ಬಳ್ಳಾರಿ

ಪಾಲಿಕೆ ಚುನಾವಣೆ: ಹಲವು ಕೌತುಕ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 28
ಈ ಬಾರಿ ಬಳ್ಳಾರಿಯ ಮಹಾನಗರ ಪಾಲಿಕೆ ಚುನಾವಣೆ ಹಲವು ಕುತೂಹಲ, ಕೌತುಕಗಳಿಗೆ ಕಾರಣವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ಖಾತೆ ತೆರೆಯಲು ಮುಂದಾಗಿರುವ ಬಿಎಸ್ಸಾರ್‌ನ ನಾಲ್ಕು ಅಭ್ಯರ್ಥಿಗಳಿಗೆ ಚಿಹ್ನೆ ಬದಲಾಗಿರುವುದು, 35 ವಾರ್ಡ್‌ಗಳಲ್ಲಿ ಯಾವೊಂದು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿಲ್ಲದಿರುವುದು ಸೇರಿ ವಿವಿಧ ವಿಷಯಗಳಲ್ಲಿ ಪಾಲಿಕೆ ಚುನಾವಣೆ ಕುತೂಹಲ ಕೆರಳಿಸಿದೆ.
ಪಾಲಿಕೆ ಚುನಾವಣೆಗೆ ಕಾಂಗ್ರೆಸ್ 34, ಬಿಜೆಪಿ 25, ಜೆಡಿಎಸ್ 28, ಬಿಎಸ್ಸಾರ್‌ನ 34 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸ್ವತಂತ್ರರು ಸೇರಿ 196 ಅರ್ಭ್ಯ್ಙಗಳು ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ರಾಜ್ಯ ರಾಜಕೀಯದಲ್ಲಿ ಬಿಎಸ್ಸಾರ್ ಪ್ರಾದೇಶಿಕ ಪಕ್ಷ ಅಂಬೆಗಾಲಿಡುತ್ತಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಿಎಸ್ಸಾರ್‌ನ ರಾಜಕೀಯ ಭವಿಷ್ಯ ನಿರ್ಧರಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಪಾಲಿಕೆಯ 35 ವಾರ್ಡ್‌ಗಳಿಗೂ ನಾಮಪತ್ರ ಸಲ್ಲಿಸಿತ್ತು, ಆದರಲ್ಲಿ 14ನೇ ವಾರ್ಡಿನಲ್ಲಿ ಬಿಎಸ್ಸಾರ್ ಅಭ್ಯರ್ಥಿ ಲಾವಣ್ಯ ನಾಮಪತ್ರ ತಿರಸ್ಕೃತವಾಗಿದೆ. ಪಕ್ಷದ ಗುರುತು ಎಂದು ಬಿಂಬಿತವಾಗಿರುವ ಸೀಲಿಂಗ್ ಫ್ಯಾನ್ ನಾಲ್ಕು ಪಕ್ಷೇತರ ಅಭ್ಯರ್ಥಿಗಳ ಪಾಲಾಗಿರುವುದು ಬಿಎಸ್ಸಾರ್ ಹಾಗೂ ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಗೊಂದಲಕ್ಕೆ ಕಾರಣವಾದ ಗುರುತು: ಬಳ್ಳಾರಿಯ 5ನೇ ವಾರ್ಡಿನಲ್ಲಿ ಬಿಎಸ್ಸಾರ್ ಪಕ್ಷದ (ಪಕ್ಷೇತರ) ಅಭ್ಯರ್ಥಿ ಕೆ. ರಮೇಶ್ ಅವರಿಗೆ ಸೀಲಿಂಗ್ ಫ್ಯಾನ್ ಬದಲಿಗೆ ಕೊಳಾಯಿ ಗುರುತು ಬಂದಿದ್ದರೆ, ಪಕ್ಷೇತರ ಅಭ್ಯರ್ಥಿ ಪಿ. ವಲಿಸಾಬ್ ಸೀಲಿಂಗ್ ಫ್ಯಾನ್ ಗುರುತು ನಿಗದಿಯಾಗಿದೆ. ವಲಿಸಾಬ್ ಕಳೆದ ಬಾರಿ ಬಿಎಸ್ಸಾರ್‌ನಲ್ಲಿ ಗುರುತಿಸಿಕೊಂಡಿದ್ದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಇನ್ನು 17ನೇ ವಾರ್ಡಿನಲ್ಲಿ ಬಿಎಸ್ಸಾರ್ ಅಭ್ಯರ್ಥಿ ಕೆ. ತಿಪ್ಪೇರುದ್ರಪ್ಪಗೆ ಕೊಳಾಯಿ ಗುರುತು ನಿಗದಿಯಾಗಿದೆ, ಪಕ್ಷೇತರ ಅಭ್ಯರ್ಥಿ ಬೆಳ್ಳಿ ಕಟ್ಟೆಪ್ಪಗೆ ಸೀಲಿಂಗ್ ಫ್ಯಾನ್ ಗುರುತು ಸಿಕ್ಕಿದೆ. 25ನೇ ವಾರ್ಡಿನ ನಸಿಮಾ ಮಾಜೀದ್ ಬಿಎಸ್ಸಾರ್ ಅಭ್ಯರ್ಥಿಯಾಗಿದ್ದು, ಇವರಿಗೆ ಬ್ಯಾಟ್ ಗುರುತು ನಿಗದಿಯಾಗಿದೆ, ಪಕ್ಷೇತರ ಅಭ್ಯರ್ಥಿ ಹಸೀನಾ ಬೀಗೆ ಸೀಲಿಂಗ್ ಫ್ಯಾನ್ ಗುರುತು ದೊರೆತಿದೆ. 28ನೇ ವಾರ್ಡಿಗೆ ಬಿಎಸ್ಸಾರ್ ಅಭ್ಯರ್ಥಿ ವಿ. ಮಹೇಶ್‌ಗೆ ಸಿಕ್ಕಿದ್ದು ಕೊಳಾಯಿ ಗುರುತು, ಪಕ್ಷೇತರ ಅಭ್ಯರ್ಥಿ ರವಿಗೆ ಸೀಲಿಂಗ್ ಫ್ಯಾನ್. ಬಿಎಸ್ಸಾರ್ ಗುರುತು ಸೀಲಿಂಗ್ ಫ್ಯಾನ್ ಎಂದು ಹೇಳಿಕೊಂಡರೆ ನಾಲ್ಕು ಪಕ್ಷೇತರರಿಗೆ ವರದಾನವಾಗಲೂಬಹುದು.
ಪೂರ್ಣ ಅಭ್ಯರ್ಥಿಗಳು ಕಣದಲ್ಲಿಲ್ಲ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್ಸಾರ್ ಪಕ್ಷ ಸೇರಿದಂತೆ ಯಾವೊಂದು ಪಕ್ಷವು ಒಂದಿಲ್ಲ ಒಂದು ಕಾರಣದಿಂದಾಗಿ ಎಲ್ಲಾ ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿಲ್ಲ. 28ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರ, 14ನೇ ವಾರ್ಡಿನ ಬಿಎಸ್ಸಾರ್ ಅಭ್ಯರ್ಥಿ ಲಾವಣ್ಯಾ ನಾಮಪತ್ರ ತಿರಸ್ಕೃತವಾಗಿವೆ. 8ನೇ ವಾರ್ಡ್, 15, 18, 26, 28, 30 ಮತ್ತು 34ನೇ ವಾರ್ಡಿನಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಇಲ್ಲ. 30 ನೇ ವಾರ್ಡ್‌ಗೆ ನಾಮಪತ್ರ ಸಲ್ಲಿಸಿದ್ದು, ಇಬ್ಬರು ಅಭ್ಯರ್ಥಿಗಳು ಪರಿಶೀಲನೆ ಸಂದರ್ಭದಲ್ಲಿ ತಿರಸ್ಕೃತರಾಗಿದ್ದಾರೆ. ಬಿಜೆಪಿಯಿಂದ  5ನೇ ವಾರ್ಡ್, 9, 13,14, 15, 26, 27, 32, 34 ಮತ್ತು 35 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳಿಲ್ಲ. 31 ವಾರ್ಡ್‌ಗಳಿಗೆ ನಾಮಪತ್ರ ಸಲ್ಲಿಸಿದ್ದು, ಪರಿಶೀಲನೆ ವೇಳೆ 6 ವಾರ್ಡ್‌ಗಳಲ್ಲಿ ನಾಮಪತ್ರಗಳು ತಿರಸ್ಕೃತವಾಗಿವೆ. ಹಿಗಾಗಿ ಯಾವುದೇ ಪಕ್ಷ 35 ವಾರ್ಡ್‌ಗಳಲ್ಲಿ ಅರ್ಭ್ಯ್ಙಗಳನ್ನು ಹೊಂದಿಲ್ಲ.
ಒಂದೇ ವಾರ್ಡಿಗೆ 14 ನಾಮಪತ್ರ: ವಿವಿಧ ಪಕ್ಷ, ಸ್ವತಂತ್ರ ಅರ್ಭ್ಯ್ಙಗಳು ಸೇರಿ 24ನೇ ವಾರ್ಡಿಗೆ 14 ನಾಮಪತ್ರಗಳು ಸಲ್ಲಿಕೆಯಾಗಿವೆ. 4ನೇ ವಾರ್ಡಿಗೆ 13, 22ನೇ ವಾರ್ಡಿಗೆ 11 ನಾಮಪತ್ರಗಳು ಸಲ್ಲಿಕೆಯಾಗಿದೆ. ಇನ್ನು 14 ಮತ್ತು 34ನೇ ವಾರ್ಡಿನಲ್ಲಿ ಎರಡೇ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 14ನೇ ವಾರ್ಡಿನಲ್ಲಿ ಜೆಡಿಎಸ್‌ನ ಬಿ. ಉಮಾದೇವಿ, ಕಾಂಗ್ರೆಸ್‌ನ ಜಿ. ಜಯಲಲಿತಾ, 34ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲನ್ ಬಿ.ಎಸ್. ಹಾಗೂ ಬಿಎಸ್ಸಾರ್ ಅಭ್ಯರ್ಥಿ ಕೆ. ನೀಲಮ್ಮ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ. ಒಟ್ಟಾರೆ ಹಲವು ವಿಷಯಗಳಲ್ಲಿ ಈ ಚುನಾವಣೆ ಕುತೂಹಲಕಾರಿಯಾಗಿದೆ.
- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.