ಬಳ್ಳಾರಿ

ಮತದಾನಕ್ಕೆ ಸಿದ್ಧತೆ ಪೂರ್ಣ

Published On :

ಹೂವಿನಹಡಗಲಿ: ಸ್ಥಳೀಯ ಸಂಸ್ಥೆಗಳಿಗೆ ಮಾ. 7ರಂದು ನಡೆಯಲಿರುವ ಮತದಾನಕ್ಕೆ ತಾಲೂಕು ಆಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿ, ಸನ್ನದ್ಧವಾಗಿದೆ ಎಂದು ತಹಸೀಲ್ದಾರ್ ಮತ್ತು ಚುನಾವಣಾಧಿಕಾರಿ ಎಜಾಜ್ ಬೇಗ್ ತಿಳಿಸಿದರು.
ಇಲ್ಲಿನ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುರಸಭೆಯ 23 ವಾರ್ಡ್‌ಗಳ ಮತದಾನಕ್ಕೆ 23 ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಮತದಾನ ನಡೆಯಲಿದೆ. ಪ್ರತಿ ಕೇಂದ್ರದಲ್ಲಿ ಮತದಾನ ಆರಂಭಕ್ಕೂ ಮುನ್ನ ಮತಗಟ್ಟೆ ಅಧಿಕಾರಿ ಪ್ರಾಯೋಗಿಕ ಮತ ಹಾಕಿ ಮತಗಟ್ಟೆ ಏಜೆಂಟರು ಪ್ರಯೋಗ ಮಾಡುವರು ಎಂದರು.
ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆ: 23 ವಾರ್ಡ್‌ಗಳಲ್ಲಿ  5,13,16 ಹಾಗೂ 21ನೇ ವಾರ್ಡ್‌ಗಳು ಅತಿಸೂಕ್ಷ್ಮ ಮತ್ತು  2, 6ನೇ ವಾರ್ಡ್‌ಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿದ್ದು, ಅಲ್ಲಿ ಹೆಚ್ಚಿನ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಎಲ್ಲ ಸಿಬ್ಬಂದಿಗೆ ಊಟ, ಉಪಾಹಾರ, ಕುಡಿವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು. ಸಿಬ್ಬಂದಿಗೆ ಮಾ. 6ರಂದು ಮಸ್ಟರಿಂಗ್ ಮತ್ತು 7ರಂದು ಡಿಮಸ್ಟರಿಂಗ್ ಮಾಡಲಾಗುವುದು. ಮಾ. 11ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ ಎಂದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪಟ್ಟಣ ಸೇರಿದಂತೆ ಚುನಾವಣಾ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಮತಗಟ್ಟೆಯ ಸುತ್ತ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮತದಾರರಿಗೆ ನೀಡುವ ಚೀಟಿಗಳಲ್ಲಿ ಚಿಹ್ನೆಗಳನ್ನು ಅಂಟಿಸುವುದು ಚುನಾವಣೆ ಅಕ್ರಮ ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮತದಾನದ ವೇಳೆ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಡಿವೈಎಸ್ಪಿ ಸೇರಿ 10 ಅಧಿಕಾರಿಗಳು, 200 ಪೊಲೀಸ್ ಸಿಬ್ಬಂದಿ, 2 ಜಿಲ್ಲಾ ಶಶಸ್ತ್ರ ಮೀಸಲು ಪಡೆ ನಿಯೋಜಿಸಿದೆ. ಚುನಾವಣೆ ಅಕ್ರಮ ಸಾಗಾಣಿಕೆಗೆ ಕಡಿವಾಣ ಹಾಕಲು 6 ಕಡೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಎಲ್ಲ ಅಕ್ರಮಗಳ ಮೇಲೆ ಹದ್ದಿನ ಕಣ್ಣು ಇಟ್ಟಿರುವುದಾಗಿ ಸಿಪಿಐ ಶ್ರೀಕಾಂತ ಕಟ್ಟಿಮನಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.