ನಾಲ್ವರು ಜಾನುವಾರು ಕಳ್ಳರ ಬಂಧನ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜು. 4
ತಾಲೂಕಿನ ಅನೇಕ ಹಳ್ಳಿಗಳಲ್ಲಿ ನಿರಂತರವಾಗಿ ನಡೆಯುತ್ತಿದ್ದ ಜಾನುವಾರು ಕಳ್ಳತನ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಪೊಲೀಸರು ತಾಲೂಕಿನ ಗಿರಿಯಾಪುರ ಮಠದ ಹತ್ತಿರ ಜಾನುವಾರು ಸಮೇತ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಖವಾಸಪುರದ ಯಳವಳಿ ದಾದಾಪೀರ್, ಖಲೀಲ್, ದಿಂಡದಹಳ್ಳಿ ರವಿ, ನೆಲವಾಗಿಲು ಗ್ರಾಮದ ಮಂಜುನಾಥ ಎಂದು ಗುರುತಿಸಲಾಗಿದೆ. ಖವಾಸಪುರದ ಪೈಲ್ವಾನ್ ಸದ್ದಾಂಹುಸೇನ್, ಖವಾಸಪುರದ ಅಬ್ದುಲ್ಲಾ, ಖವಾಸಪುರದ ರಾಜಾಸಾಬ್ ಎಂಬವರು ಪರಾರಿಯಾಗಿದ್ದಾರೆ.
ತಾಲೂಕಿನ ಹಿರೇಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 40 ದಿನಗಳಿಂದ ಜಾನುವಾರುಗಳ ಕಳ್ಳತನ ನಡೆಯುತ್ತಿದ್ದು, 4 ಪ್ರಕರಣಗಳು ದಾಖಲಾಗಿದ್ದವು. ಈ ಕುರಿತು ನಿಗಾ ವಹಿಸಿದ್ದ ಎಸ್ಪಿ ಚಂದ್ರಗುಪ್ತ ನಿರ್ದೇಶನದ ಮೇರೆಗೆ ಜಾನುವಾರು ಕಳ್ಳರ ಪತ್ತೆಯಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಗೆ ಮಂಗಳವಾರ ರಾತ್ರಿ ತಾಲೂಕಿನ ಗಿರಿಯಾಪುರ ಮಠದ ಹತ್ತಿರ ಕಳ್ಳರು ಪತ್ತೆಯಾಗಿದ್ದಾರೆ. ಚಂದ್ರಪ್ಪ, ಫಕ್ಕೀರಪ್ಪ ಎಂಬವರ ಮನೆ ಮುಂದೆ ರು. 45 ಸಾವಿರ ಬೆಲೆ ಬಾಳುವ 2 ಎತ್ತು, ಒಂದು ಆಕಳು, 1 ಆಕಳು ಕರುವನ್ನು ಆರೋಪಿಗಳು ಕಟ್ಟಿ ಹಾಕಿದ್ದನ್ನು ಕಂಡು ಪೊಲೀಸರು ಬಲೆ ಬೀಸಿ, ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಸಿಪಿಐ ಶ್ರೀಕಾಂತ ಕಟ್ಟಿಮನಿ ತಿಳಿಸಿದ್ದಾರೆ.
ಕಳ್ಳತನ ಮಾಡಿದ್ದ ಜಾನುವಾರುಗಳನ್ನು 2 ವಾಹನಗಳಲ್ಲಿ ಸಾಗಾಣೆ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರ ಸಹಾಯದಿಂದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ 3 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ರು. 45 ಸಾವಿರ ನಗದು, ಜಾನುವಾರು ಕಳ್ಳತನಕ್ಕೆ ಬಳಸುತ್ತಿದ್ದ ಸುಮಾರು ರು. 9 ಲಕ್ಷ ಮೌಲ್ಯದ 2 ವಾಹನಗಳು ಮತ್ತು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಜಾನುವಾರುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಎಸ್ಪಿ ಡಾ. ಚಂದ್ರಗುಪ್ತ, ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬು, ಹೂವಿನಹಡಗಲಿ ಡಿವೈಎಸ್ಪಿ ಡಿ. ನಾಗರಾಜ ಮಾರ್ಗದರ್ಶನದಲ್ಲಿ ಸಿಪಿಐ ಶ್ರೀಕಾಂತ ಕಟ್ಟಿಮನಿ ಹಾಗೂ ಇಟ್ಟಿಗಿ ಠಾಣೆಯ ಮಹಮದ್ ರಫಿ, ಹೂವಿನಹಡಗಲಿ ಅಪರಾಧ ವಿಭಾಗ ಖಾಜಸಾಬ್, ಸಿಬ್ಬಂದಿ ರಾಜೇಂದ್ರನಾಯ್ಕ, ಕನ್ನಿಹಳ್ಳಿ ನಾಗರಾಜ, ತಿಮ್ಮಾರೆಡ್ಡಿ, ಮಂಜುನಾಥ, ಕೆ. ಸಿದ್ದಪ್ಪ, ಪೂರ್ಯಾನಾಯ್ಕ, ಗೋಪಾಲ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

