ಬಳ್ಳಾರಿ

ಅನ್ನದಾತನ ಮೇಲೆ ಮೂಡಿದ ಬರದ ಛಾಯೆ

Published On :

ಹಗರಿಬೊಮ್ಮನಹಳ್ಳಿ: ಕಳೆದ ಹಲವಾರು ದಿನಗಳಿಂದ ರಾಜ್ಯದಲ್ಲಿ ಬಿರುಸಿನ ಮಳೆ ಸುರಿದು ಹಲವು ಜಿಲ್ಲೆಗಳಲ್ಲಿ ಅವಾಂತರಗಳನ್ನು ಸೃಷ್ಟಿಸಿ, ಅನೇಕ ಗ್ರಾಮಗಳು ಜಲಾವೃತಗೊಂಡಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೆ ಬಳ್ಳಾರಿ ಜಿಲ್ಲೆಯ ಎರಡ್ಮೂರು ತಾಲೂಕುಗಳಲ್ಲಿ ಮಾತ್ರ ಮಳೆರಾಯನ ದರ್ಶನವಿಲ್ಲ.
ಹೌದು, ಈ ಬಾರಿ ಮುಂಗಾರು ಭರ್ಜರಿಯಾಗಿ ಆರಂಭಗೊಂಡಿದ್ದು, ಬಿತ್ತಿದ ಬೆಳೆ ಹೆಚ್ಚು ಇಳುವರಿ ಕೊಡುತ್ತದೆ ಎಂದು ನಿರೀಕ್ಷಿಸಿ, ಆಶಾ ಭಾವನೆಯಿಂದಲೇ ಸಾವಿರಾರು ರು. ಖರ್ಚು ಮಾಡಿ ಬಿತ್ತನೆ ಮಾಡಿದ್ದ ಅನ್ನದಾತನಿಗೆ ಮುಂಗಾರು ಕೈಕೊಟ್ಟಿದ್ದರಿಂದ ಭಾರಿ ನಿರಾಸೆಯಾಗಿದೆ. ಎರಡು ವರ್ಷಗಳ ಸತತ ಬರಗಾಲದಿಂದ ಕಂಗಾಲಾಗಿದ್ದ ರೈತರು, ನೆಲ ಬಿಟ್ಟು ಮೇಲೆ ಬಂದ ಬೆಳೆ, ಮಳೆ ಇಲ್ಲದೇ ಒಣಗುತ್ತಿರುವುದನ್ನು ಕಂಡು ಮಮ್ಮಲ ಮರುಗುತ್ತಿದ್ದಾರೆ. ಎಕರೆಗಟ್ಟಲೆ ಬೆಳೆ ಕಣ್ಣೆದುರಿಗೆ ಒಣಗುತ್ತಿರುವುದನ್ನು ಕಂಡ ಹಗರಿಬೊಮ್ಮನಹಳ್ಳಿ ತಾಲೂಕಿನ ಹತ್ತಾರು ಗ್ರಾಮಗಳ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಖರ್ಚಾದ ಹಣವೂ ಮರಳುವುದಿಲ್ಲ: ಹಗರಿಬೊಮ್ಮನಹಳ್ಳಿ ತಾಲೂಕಿನ ಕಾತ್ಯಾಯಿನಿಮರಡಿ, ಕಡ್ಲಬಾಳು, ಬ್ಯಾಲಾಳು, ಶಿವಾನಂದನಗರ, ಬ್ಯಾಸಿಗಿದೇರಿ, ಆನಂದದೇವನಹಳ್ಳಿ, ಹೊಸ ಆನಂದದೇವನಹಳ್ಳಿ, ಹರಗೊಂಡನಹಳ್ಳಿ, ಎಂ.ಬಿ. ಕಾಲೋನಿ, ಸೊಬಟಿ, ನಂದಿಪುರ ಗ್ರಾಮಗಳ ನೂರಾರು ರೈತರ ಸಾವಿರಾರು ಎಕರೆಯಲ್ಲಿ ಬಿತ್ತಿದ ಬೆಳೆ ಸದ್ಯ ಮಳೆ ಇಲ್ಲದೆ ಒಣಗುತ್ತಿದೆ. ಎಕರೆಗೆ ರು. 10ರಿಂದ 15 ಸಾವಿರ ಖರ್ಚು ಮಾಡಿ ಗೊಬ್ಬರ, ಬೀಜ, ಕೂಲಿ ಕಾರ್ಮಿಕರಿಗೆ ನೀಡಿದ್ದಾರೆ. ಆದರೆ ಆರಂಭಶೂರತ್ವ ತೋರಿದ ವರುಣ ಮತ್ತೆ ಬಾರದಿರುವುದನ್ನು ನೋಡಿದರೆ ಬಿತ್ತನೆಗೆ ಮಾಡಿದ ಖರ್ಚಿನ ಹಣ ಕೂಡ ಮರಳುವುದಿಲ್ಲ ಎಂಬುದು ರೈತರ ಅಳಲು.
ಜೀವ ಹಿಡಿದ ಬೆಳೆ: ಅಲ್ಪ ಸ್ವಲ್ಪ ಬಂದ ಮುಂಗಾರು ಮಳೆಗೆ ಹಸಿಯಾಗಿದ್ದ ಜಮೀನಿನಲ್ಲಿ ರೈತರು ಸಾಲ-ಸೋಲ ಮಾಡಿ ಜೋಳ, ಗೋವಿನಜೋಳ, ಶೇಂಗಾ, ಹೆಸರು, ಸಜ್ಜೆ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆದರೆ ಸಕಾಲಕ್ಕೆ ಮಳೆಯಾಗದೇ ಇರುವುದರಿಂದ ಆಗಾಗ ಬಂದ ಜಿಟಿಜಿಟಿ ಮಳೆಗೆ ಜೀವ ಹಿಡಿದಿರುವ ಬೆಳೆ ಕೂಡ ಈಗ ಬಿಸಿಲಿನ ತಾಪಕ್ಕೆ ಜೀವ ಬಿಡುವ ಹಂತಕ್ಕೆ ತಲುಪಿದೆ. ತಮ್ಮ ಹೊಲಗಳಿಗೆ ಹೋಗಿ ಒಣಗುತ್ತಿರುವ ಬೆಳೆಯನ್ನು ನೋಡುತ್ತಾ ರೈತರು ಸಂಕಟಪಡುತ್ತಿದ್ದಾರೆ. ವಾರದ ಹಿಂದೆ ರಾಜ್ಯದ ಹಲವೆಡೆ ಅಷ್ಟೇ ಏಕೆ ಪಕ್ಕದ ಹೊಸಪೇಟೆ, ಸಂಡೂರು ತಾಲೂಕು, ಕೊಟ್ಟೂರು ಭಾಗಕ್ಕಾದ ಮಳೆ ಈ ತಾಲೂಕುಗಳಲ್ಲಿ ಆಗಿಲ್ಲ. ಇದರಿಂದ ಅರ್ಧಕ್ಕೆ ಬೆಳೆದು ನಿಂತ ಪೈರು ಕ್ರಮೇಣ ಒಣಗುತ್ತಿದೆ.
ಎರಡು ತಾಲೂಕಿಗೆ ಸತತ ಬರ: ಜಿಲ್ಲೆಯ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ತಾಲೂಕಿಗೆ ಸತತ ಬರ ಕಾಡುತ್ತಲೇ ಇದೆ. ಮೊದಲೇ ಬರ ಪ್ರದೇಶಗಳೆಂದು ಕರೆಯಿಸಿಕೊಳ್ಳುವ ಈ ತಾಲೂಕಿನಲ್ಲಿ ನೀರಾವರಿ ಕೃಷಿಯೂ ಅಷ್ಟಕ್ಕಷ್ಟೇ. ಈ ಎರಡು ತಾಲೂಕಿನಲ್ಲಿ ತುಂಗಭದ್ರಾ ನದಿ ಹಾಯ್ದು ಹೋಗಿದ್ದರೂ ನೀರಾವರಿ ಸೌಲಭ್ಯವಿಲ್ಲ. ದಶಕಗಳ ಕಾಲ ಹೋರಾಟ ನಡೆಸಿದ್ದಕ್ಕೆ ಕಳೆದ ವರ್ಷ ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನು ಬಿಜೆಪಿ ಸರ್ಕಾರ ಲೋಕಾರ್ಪಣ ಮಾಡಿದೆ. ಆದರೆ ಅದರಿಂದ ಹೆಚ್ಚು ಪ್ರದೇಶಕ್ಕೆ ನೀರು ಒದಗುವುದಿಲ್ಲ. ಈಗಾಗಲೇ ಎರಡು ವರ್ಷಗಳಿಂದ ಬರಕ್ಕೆ ತುತ್ತಾಗಿರುವ ಎರಡು ತಾಲೂಕುಗಳ ರೈತರು ಈ ಬಾರಿಯೂ ಬರದ ಛಾಯೆಗೆ ಒಳಗಾಗುವ ಲಕ್ಷಣಗಳು ಕಾಣುತ್ತಿವೆ.
ಎರಡು ವರ್ಷಗಳಿಂದ ಉತ್ತಮ ಮಳೆ ಕಾಣದೆ ಕಾದಿರುವ ಭೂಮಿ ತಾಯಿ ಒಡಲು, ಹೆಚ್ಚು ಮಳೆ ಇಲ್ಲದೇ ತಣ್ಣಗಾಗಿಲ್ಲ. ಇದರಿಂದಾಗಿ ಅಲ್ಪಸ್ವಲ್ಪ ಕಾಣುತ್ತಿದ್ದ ಹಸಿರು ಸದ್ಯ ಕಾಣದಾಗಿದೆ. ಭಕಾಸುರ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ ಈ ತಾಲೂಕುಗಳ ರೈತರ ಸ್ಥಿತಿ. ಮೊದಲೇ ಬಿತ್ತನೆಗಾಗಿ ಸಾಕಷ್ಟು ಸಾಲ ಮಾಡಿರುವ ರೈತರು ಈಗ ಅವಶ್ಯಕವಿರುವ ಮಳೆ ಬಾರದಿರುವುದನ್ನು ಕಂಡು ಸಾಲ ಮರಳಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಮುಂಗಾರು ಕೈಕೊಟ್ಟಿದ್ದು ಆಯಿತು, ಹಿಂಗಾರು ಮಳೆಯಾದರೂ ತಮ್ಮ ಕೈ ಹಿಡಿಯುವುದೇ ಎಂದು ಮುಗಿಲಿನತ್ತ ಚಿತ್ತ ನೆಟ್ಟಿದ್ದಾರೆ ಈ ರೈತರು.
-ಬಸವರಾಜ ಕರ್ಕಿಹಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.