೀಲ್ದಾರ್ ಆರ್. ತಿಮ್ಮಯ್ಯ ಸಂಡೂರು ಪೊಲೀಸ್ ಠಾಣೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಗೆ ಸಹಕರಿಸಿದವರ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಡೂರು ಪೊಲೀಸರು ಇದಕ್ಕೆ ಸಹಕರಿಸಿದ ಎಂ. ಈಶ್ವರಪ್ಪ, ಎಚ್. ಲಂಕೆಪ್ಪ ಎಂಬುವವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಹೊನ್ನೂರ್ ಭಾಷ ಎಂಬುವವರಿಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಇತ್ತೀಚೆಗೆ 9 ಗಣಿ ಕಂಪನಿಗಳ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ ನಿರ್ದೇಶನ ನೀಡಿದ ಪಟ್ಟಿಯಲ್ಲಿ ವರಲಕ್ಷ್ಮಿ ಮೈನಿಂಗ್ ಕಂಪನಿಯೂ ಒಂದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

