ಇಂದು ಚೆಕ್ ವಿತರಣೆ ಕಾರ್ಯಕ್ರಮ
ಕೊಟ್ಟೂರು: ಕಲೆ, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಮನೋಭೂಮಿಕೆ ಒಳಗೊಂಡ ಸಮಾನ ಮನಸ್ಕರಿರುವ ಸಂಘಟನೆಯಾದ ಕಳ್ಳುಬಳ್ಳಿ ವತಿಯಿಂದ ಪ್ರತಿಭಾನ್ವಿತ ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಹಾಯ ಹಸ್ತ ನೀಡುವ ತ್ರೈಮಾಸಿಕ ಸಮಾರಂಭವನ್ನು ಜು. 14ರಂದು ಏರ್ಪಡಿಸಲಾಗಿದೆ ಎಂದು ಕಳ್ಳುಬಳ್ಳಿ ಸಮುದಾಯದ ಅಧ್ಯಕ್ಷ ಎಂ.ಎಂ.ಜೆ. ಸ್ವರೂಪಾನಂದ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಈ ಬಾರಿಯ ಶಿಕ್ಷಣ ಪ್ರೋತ್ಸಾಹಕ್ಕೆ 36 ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇವರೆಲ್ಲರಿಗೂ ಭಾನುವಾರ ನಡೆಯುವ ಸಮಾರಂಭದಲ್ಲಿ ಸಹಾಯ ಧನದ ಚೆಕ್ನ್ನು ವಿತರಿಸಲಾಗುವುದು. ಸಮಾರಂಭವನ್ನು ಶಾಸಕ ಎಸ್. ಭೀಮಾನಾಯ್ಕ ಉದ್ಘಾಟಿಸಲಿದ್ದಾರೆ. ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ, ಹಿರಿಯೂರು ಶಾಸಕ ಡಿ. ಸುಧಾಕರ್ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ನಾಳೆ ವಿಚಾರ ಸಂಕಿರಣ
ಬಳ್ಳಾರಿ: ಕರ್ನಾಟಕ ದಲಿತ ಸಂಘರ್ಫ ಸಮಿತಿ ಜಿಲ್ಲಾ ಘಟಕ ಪ್ರೊ. ಬಿ. ಕೃಷ್ಣಪ್ಪ ಅವರ 75ನೇ ಜನ್ಮದಿನದ ನಿಮಿತ್ತ ಜಿಲ್ಲಾ ಮಟ್ಟದ ದಲಿತ ಚಳುವಳಿ ವಿಚಾರ ಸಂಕಿರಣವನ್ನು ಜು. 15ರಂದು ಬೆಳಗ್ಗೆ 11ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದೆ.
ವ್ಯಕ್ತಿ ಬಳಿಯಿದ್ದ ರು. 2.36 ಲಕ್ಷ ಕಳ್ಳತನ
ಬಳ್ಳಾರಿ: ಬ್ಯಾಂಕಿನಲ್ಲಿ ವ್ಯಕ್ತಿಯೋರ್ವನ ಬಳಿ ಇದ್ದ ರು. 2.36 ಲಕ್ಷ ಕಳ್ಳತನ ಮಾಡಿ ಪರಾರಿಯಾದ ಘಟನೆ ನಗರದ ಕಾಳಮ್ಮ ರಸ್ತೆಯಲ್ಲಿರುವ ಕರೂರ್ ವೈಶ್ಯಾ ಬ್ಯಾಂಕಿನಲ್ಲಿ ನಡೆದಿದೆ.
ಜು.12ರಂದು ಬೆಳಗ್ಗೆ ರಂಗಸ್ವಾಮಿ ಎನ್ನುವವರು ವಿನಾಯಕ ನಗರದಲ್ಲಿರುವ ರಾಧಾಕೃಷ್ಣ ಆಯಿಲ್ ಸೆಂಟರ್ಗೆ ಸೇರಿದ ರು. 6,28,322 ಹಣ ತೆಗೆದುಕೊಂಡು ಕಾಳಮ್ಮ ಸರ್ಕಲ್ನಲ್ಲಿರುವ ಕರೂರ್ ವೈಶ್ಯಾ ಬ್ಯಾಂಕಿಗೆ ಹೋಗಿ, ಅಲ್ಲಿ ರು. 3,92,000 ಜಮಾ ಮಾಡಿ, ಉಳಿದ ಹಣ ಬ್ಯಾಗ್ನಲ್ಲಿ ಇಟ್ಟುಕೊಂಡು ಬ್ಯಾಂಕ್ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ಕುಳಿತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಹಣದ ಬ್ಯಾಗ್ ನೋಡಿದಾಗ ಬ್ಯಾಗ್ ಅಲ್ಲಿರಲಿಲ್ಲ, ರು. 2,36,322 ಇದ್ದ ಬ್ಯಾಗ್ನ್ನು ಯಾರೋ ಎಗರಿಸಿಕೊಂಡು ಹೋಗಿದ್ದರು. ಈ ಕುರಿತು ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಪಾದಯಾತ್ರೆ
ಬಳ್ಳಾರಿ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗುರುಗುಂಡೇಶ್ವರ ಮಠದ ಪೀಠಾಧ್ಯಕ್ಷರಾದ ನಂಜಾವಧೂತರ ಕ್ರಮವನ್ನು ಖಂಡಿಸಿ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಜು.14ರಂದು ಬೆಳಗ್ಗೆ 9ಕ್ಕೆ ಶಿರಾದಿಂದ ತುಮಕೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಪಾಟೀಲ್ ತಿಳಿಸಿದ್ದಾರೆ.
ಇಂದಿನಿಂದ ಕಾರ್ಯಕ್ರಮ
ಕುರುಗೋಡು: ಪಟ್ಟಣ ಸಮೀಪದ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರ ಗುರು ಮಹಾಂತರ ಮಠದಲ್ಲಿ ಲಿಂಗಾಂಗ ಸಾಮರಸ್ಯದ 12ನೇ ಪುಣ್ಯ ಸಂಸ್ಮರಣೋತ್ಸವದ ನಿಮಿತ್ತ ಜು.14ರಿಂದ 24 ವರೆಗೆ ನಾನಾ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರುಗಲಿವೆ. ಜು. 14ರ ಬೆಳಗ್ಗೆ, ತೆಕ್ಕಲಕೋಟೆ ಕಂಬಾಳಿ ಮಠದ ವೀರಭದ್ರ ಶಿವಾಚಾರ್ಯರ ನೇತೃತ್ವದಲ್ಲಿ ಧರ್ಮ ಧ್ವಜಾರೋಹಣ, ಸಂಜೆ ಇಟಿಗಿ ಭೀಮಾಂಬಿಕಾ ಪುರಾಣ ಪ್ರವಚನ ಪ್ರಾರಂಭಗೊಳ್ಳಲಿದೆ. ಜು. 20ರಂದು ಜಿಲ್ಲಾ ಆಯುಷ್ ಇಲಾಖೆ ಹಾಗೂ ಶ್ರೀಮಠದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಮೂಲವ್ಯಾಧಿ ಸಂಬಂಧಿತ ಕಾಯಿಲೆಗೆ ಕ್ಷಾರ ಸೂತ್ರ ಉಚಿತ ಚಿಕಿತ್ಸೆ ಶಿಬಿರ ನಡೆಯಲಿದೆ. 22ರಂದು ಗುರುಪೌರ್ಣಿಮೆ ನಿಮಿತ್ತ ಗುರುನಮನ, 23ರಂದು ಪ್ರತಿಭಾ ಪುರಸ್ಕಾರ, 24ರಂದು ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ಮಹಾ ರುದ್ರಾಭಿಷೇಕ ಜರುಗಲಿವೆ. ಶ್ರೀಮಠದ ವಾಮದೇವ ಶಿವಾಚಾರ್ಯ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಜೂಜಾಟ: ಇಬ್ಬರ ಬಂಧನ
ಬಳ್ಳಾರಿ: ಇಸ್ಪೀಟ್ ಜೂಜಾಟ ಅಡ್ಡೆಯ ಮೇಲೆ ಕೊಟ್ಟೂರು ಪೊಲೀಸರು ದಾಳಿ ಮಾಡಿ ಏಳು ಜನರನ್ನು ಬಂಧಿಸಿ, ಅವರಿಂದ ರು. 34,800 ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡ ಘಟನೆ ಕೊಟ್ಟೂರು ಸಮೀಪದ ಹನುಮನಹಳ್ಳಿಯಲ್ಲಿ ನಡೆದಿದೆ. ಹನುಮನಹಳ್ಳಿಯ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊಟ್ಟೂರು ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಇಬ್ಬರನ್ನು ಬಂಧಿಸಿ, ಅವರಿಂದ ರು. 34,800 ಹಾಗೂ ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಡಿದು ವ್ಯಕ್ತಿ ಸಾವು
ಬಳ್ಳಾರಿ: ಹಾವು ಕಡಿದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತೋರಣಗಲ್ನಲ್ಲಿ ಶನಿವಾರ ನಡೆದಿದೆ. ಮೃತನನ್ನು ಉತ್ತರಪ್ರದೇಶದ ಜೋಹನ್ಪುರ ಜಿಲ್ಲೆಯ ಮಿಲನಾಪುರ ಗ್ರಾಮದವನು ಎನ್ನಲಾಗಿದ್ದು, ಮೃತನ ಹೆಸರು ತಿಳಿದುಬಂದಿಲ್ಲ. ಜು. 7ರಂದು ಮನೆಯಲ್ಲಿ ಮಲಗಿದ್ದಾಗ ಬೆಳಗ್ಗೆ 4ರ ಸುಮಾರು ಹಾವು ಕಡಿದಿದೆ. ವಿಷ ಏರಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿದ್ದು, ಅಂದು ಸಂಜೆ ಹೊತ್ತಿಗೆ ವಿಷ ಏರಿದ್ದ ಹಿನ್ನೆಲೆಯಲ್ಲಿ ತೋರಣಗಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದ್ದ. ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ. ಈ ಕುರಿತು ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

