ಆಸ್ಪತ್ರೆಗೆ ಸುಸಜ್ಜಿತ ಕಟ್ಟಡವಿದೆ, ವೈದ್ಯರೇ ಇಲ್ಲ!
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು. 11
ಅದು ನೋಡಲು ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಗಂತ ನೀವೇನಾದರೂ ಆ ಆಸ್ಪತ್ರೆಗೆ ಹೋದರೆ ಇಲ್ಲಿ ನಿಮಗೆ ವೈದ್ಯರು ಸಿಗುವುದಿಲ್ಲ, ಅವರ ಚಿಕಿತ್ಸೆಯಂತೂ ದೂರದ ಮಾತು. ಅದರೆ ಅಲ್ಲಿ ಮಾತ್ರ ಖಾಲಿ ಕೋಣೆಗಳು, ಬಿಕೋ ಎನ್ನುತ್ತಿರುವ ಆಸ್ಪತ್ರೆ ಕಟ್ಟಡದ ದಿವ್ಯ ದರ್ಶನ ನಿಮಗಾಗುವುದು ಖಂಡಿತ.
ಹೌದು, ಬಳ್ಳಾರಿ ತಾಲೂಕಿನ ಮೋಕಾ ಹೋಬಳಿಯಲ್ಲಿ ಬರುವ, ಮಾಜಿ ಆರೋಗ್ಯ ಸಚಿವ, ಹಾಲಿ ಶಾಸಕ ಬಿ. ಶ್ರೀರಾಮುಲು ಅವರ ಕ್ಷೇತ್ರದ ಯರ್ರಗುಡಿ ಗ್ರಾಮದಲ್ಲಿ ರು. 85 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟನೆ ಕಾಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಥೆಯಿದು. ಕಟ್ಟಡ ನಿರ್ಮಾಣವಾಗಿ ಹಲವು ತಿಂಗಳುಗಳೇ ಕಳೆದು, ಪ್ರಾಥಮಿಕ ಆರೋಗ್ಯ ಕೇಂದ್ರ ಎಂದು ಬೋರ್ಡ್ ಹಾಕಿದ್ದು ಬಿಟ್ಟರೆ ಇಲ್ಲಿ ಯಾವುದೇ ಆರೋಗ್ಯ ಸೇವೆ ಇಲ್ಲ.
ಕೆಲ ಕಡೆಗಳಲ್ಲಿ ಆರೋಗ್ಯ ಸೇವೆ ಇರುತ್ತದೆ ಆದರೆ ಸುಸಜ್ಜಿತ ಕಟ್ಟಡ ಇರುವುದಿಲ್ಲ, ಆದರೆ ಯರ್ರಗುಡಿಯಲ್ಲಿ ರು. 85 ಲಕ್ಷ ವೆಚ್ಚದ ಎಲ್ಲಾ ವ್ಯವಸ್ಥೆಯುಳ್ಳ ಸುಸಜ್ಜಿತ ಕಟ್ಟಡವಿದೆ, ಆದರೆ ಆರೋಗ್ಯ ಸೇವೆ ಮಾತ್ರ ಇಲ್ಲದಿರುವುದು ವಿಪರ್ಯಾಸ. ಯರ್ರಗುಡಿಯಲ್ಲಿ ಆರೋಗ್ಯ ಸೇವೆ ಇಲ್ಲ ಎಂಬ ಕಾರಣದಿಂದ 2011ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಬಿ. ಶ್ರೀರಾಮುಲು ಅವರು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಏಳೆಂಟು ತಿಂಗಳ ಹಿಂದೆಯೇ ಕಟ್ಟಡ ಪೂರ್ಣಗೊಂಡಿದೆ. ಆರೋಗ್ಯ ಸೇವೆ ಇದುವರೆಗೂ ಆರಂಭಿಸಿಲ್ಲ.
ಆಸ್ಪತ್ರೆ ಇದ್ದರೂ ಫಜೀತಿ ತಪ್ಪಿಲ್ಲ: ಯರ್ರಗುಡಿ, ಹಳೆ ಯರ್ರಗುಡಿ, ಬೆಣಕಲ್ ಗ್ರಾಮಗಳು ಸೇರಿದಂತೆ ಸುತ್ತಮುತ್ತಲೂ ಗ್ರಾಮಗಳು 7-8 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿವೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆ ಎದುರಿಸುತ್ತಿದ್ದರು. ಗ್ರಾಮಗಳ ಜನರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೂ ಮೋಕಾ ಗ್ರಾಮಕ್ಕೆ ಹೋಗುವ ಫಜೀತಿ ಇತ್ತು. ಇಂತಹ ಸಮಸ್ಯೆ ಹೋಗಲಾಡಿಸಲು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಅಡಿ ರು. 85 ಲಕ್ಷ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಮಂಜೂರಾತಿ ಸಿಕ್ಕು ಹಣವೂ ಬಿಡುಗಡೆಯಾಗಿ ಇನ್ನೇನು ಪ್ರಾಥಮಿಕ ಆರೋಗ್ಯ ಕೇಂದ್ರ ಆಗುತ್ತದೆ ಎಂದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಇದೀಗ ಆಸ್ಪತ್ರೆ ಬೃಹತ್ ಕಟ್ಟಡ ಹೊಂದಿದ್ದರೂ ಚಿಕಿತ್ಸೆ ಸಿಗದೆ, ಮೋಕಾ ಆಸ್ಪತ್ರೆಯ ಮೊರೆ ಹೋಗುವ ಪರಿಸ್ಥಿತಿ ಅಲ್ಲಿನ ಗ್ರಾಮಸ್ಥರಿಗೆ ತಪ್ಪಿಲ್ಲ. ಉದ್ಘಾಟನೆ ಮುನ್ನವೇ ಆಸ್ಪತ್ರೆ ಕಿಟಕಿಯ ಗಾಜುಗಳು ಪುಡಿಯಾಗಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ಕೇಂದ್ರದ ಕಟ್ಟಡಕ್ಕೆ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್, ಪ್ರತ್ಯೇಕ ಹೈಟೆಕ್ ಜನರೇಟರ್ ಸಿಸ್ಟಂ ವ್ಯವಸ್ಥೆ ಮಾಡಲಾಗಿದೆ. ಇನ್ನು ಆಸ್ಪತ್ರೆ ಒಳಗಡೆ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ನಾಚಿಸುವ ಉತ್ತಮ ಗುಣಮಟ್ಟದ ಟೈಲ್ಸ್ ಮಾಡಲಾಗಿದೆ. ಆದರೆ ಆಸ್ಪತ್ರೆಗೆ ಮಾತ್ರ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಇಡೀ ಆಸ್ಪತ್ರೆಯಲ್ಲಿ ಪೀಠೋಪಕರಣವೇ ಇಲ್ಲ. ಈ ಕುರಿತು ಆರೋಗ್ಯ ಅಧಿಕಾರಿಗಳನ್ನು ಕೇಳಿದರೆ, ಕಟ್ಟಡ ನಿರ್ಮಾಣ ಮುಗಿಸಿ ಕಳೆದ ತಿಂಗಳು ಇಲಾಖೆಯ ಸುಪರ್ದಿಗೆ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಕಟ್ಟಡವಿದ್ದರೂ ಕಟ್ಟಡ ನಿರ್ಮಾಣ ಹೊಣೆಹೊತ್ತ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಸ್ಪತ್ರೆ ಇನ್ನು ಉದ್ಘಾಟನೆಯಾಗಿಲ್ಲ. ಇದು ಕೇವಲ ಯರ್ರಗುಡಿ ಆಸ್ಪತ್ರೆಯಲ್ಲ ಸಿಂಧವಾಳದಲ್ಲಿ ಇದೇತೆರನಾಗಿ ರು. 85 ಲಕ್ಷ ವೆಚ್ಚದಲ್ಲಿ ಸಿಂಧವಾಳ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿದ್ದರೂ ಉದ್ಘಾಟನೆಯಾಗಿಲ್ಲ.
ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗೋನಾಳ್ ರಾಜಶೇಖರಗೌಡ ಅವರನ್ನು ಸಂಪರ್ಕಿಸಿದಾಗ, ಜಿಪಂ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತಂದರೂ, ಪೀಠೋಪಕರಣ ಹಾಗೂ ಆಸ್ಪತ್ರೆ ಸಿಬ್ಬಂದಿ, ವೈದ್ಯರನ್ನು ಇನ್ನು ನೇಮಕ ಮಾಡಿಲ್ಲ ಎಂದು ಬೇಸರಿಸುತ್ತಾರೆ. ಆಸ್ಪತ್ರೆ ಕೇಂದ್ರವಿದ್ದರೂ ಪರ ಊರಿನ ಆಸ್ಪತ್ರೆ ಅವಲಂಬಿಸುವುದಂತೂ ತಪ್ಪಿಲ್ಲ ಎಂಬುದು ಗ್ರಾಮಸ್ಥರ ನೋವು.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

