ತಹಸೀಲ್ದಾರ್ ನಡೆ ಬಗ್ಗೆ ಅಸಮಾಧಾನ
ಹಗರಿಬೊಮ್ಮನಹಳ್ಳಿ: ಅಕ್ರಮವಾಗಿ ಮರಳು ಸಾಗಾಣಿಕೆ ತಡೆಗೆ ಸಂಬಂಧಿಸಿದಂತೆ ಡಿಸಿ ಹೆಸರು ಹೇಳಿ ತಾಲೂಕಿನಲ್ಲಿ ತಹಸೀಲ್ದಾರ್ ಸರ್ವಾಧಿಕಾರಿ ಧೋರಣೆ ತಳೆದಿದ್ದಾರೆ. ಮರಳು ಕೊಂಡೊಯ್ಯುವ ಬಡ ರೈತರು ಮತ್ತು ಸಾರ್ವಜನಿಕರ ಮೇಲೆ ವಿನಾಕಾರಣ ದೂರು ದಾಖಲಿಸಿ ದಂಡದ ರೂಪದಲ್ಲಿ ವಸೂಲಿ ಮಾಡಿರುವ ಹಣದ ಬಗ್ಗೆ ಸಮಗ್ರ ವಿವರ ನೀಡುವಂತೆ ತಾಪಂ ಸದಸ್ಯ ಉಪ್ಪಾರ ಬಾಲಪ್ಪ ತಹಸೀಲ್ದಾರ್ ನಾಗರಾಜ ಭಟ್ ಅವರನ್ನು ಆಗ್ರಹಿಸಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಬಾಲಪ್ಪ, ತಹಸೀಲ್ದಾರ್ ನಾಗರಾಜ ಭಟ್ ಸಾಮಾನ್ಯ ಜನರ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿದ್ದಾರೆ. ಜಿಲ್ಲಾಧಿಕಾರಿ ಹೆಸರು ಹೇಳಿ ಜನ ಸಾಮಾನ್ಯರನ್ನು ನಿತ್ಯ ಬೆದರಿಸುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳನ್ನು ಸಹ ಲಕ್ಷಿಸುತ್ತಿಲ್ಲ. ಜನಪ್ರತಿನಿಧಿಗಳ ಬಗ್ಗೆ ತೀವ್ರ ಅಸಡ್ಡೆ ತೋರುತ್ತಿರುವ ಅವರ ಮೇಲೆ ಸೂಕ್ತ ಕ್ರಮವಹಿಸುವಂತೆ ಒತ್ತಾಯಿಸಿದರು.
ವಿವರ ನೀಡಿ: ಹಗರಿ ಹಳ್ಳದಿಂದ ಹೊಸಪೇಟೆಗೆ ನಿತ್ಯ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದೆ. ಆದರೆ ಇದರ ಕಡೆಗೆ ಚಕಾರವೆತ್ತದ ತಹಸೀಲ್ದಾರ್, ಸ್ಥಳೀಯರು ಗೃಹ ಮತ್ತು ದೇವಸ್ಥಾನ ನಿರ್ಮಾಣಕ್ಕೆ ಮರಳು ಸಾಗಾಟ ಮಾಡಿದರೆ ತಕ್ಷಣ ಅಂತಹ ಟ್ರ್ಯಾಕ್ಟರ್‌ಗಳನ್ನು ಸೀಜ್ ಮಾಡಿ, ರು. 5 ಸಾವಿರವರೆಗೆ ದಂಡದ ರೂಪದಲ್ಲಿ ವಸೂಲಿ ಮಾಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ದಂಡ ಕಟ್ಟಿಸಿಕೊಂಡಿದ್ದಕ್ಕೆ ಯಾವುದೇ ಅಧಿಕೃತ ರಸೀದಿ ನೀಡಿಲ್ಲ. ಈ ಕೂಡಲೇ ಸಂಪೂರ್ಣ ವಿವರಗಳನ್ನು ನೀಡುವಂತೆ ಮತ್ತು ವಿಷಯವನ್ನು ಸಭೆಯ ನಡಾವಳಿ ಪುಸ್ತಕದಲ್ಲಿ ದಾಖಲಿಸುವಂತೆ ಆಗ್ರಹಿಸಿದರು.
ಅಸಮಾಧಾನ: 13ನೇ ಹಣಕಾಸು ಹಾಗೂ ತಾಪಂ ಅಭಿವೃದ್ಧಿ ಅನುದಾನದ ಬಳಕೆ ಕುರಿತು ರಾಜ್ಯ ಸರ್ಕಾರ ರೂಪಿಸಿರುವ ಮಾರ್ಗಸೂಚಿ ಬಗ್ಗೆ ತಾಪಂ ಸದಸ್ಯರು ಪಕ್ಷಭೇದ ಮರೆತು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಮಾರ್ಗಸೂಚಿಗಳು ನಮ್ಮ ಅಧಿಕಾರವನ್ನೇ ಮೊಟಕುಗೊಳಿಸುವ ರೀತಿಯಲ್ಲಿವೆ. ಇಷ್ಟೊಂದು ಷರತ್ತುಗಳನ್ನು ವಿಧಿಸುವ ಬದಲು ತಾಪಂನ್ನೇ ಸರ್ಕಾರ ರದ್ದುಪಡಿಸಲಿ. ಎರಡು ತಿಂಗಳಿಗೊಮ್ಮೆ ನಡೆಯುವ ಸಭೆಗೆ ಬರಲಷ್ಟೆ ನಾವು ಸದಸ್ಯರಾಗಿ ಇರುವ ಬದಲು ಮನೆಗೆ ಸಭೆಯ ಬಗ್ಗೆ ಮಾಹಿತಿ ಕಳುಹಿಸಿ ಅಲ್ಲಿಯೇ ಸಹಿ ಮಾಡಿ ಕಳುಹಿಸುತ್ತೇವೆ ಎಂದು ಸದಸ್ಯ ಅಂಬಳಿ ಚಂದ್ರಪ್ಪ, ಎಂ.ಎಂ. ಶಿವಕುಮಾರ, ಉಮೇಶ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಮಾಡುವ ಸಲುವಾಗಿ ಬಳಸಿರುವ ವಿದ್ಯುತ್ ಬಿಲ್ ರು. 2.11 ಕೋಟಿ ಬಾಕಿ ಇದೆ. ತಕ್ಷಣ ಬಾಕಿ ಪಾವತಿಸಬೇಕು. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಮೋಟ್ಲಾನಾಯ್ಕ ಸಭೆಯಲ್ಲಿ ತಿಳಿಸಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೆ ಬಾಕಿ ಪಾವತಿಸಲು ಕ್ರಮ ವಹಿಸುವಂತೆ ತಾಪಂ ಇಓ ಜಿ. ಗೋಪ್ಯಾನಾಯ್ಕ ಗ್ರಾಪಂ ಪಿಡಿಓಗೆ ಸೂಚಿಸಿದರು.
ಸಮಾಜ ಕಲ್ಯಾಣ, ಆರೋಗ್ಯ, ಕೃಷಿ, ಸಣ್ಣ ನೀರಾವರಿ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ತಾಪಂ ಉಪಾಧ್ಯಕ್ಷೆ ಕುರುಬರ ನಾಗರತ್ನ, ಸದಸ್ಯರಾದ ಉಮೇಶ, ಬಾಳಪ್ಪ, ಶಿವಕುಮಾರ, ಸಾವಿತ್ರಮ್ಮ, ಪವಾಡಿ ಗಂಗಮ್ಮ, ಲೋಹಿತ್, ಮಂಜುಳಾ, ಹುಲಿಗೆಮ್ಮ, ಬೆಣಕಲ್ಲು ಪ್ರಕಾಶ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

