ಮಾದರಿ ಕ್ಷೇತ್ರವನ್ನಾಗಿಸುವೆ: ಆನಂದ್ ಸಿಂಗ್
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜೂ. 20
ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಗೊಳಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಶಾಸಕ ಬಿ.ಎಸ್. ಆನಂದ್ ಸಿಂಗ್ ಹೇಳಿದರು.
ಇಲ್ಲಿನ ತಳವಾರಕೇರಿಯಲ್ಲಿ ಗುರುವಾರ ಶಾಸಕರ ಅನುದಾನದ ರು. 25 ಲಕ್ಷ ವೆಚ್ಚದಲ್ಲಿ ಗರಡಿ ಮನೆ ಹಾಗೂ ಸಮುದಾಯ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಆಯ್ಕೆಗೊಂಡ ನಂತರ ಬೆಂಗಳೂರಿಗೆ ತೆರಳಿ ಕ್ಷೇತ್ರಕ್ಕೆ ಬೇಕಾದ ಹತ್ತು ಹಲವು ಯೋಜನೆಗಳ ಬಗ್ಗೆ ನೂತನ ಸಚಿವರ ಜತೆ ಚರ್ಚೆ ಮಾಡಿರುವೆ. ಅನಂತರ ಅಧಿವೇಶನ ಆರಂಭವಾಯಿತು. ಹೀಗಾಗಿ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಈ ಬಗ್ಗೆ ಜನರು ಆನಂದ್ ಸಿಂಗ್ ಗೆದ್ದ ಮೇಲೆ ಕ್ಷೇತ್ರಕ್ಕೆ ಬಂದಿಲ್ಲ ಎಲ್ಲಿದ್ದಾರೋ ಏನೋ ಎನ್ನುವ ಮಾತುಗಳನ್ನು ಮಾತನಾಡಿಕೊಂಡಿರಬಹುದು. ಈಚಲ ಮರದ ಕೆಳಗೆ ಮಜ್ಜಿಗೆ ಕುಡಿದರೂ ಹೆಂಡವೆನ್ನುತ್ತಾರೆ. ಗಣಿ ಉದ್ಯಮದಲ್ಲಿ ಇಂತಹ ಅಭಿಪ್ರಾಯ ಎದ್ದಿದೆ. ಅಕ್ರಮ ಗಣಿಗಾರಿಕೆಯನ್ನು ನಾನು ಮಾಡಿಲ್ಲ. ಈ ರೀತಿ ನಡೆದಿದ್ದರೆ ಮತ್ತೊಮ್ಮೆ ಶಾಸಕನಾಗಿ ಆಯ್ಕೆಯಾಗುತ್ತಿರಲಿಲ್ಲ ಎಂದರು.
ರು. 60 ಕೋಟಿ ಪ್ರಸ್ತಾವನೆ: ನಗರದ ವಾಲ್ಮೀಕಿ ವೃತ್ತದಿಂದ ಉದ್ಯೋಗ ಪೆಟ್ರೋಲ್ ಬಂಕ್ವರೆಗೆ ರಸ್ತೆ ಅಗಲೀಕರಣ ಕಾರ್ಯಕ್ಕೆ ಹಣ ಮಂಜೂರಾಗಿದ್ದು, ಕೆಲಸ ನಡೆದಿಲ್ಲ. ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ರಸ್ತೆ ಅಗಲೀಕರಣದ ಹಣ ಬಳಸಿಕೊಳ್ಳದಿದ್ದರೆ ಹಣ ವಾಪಾಸ್ ಹೋಗುತ್ತದೆ. ಶೀಘ್ರದಲ್ಲೇ ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದೇ ರೀತಿ ನಗರದಲ್ಲಿ ಕುಡಿಯುವ ನೀರಿಗೆ ಪ್ರಥಮಾದ್ಯತೆ ನೀಡಲಾಗುತ್ತದೆ. ರು. 60 ಕೋಟಿ ವೆಚ್ಚದ ಯುಐಡಿಎಸ್ ಯೋಜನೆಯಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದರು.
ಮನೆ ನಿರ್ಮಾಣ: ನಗರದ ಎಲ್ಲ ಪ್ರದೇಶಗಳಿಗೂ ಸಮರ್ಪಕ ಕುಡಿಯುವ ನೀರನ್ನು ಪೂರೈಸಲಾಗುವುದು. ನಗರದಲ್ಲಿ ಸಾಕಷ್ಟು ಬಡವರು ವಾಸವಾಗಿರುವುದರಿಂದ ನಗರದ ಲಿಟ್ಲಲ್ ಫ್ಲವರ್ ಶಾಲೆ ಸಮೀಪ 40 ಎಕರೆ ಪ್ರದೇಶದಲ್ಲಿ 10 ಎಕರೆ ಪ್ರದೇಶವನ್ನು ಬಸ್ ನಿಲ್ದಾಣಕ್ಕೆ ಕಾಯ್ದಿರಿಸಿ, ಉಳಿದ 30 ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇಶನ ಹಾಗೂ ಮನೆ ನಿರ್ಮಾಣ ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸಲಾಗುವುದು ಎಂದರು.
ಸಮಾರಂಭದಲ್ಲಿ ನಗರಸಭೆ ಸದಸ್ಯ ಗುಜ್ಜಲ ಲಿಂಗಪ್ಪ ಸೇರಿದಂತೆ ತಳವಾರಕೇರಿ ದೈವಸ್ಥರು, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಕಟಗಿ ಜಂಬಯ್ಯ ನಾಯಕ ಸ್ವಾಗತಿಸಿದರು. ಪೂಜಾರಿ ವೆಂಕೋಬ ನಾಯಕ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

