ಸಂಪತ್ತಿನ ಬಳಕೆ ಪ್ರಜ್ಞೆ ಇರದ ದೇಶಕ್ಕೆ ಭವಿಷ್ಯವಿಲ್ಲ
ಕನ್ನಡಪ್ರಭ ವಾರ್ತೆ, ಸಂಡೂರು, ಜ. 28
ರಾಷ್ಟ್ರದ ಅಭಿವೃದ್ಧಿಗೆ ಉತ್ತಮ ಪರಿಸರ, ನೈಸರ್ಗಿಕ ಸಂಪನ್ಮೂಲಗಳು ಅವಶ್ಯಕ. ಆದರೆ ಪರಿಸರದಲ್ಲಿನ ಸಂಪನ್ಮೂಲಗಳ ಬಳಕೆ ಬಗ್ಗೆ ಸರಿಯಾದ ಪ್ರಜ್ಞೆ ಇಲ್ಲದಿದ್ದರೆ ಅಂತಹ ದೇಶಕ್ಕೆ ಭವಿಷ್ಯವಿಲ್ಲವೆಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಡಾ.ಕೆ. ರವೀಂದ್ರನಾಥ ಅಭಿಪ್ರಾಯಪಟ್ಟರು.
ಸಂಡೂರು ಪಟ್ಟಣದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾನುವಾರ ಜರುಗಿದ ಕರ್ನಾಟಕ ಪರಿಸರ ಮತ್ತು ರೈತಸ್ನೇಹಿ ಸಂಘ ಉದ್ಘಾಟಿಸಿ ಅವರು ಮಾತನಾಡಿ, ಪರಿಸರ ಮಾನವನ ಜೀವನದ ಅವಿಭಾಜ್ಯ ಅಂಗ. ನಮ್ಮ ಸಾಹಿತ್ಯ, ಶಾಸನ ಮತ್ತಿತರ ದಾಖಲೆಗಳಲ್ಲಿಯೂ ಪರಿಸರದ ವರ್ಣನೆ ಕಾಣಬಹುದು. ಅಮೆರಿಕದಂತ ಕೆಲ ದೇಶಗಳು ತಮ್ಮಲ್ಲಿಯ ನೈಸರ್ಗಿಕ ಸಂಪತ್ತನ್ನು ಹೆಚ್ಚಾಗಿ ಬಳಸದೆ, ಅನ್ಯ ದೇಶಗಳಿಂದ ಆಮದು ಮಾಡಿಕೊಂಡು ತಮ್ಮ ಸಂಪತ್ತನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗುವ ರೀತಿ ನಡೆದುಕೊಳ್ಳಲಾಗುತ್ತಿದೆ. ನಮ್ಮ ಸಂಪತ್ತನ್ನು ವಿದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ಪರಿಸರ ನಾಶದ ಪರಿಣಾಮ ಕೃಷಿ ಮೇಲೂ ಆಗುತ್ತಿದೆ. ಕೃಷಿಗೆ ಹೆಚ್ಚು ಒತ್ತು ನೀಡದ ದೇಶ ಸುಭೀಕ್ಷವಾಗಿರಲಾರದು. ಹೀಗಾಗಿ ಪರಿಸರವನ್ನು ಸಂರಕ್ಷಿಸಬೇಕಿದೆ. ಪರಿಸರ ಶಾಸ್ತ್ರ ನಮ್ಮ ಬದುಕಿನ ಶಾಸ್ತ್ರವಾಗಬೇಕಿದೆ ಎಂದು ಹೇಳಿದರು.
ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿಗಳು, ಇಂದಿನ ಹವಮಾನ ವೈಪರಿತ್ಯಕ್ಕೆ ಪರಿಸರ ನಾಶವೇ ಕಾರಣ. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪರಿಸರ ಪ್ರಜ್ಞೆ ಬೆಳೆಸಬೇಕಿದೆ. ಯಾರೊಬ್ಬರೂ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡಬಾರದು. ಜನತೆ ಸೌರಶಕ್ತಿ ಬಳಕೆಯನ್ನು ಹೆಚ್ಚು ಮಾಡಬೇಕೆಂದು ತಿಳಿಸಿದರು. ಹಂಪಿ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಚಲುವರಾಜು ಆಶಯ ನುಡಿಗಳನ್ನಾಡಿದರು. ಪ್ರಭುಮಹಾಸ್ವಾಮಿಗಳು, ಬಳ್ಳಾರಿಯ ಕಲ್ಯಾಣ ಮಹಾಸ್ವಾಮಿಗಳು, ಬಳ್ಳಾರಿ ಕ್ರೈಸ್ತ ಗುರು ವಂ.ಚೌರಪ್ಪ, ಬಿಜಾಪುರದ ಮೌಲಾನಾ ಬಷೀರ್ ಅಹಮದ್ ಉಮರಿ ಮುಂತಾದವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗಮನ ಸೆಳೆದ ನೃತ್ಯ: ಗದಗದ ಅರುಣೋದಯ ಕಲಾ ತಂಡದವರು ನಡೆಸಿಕೊಟ್ಟ ಜಾನಪದ ನೃತ್ಯ ಹಾಗೂ ಹೊಸಪೇಟೆಯ ಸಂಗೀತ ಶಿಕ್ಷಕ ಯಲ್ಲಪ್ಪ ಭಂಡಾರಗಾರ, ಸಂಡೂರಿನ ಟಿ. ಪಾರ್ಥಸಾರಥಿ, ಟಿ. ವೆಂಕಟೇಶ್ ಹಾಗೂ ಎಚ್. ಕುಮಾರಸ್ವಾಮಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು.
ಫಾದರ್ ಫ್ರಾನ್ಸಿಸ್ ಚಿನ್ನಪ್ಪ, ಕೊಟ್ಟೂರಿನ ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯರು, ಹಿರೇಹಡಗಲಿಯ ಅಭಿನವ ಹಾಲವೀರಪ್ಪಜ್ಜ ಪಂಡಿತಾರಾಧ್ಯ ಸ್ವಾಮೀಜಿ, ಹನಸಿಯ ಶಂಕರ ಸ್ವಾಮೀಜಿ, ನೀಲಗುಂದದ ಚನ್ನಬಸವ ಶಿವಯೋಗಿಗಳು, ಕುರಗೋಡಿನ ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯರು, ಹಾಗೂ ಕೂಡ್ಲಿಗಿಯ ಪ್ರಶಾಂತಸಾಗರ ಶಿವಾಚಾರ್ಯರು ಆಶೀರ್ವಚನ ನೀಡಿದರು. ಹಿರಿಯ ರೈತ ಮಾಳ್ಗಿ ಪಂಪಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪರಿಸರ ಮತ್ತು ರೈತಸ್ನೇಹಿ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ ಭೀಮಸಮುದ್ರ, ಎಂ.ವಿ. ರುದ್ರಮುನಿಯಪ್ಪ, ಕೆ. ಸತ್ಯಪ್ಪ, ಅಪ್ಪೇನಳ್ಳಿ ಕುಮಾರಸ್ವಾಮಿ, ಎಂ.ಸಿ. ಬಡ್ಲಿ, ಹೇಮರೆಡ್ಡಿ ಉಪಸ್ಥಿತರಿದ್ದರು. ಸಂತೋಷ್ಕುಮಾರ್ ಸ್ವಾಗತಿಸಿದರು. ಚರಂತಯ್ಯ ನಿರೂಪಿಸಿದರು. ಎ. ಕೃಷ್ಣಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

