ಬಳ್ಳಾರಿ

ಹಳೇ ದ್ವೇಷ: ಯುವಕನ ಕೊಲೆ - 15 ದಿನಗಳ ಬಳಿಕ ಶವ ಪತ್ತೆ

Published On :

ಕೂಡ್ಲಿಗಿ: ಹಳೇ ದ್ವೇಷದ ಹಿನ್ನೆಲೆಯಲ್ಲಿ ತಾಲೂಕಿನ ಬಂಡೆಬಸಾಪುರ ತಾಂಡಾದ ಯುವಕನೋರ್ವ ಕೊಲೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಬಂಡೆಬಸಾಪುರ ತಾಂಡಾದ ಉಮೇಶ್ ನಾಯ್ಕ (23) ಎಂಬ ಯುವಕನೇ  ಕೊಲೆಯಾದ ದುರ್ದೈವಿ. ಕೊಲೆಯಾಗಿ 15 ದಿನಗಳ ಅನಂತರ ಈತನ ಶವ ಪತ್ತೆಯಾಗಿದೆ. ಈ ಬಗ್ಗೆ ಕೂಡ್ಲಿಗಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಯುವಕನ ಶವ ಗುರುತು ಸಿಗದಂತೆ ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಮೃತನು ಉಟ್ಟಿದ್ದ ಬಟ್ಟೆ ಆಧರಿಸಿ ಆತನ ತಾಯಿ ಗುರುತಿಸಿದ್ದಾಳೆ. ದೇಹದ ಭಾಗಗಳನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಯಾವ ರೀತಿ ಕೊಲೆಯಾಗಿದ್ದಾನೆ ಎಂಬುದು ತಿಳಿಯುತ್ತದೆ ಎಂದು ಕೂಡ್ಲಿಗಿ ಸಿಪಿಐ ಕಲ್ಲೇಶಪ್ಪ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಹಳೇ ದ್ವೇಷ?: ಮೂರು ವರ್ಷಗಳ ಹಿಂದೆ ತನ್ನ ಸ್ವಗ್ರಾಮ ಬಂಡೆಬಸಾಪುರ ತಾಂಡಾದ  ಯುವತಿಯೋರ್ವಳನ್ನು ಉಮೇಶ್ ನಾಯ್ಕ ಅಪಹರಿಸಿದ್ದ ಬಗ್ಗೆ ಕೂಡ್ಲಿಗಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅನಂತರ ಭಯದಿಂದ ಆತನು ಅಂದಿನಿಂದ ಗೋವಾ ಮತ್ತಿತರ ಕಡೆ ಡ್ರೈವರ್ ಆಗಿ ವೃತ್ತಿ ಮಾಡುತ್ತಾ ಊರಿಗೆ ಆಗಮಿಸಿರಲಿಲ್ಲ. ಜು. 14ರಂದು ಸಂಬಂಧಿಕರ ಮದುವೆ ನಿಮಿತ್ತ ಊರಿಗೆ ಧಾವಿಸಿದ್ದ. ಅಂದು ಉಮೇಶ್ ಕಾಣೆಯಾದವನು ಜು. 29ರಂದು ಸೋಮವಾರ ಹೆಣವಾಗಿ ಪತ್ತೆಯಾಗಿದ್ದಾನೆ. ಅಪಹರಣ ಪ್ರಕರಣದ ಹಿನ್ನೆಲೆಯಲ್ಲಿ ಯುವತಿ ಸಂಬಂಧಿಕರಾದ ಗೋವಿಂದನಾಯ್ಕ, ದೇವರಾಜನಾಯ್ಕ, ಗುಂಡಾನಾಯ್ಕ ಸೇರಿ 6 ಜನರ ವಿರುದ್ಧ ಕೂಡ್ಲಿಗಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆಯಾದ ಯುವಕನ ತಾಯಿ ಪೀಕೀಬಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್‌ಪಿ ಗಜಕೋಶ್, ಸಿಪಿಐ ಓ.ಬಿ. ಕಲ್ಲೇಶಪ್ಪ, ಪಿಎಸ್‌ಐ ಎರ್ರಿಸ್ವಾಮಿ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.