ಬಿಸಿಲೂರಿನ ಜನತೆಗಿಲ್ಲ ಅನ್ನಭಾಗ್ಯ
ಹಗರಿಬೊಮ್ಮನಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಅನ್ನಭಾಗ್ಯ ಯೋಜನೆ ಜಾರಿಗೊಂಡು ಹದಿನೈದು ದಿನಗಳು ಕಳೆದರೂ ಬಿಸಿಲೂರು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮಾತ್ರ ಅನ್ನಭಾಗ್ಯ ಜಾರಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
ಬಿಪಿಎಲ್ ಕಾರ್ಡ್ ಫಲಾನುಭವಿಗಳ ಹೆಬ್ಬೆಟ್ಟು ಗುರುತು ಪಡೆಯುವ ಸಮಯದಲ್ಲಿ ಕಂಪ್ಯೂಟರ್ ಆಪರೇಟರ್ ಮಾಡಿದ ಎಡವಟ್ಟಿನಿಂದಾಗಿ ರು. 1ಗೆ ಕೆ.ಜಿ. ಅಕ್ಕಿ ಯೋಜನೆಯಿಂದ ಇಲ್ಲಿನ ಬಡವರು ವಂಚಿತರಾಗುವಂತಾಗಿದೆ. ಅನ್ನಭಾಗ್ಯದ ಅಕ್ಕಿ ತರುವ ಕನಸಿನಲ್ಲೇ ಕೈಯಲ್ಲಿ ಚೀಲ, ರು. 30 ಹಿಡಿದು ನ್ಯಾಯಬೆಲೆ ಅಂಗಡಿಗಳಿಗೆ ತೆರಳಲು ಸಿದ್ಧರಾಗಿದ್ದ ಜನತೆಗೆ ಮಾತ್ರ ನಿರಾಸೆಯಾಗಿದೆ. ಅನ್ನಭಾಗ್ಯ ತಮಗೆ ಸಿಗುವುದೋ ಇಲ್ಲವೋ ಎಂಬ ಆತಂಕ ಬಿಸಿಲೂರಿನ ಬಿಪಿಎಲ್ ಪಡಿತರ ಚೀಟಿದಾರರ ಮನದಲ್ಲಿ ಸದ್ಯ ದೊಡ್ಡದಾಗಿ ಮೂಡಿದೆ.
ಈ ಮಧ್ಯೆ ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿನ ಸರ್ಕಾರಿ ಆಹಾರ ಉಗ್ರಾಣ ನಿಗಮದ ಗೋದಾಮುಗಳಲ್ಲಿ ತಾಲೂಕಿನ 47 ಸರ್ಕಾರಿ ನ್ಯಾಯಬೆಲೆ ಅಂಗಡಿಗಳ 18,005 ಬಿಪಿಎಲ್ ಪಡಿತರ ಚೀಟಿಗಳಿಗೆ ವಿತರಿಸಲು 5 ಸಾವಿರ ಟನ್ನಷ್ಟು ಅಕ್ಕಿ ದಾಸ್ತಾನು ಮಾಡಲಾಗಿದೆ. ಬಂದಿರುವ ದಾಸ್ತಾನು ಪೈಕಿ 45 ನ್ಯಾಯಬೆಲೆ ಅಂಗಡಿಗಳಿಗೆ ಅಕ್ಕಿ ಪೂರೈಕೆ ಮಾಡಿದ್ದು, ಹಲಗಾಪುರ, ಕಡ್ಲಬಾಳು ನ್ಯಾಯಬೆಲೆ ಅಂಗಡಿಗಳಿಗೆ ಪೂರೈಕೆ ಮಾಡುವುದಷ್ಟೆ ಬಾಕಿ ಇದೆ ಎಂದು 'ಕನ್ನಡಪ್ರಭ'ಕ್ಕೆ ಆಹಾರ ನಿಗಮದ ತಾಲೂಕು ವ್ಯವಸ್ಥಾಪಕ ಕೊಡಿಹಳ್ಳಿ ರಾಮಣ್ಣ ತಿಳಿಸಿದ್ದಾರೆ.
ವಿಳಂಬಕ್ಕೆ ಕಾರಣವೇನು?: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಯೋವುಟ್ರಿಕ್ ವಿವರ ಪಡೆಯಲು ತೆರೆಯಲಾಗಿದ್ದ ಗಣಕಯಂತ್ರ ಕೇಂದ್ರದಲ್ಲಿ ಬಿಪಿಎಲ್ ಕಾರ್ಡ್ ಫಲಾನುಭವಿ ಕುಟುಂಬದ ಪ್ರತಿ ಸದಸ್ಯರ ಹೆಬ್ಬೆಟ್ಟು ಗುರುತು ಪಡೆಯುವ ವೇಳೆ ಕಂಪ್ಯೂಟರ್ ಆಪರೇಟರ್ ಮಾಡಿದ ಎಡವಟ್ಟಿನಿಂದಾಗಿ ತಾಲೂಕಿನ ಸುಮಾರು 3,800 ಕುಟುಂಬಗಳು ಬಿಪಿಎಲ್ ಕಾರ್ಡ್ನಿಂದ ವಂಚಿತವಾಗುವಂತಾಯಿತು. ಈ ಎಲ್ಲ ಕುಟುಂಬಗಳು ಅನ್ನಭಾಗ್ಯದಿಂದ ದೂರ ಉಳಿದವು. ಈ ಸಂಬಂಧ 'ಕನ್ನಡಪ್ರಭ' ಈ ಹಿಂದೆ ವಿಶೇಷ ವರದಿ ಪ್ರಕಟಿಸಿತ್ತು.
ಅನ್ನಭಾಗ್ಯದಡಿ ಅಕ್ಕಿ ವಿತರಿಸಲು ಮುಂದಾದರೆ ಹೆಬ್ಬೆಟ್ಟು ಎಡವಟ್ಟಿನಿಂದಾಗಿ ಕಾರ್ಡ್ ವಂಚಿತರಿಂದ ಗ್ರಾಮಗಳಲ್ಲಿ ಭಾರಿ ಪ್ರತಿರೋಧ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಹೆಬ್ಬೆಟ್ಟು ಗುರುತು ಸರಿಪಡಿಸಿದ ಮೇಲೆಯೇ ಅಕ್ಕಿ ವಿತರಿಸಲು ಆಹಾರ ಇಲಾಖೆಯೇ ಸೂಚಿಸಿದೆಯಂತೆ. ಸದ್ಯ ಪ್ರತಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಹೆಬ್ಬೆಟ್ಟು ಎಡವಟ್ಟಿನಿಂದಾಗಿ ಲ್ಯಾಪ್ಸ್ ಆಗಿರುವ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಕಂಪ್ಯೂಟರ್ ಸೆಂಟರ್ಗೆ ಕರೆತಂದು ಸರಿಯಾಗಿ ಹೆಬ್ಬೆಟ್ಟು ಗುರುತು ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಯಾವುದೋ ಕುಂಟುನೆಪ ಹೇಳಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ವಿಳಂಬವಾಗುತ್ತಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಕ್ಷಣ ಎಲ್ಲ ಅಡೆತಡೆಗಳನ್ನು ಸರಿಪಡಿಸಿ ಅನ್ನಭಾಗ್ಯದಡಿ ಬಡವರಿಗೆ ಅಕ್ಕಿ ವಿತರಿಸುವಂತೆ ಆಗ್ರಹಿಸಿದ್ದಾರೆ.
-ಹುಳ್ಳಿ ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

