ಬಳ್ಳಾರಿ

ಹಿಮ್ಮುಖವಾಗಿ ಹರಿದ ತುಂಗಭದ್ರೆ: ಬತ್ತಿದ ಹಳ್ಳಕ್ಕೆ ಜೀವಕಳೆ

Published On :

ಹಗರಿಬೊಮ್ಮನಹಳ್ಳಿ: ಅತ್ತ ತುಂಗಭದ್ರೆ ಭರ್ತಿಯಾಗಿ ಪ್ರವಾಹದ ಭೀತಿಯುನ್ನುಂಟು ಮಾಡುತ್ತಿರುವಾಗಲೇ ಇತ್ತ ತುಂಗಭದ್ರಾ ಜಲಾಶಯದ ಹಿನ್ನೀರು ಬಿಸಿಲೂರು ಹಗರಿಬೊಮ್ಮನಹಳ್ಳಿ ತಾಲೂಕಿನ ಜೀವನಾಡಿ ಹಗರಿ ಹಳ್ಳಕ್ಕೆ ಜೀವಕಳೆ ತಂದಿದೆ.
ಮಳೆ ಬಾರದೇ ನೀರಿಲ್ಲದೆ ಬತ್ತಿರುವ ಹಗರಿ ಹಳ್ಳದಲ್ಲಿ ಈಗ ರಭಸವಾಗಿ ತುಂಗಭದ್ರೆಯ ಹಿನ್ನೀರು ಹರಿಯುತ್ತಿದೆ. ಮಂಗಳವಾರ ಸಂಜೆಯಿಂದಲೇ ಹಳ್ಳಕ್ಕೆ ಹಿನ್ನೀರು ಹರಿದು ಬರುತ್ತಿದ್ದು, ಸುತ್ತಲಿನ ರೈತರಲ್ಲಿ ಸಂತಸ ಮೂಡುವಂತಾಗಿದೆ.
ಹಗರಿ ಹಳ್ಳದ ಮಧ್ಯೆ ಜೆಸಿಬಿ ಯಂತ್ರಗಳಿಂದ ಕಾಲುವೆ ತೆಗೆದು ಜಲಾಶಯದ ಹಿನ್ನೀರನ್ನು ಹಿಮ್ಮುಖವಾಗಿ ಹರಿಸಿ, ಸದಾಕಾಲ ನೀರಿನ ಕ್ಷಾಮ ಎದುರಿಸುತ್ತಿರುವ ಹಗರಿ ಹಳ್ಳದ ಸುತ್ತಲು ಅಂರ್ತಜಲ ವೃದ್ಧಿಸುವ ಸಾಮಾಜಿಕ ಕಾಳಜಿಯುತ ಕಾರ್ಯ, ಎಂಟು ವರ್ಷಗಳಿಂದ ಈ ಭಾಗದಲ್ಲಿನ ರೈತರ ಪರಿಶ್ರಮದಿಂದ ನಡೆಯುತ್ತಿದೆ. ಈ ಸಲ ಸ್ಥಳೀಯ ಶಾಸಕ ಭೀಮಾನಾಯ್ಕ ಸ್ವಂತ ಖರ್ಚಿನಲ್ಲಿ ಹಿಟಾಚಿ ಯಂತ್ರಗಳಿಂದ ಹಳ್ಳದಲ್ಲಿ ಕಾಲುವೆ ತೋಡಿಸುವ ಕಾರ್ಯ ಆರಂಭಿಸುವ ಮೂಲಕ ಈ ಭಾಗದ ರೈತರ ಹೊಲಗಳಲ್ಲಿ ಅಂತರ್ಜಲ ವೃದ್ಧಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
30 ಗ್ರಾಮಗಳಿಗೆ ಉಪಯುಕ್ತ: ಟಿ.ಬಿ. ಡ್ಯಾಂ ಭರ್ತಿಯಾದಾಗ ಮಾತ್ರ ಹಿನ್ನೀರನ್ನು ಹಳ್ಳಕ್ಕೆ ಹಿಮ್ಮುಖವಾಗಿ ಹರಿಸಲು ಸಾಧ್ಯ. ಹೀಗಾಗಿ ನದಿಗೆ ವ್ಯರ್ಥವಾಗಿ ಹರಿಯುವ ಹೆಚ್ಚು ನೀರನ್ನು ಹಳ್ಳದ ಕಡೆಗೆ ತಿರುಗಿಸಿ ಅಂತರ್ಜಲ ವೃದ್ಧಿಸಲು ಬಳಸಲಾಗುತ್ತದೆ. ಇದರಿಂದ ಜಲಾಶಯದ ಪಾಲಿನ ನೀರಿಗೇನೂ ಖೋತಾ ಆಗಲಾರದು. ಹಿನ್ನೀರು ಹಗರಿ ಹಳ್ಳಕ್ಕೆ ಬಂದರೆ ಭೂಮಿಯ ಅಳಕ್ಕೆ ಇಂಗುವುದರಿಂದ ಹಳ್ಳದ ಸುತ್ತಮುತ್ತ ಇರುವ ಹಳೇ ಹಗರಿಬೊಮ್ಮನಹಳ್ಳಿ, ರಾಮನಗರ, ಬ್ಯಾಲಾಳು, ಕಡ್ಲಬಾಳು, ಕಾತ್ಯಾಯಿನಿಮರಡಿ, ಕೆ. ಒಬಾಳಪುರ, ಚಿಕ್ಕಸೊಬಟಿ, ಹಿರೇಸೊಬಟಿ, ಹಗರಿ ಕ್ಯಾದಿಗಿಹಳ್ಳಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತರ್ಜಲದ ಸಮಸ್ಯೆ ಮಾಯವಾಗುತ್ತದೆ. ಅಲ್ಲದೇ ಈ ಭಾಗದ ಕೊಳವೆಬಾವಿ ಆಶ್ರಯಿತ ಕೃಷಿಕರ ಬದುಕಿಗೆ ಆಸರೆಯಾಗುತ್ತದೆ.
ತುಂಗಭದ್ರಾ ಡ್ಯಾಂ ಪೂರ್ಣಮಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಕಡ್ಲಬಾಳು ಗ್ರಾಮದ ಬಳಿಯ ಹಗರಿ ಹಳ್ಳದ ಸಮೀಪಕ್ಕೆ ಕಡಿಮೆ ಎಂದರೂ 3 ತಿಂಗಳ ಕಾಲ ಹಿನ್ನೀರು ಬಂದು ನಿಲ್ಲುತ್ತದೆ. ಅಂತರ್ಜಲದ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದ ಕಡ್ಲಬಾಳು ಗ್ರಾಮದ ಆರ್. ವೆಂಕಟೇಶ, ಗುರು, ನೀಲಕಂಠಪ್ಪ ಸೇರಿದಂತೆ ಹಲವು ರೈತ ಗೆಳೆಯರು 8 ವರ್ಷದ ಹಿಂದೆ ಒಂದುಗೂಡಿ ತಮ್ಮ ಗ್ರಾಮದ ಸರಹದ್ದಿನ ಹಳ್ಳದಲ್ಲಿ ಕಾಲುವೆ ತೋಡಿಸಿ ಹಿನ್ನೀರನ್ನು ಹಿಮ್ಮುಖವಾಗಿ ಹರಿಸುವ ಸಾಹಸಕ್ಕೆ ಮುಂದಾಗಿದ್ದರು.
20 ಅಡಿ ಅಗಲದ ಕಾಲುವೆ: ಕಡ್ಲಬಾಳು ಹಾಗೂ ಚಿಕ್ಕಸೊಬಟಿ ನಡುವಿನ ಪ್ರದೇಶದ ಕಲ್ಲಿನ ಬಂಡೆ ಗುಡ್ಡದ ಹತ್ತಿರ ತುಂಗಭದ್ರಾ ಡ್ಯಾಂ ಹಿನ್ನೀರು ನಿಲ್ಲುತ್ತದೆ. ಹಿನ್ನೀರು ಹಿಮ್ಮುಖವಾಗಿ ಸರಾಗವಾಗಿ ಹರಿದು ಬರಲು ಹಳ್ಳದಲ್ಲಿ ಜೆಸಿಬಿ ಇಲ್ಲವೆ ಹಿಟಾಚಿ ಯಂತ್ರದಿಂದ ಐದಾರು ಅಡಿಗಳಷ್ಟು ಅಳ ಹಾಗೂ ಹದಿನೈದು ಇಪ್ಪತ್ತು ಅಡಿಯಷ್ಟು ಅಗಲದ ಕಾಲುವೆಯನ್ನು ತೋಡಲಾಗುತ್ತದೆ. ಹೀಗೆ ತೋಡಿದ ಕಾಲುವೆಯಲ್ಲಿ ನೀರು ಇಂಗುತ್ತಲೇ ಹರಿದು ಮುಂದೆ ಸಾಗುತ್ತದೆ. ಈಗ ಮಾಡುತ್ತಿರುವುದು ಅದನ್ನೇ.
- ಹುಳ್ಳಿ ಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.