ಬಳ್ಳಾರಿ

ಹಮಾಲಿ ಮಾಡುವವನೀಗ ಪಪಂ ಸದಸ್ಯ

Published On :

ಜಿ. ಸೋಮಶೇಖರ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಮಾ. 18

ಹಮಾಲಿಯನ್ನೇ ಬದುಕಾಗಿಸಿಕೊಂಡು ತನ್ನ ಸಂಸಾರ ಸಾಗಿಸುತ್ತಿದ್ದ ಕೊಟ್ಟೂರಿನಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಗೋದಾಮಿನಲ್ಲಿನ ಚೀಲ ಹೊರುತ್ತಿದ್ದ ಕೂಲಿ ಪೂಜಾರಿ ನಾಗಪ್ಪ ಇದೀಗ ಕೊಟ್ಟೂರು ಪಟ್ಟಣ ಪಂಚಾಯಿತಿ ಸದಸ್ಯನಾಗಿ ಚುನಾಯಿತಗೊಂಡಿದ್ದಾನೆ.
ಪಟ್ಟಣ ಪಂಚಾಯಿತಿಯ ಕುರುಬರಗೇರಿಯ ನಾಗಪ್ಪ ತನಗೆ ಒದಗಿ  ಬಂದಿರುವ 3-4 ಎಕರೆ ಜಮೀನಿನ ಒಕ್ಕಲುತನ ನಿರ್ವಹಿಸುವ ಜತೆಗೆ ಇಲ್ಲಿನ ಗೋದಾಮಿನಲ್ಲಿ ಕಳೆದ 25 ವರ್ಷಗಳಿಂದ ಹಮಾಲಿ ಕೆಲಸ ಮಾಡುತ್ತಾ ತುಂಬು ಸಂಸಾರದ ನೊಗವನ್ನು ಹೊತ್ತಿದ್ದಾನೆ. 3ನೇ ತರಗತಿ ವ್ಯಾಸಂಗ ಮಾಡುತ್ತಿರುವಾಗಲೇ ಶಾಲೆಗೆ ಗುಡ್‌ಬೈ ಹೇಳಿದ ನಾಗಪ್ಪ, ಪಟ್ಟಣದ ಮುಖ್ಯಬೀದಿಯಲ್ಲಿ ಹಮಾಲಿ ಕೆಲಸ ಮಾಡಿಕೊಂಡಿದ್ದ.
ಚೀಲವೊಂದಕ್ಕೆ ಆಗ ಸಿಗುತ್ತಿದ್ದ ರು. 1 ಕೂಲಿಯಲ್ಲಿ ದಿನಕ್ಕೆ ರು. 150 ದುಡಿದು ಜೀವನ ನಡೆಸುತ್ತಿದ್ದ. ಈಗ್ಗೆ 25 ವರ್ಷಗಳಿಂದ ಆಹಾರ ಇಲಾಖೆಯ ಗೋದಾಮಿಗೆ ಹಮಾಲಿಯಾಗಿ ಸೇರಿಕೊಂಡ ನಂತರ ಕೊಂಚ ಸುಧಾರಣೆಗೊಂಡು ತಕ್ಕ ಮಟ್ಟಿಗೆ ಮನೆ ನಿರ್ಮಿಸಿಕೊಂಡಿದ್ದಾನೆ. ತನ್ನೊಟ್ಟಿಗೆ ತನ್ನ ಮಗ ಬಸವರಾಜನನ್ನು ಗೋದಾಮಿಗೆ ಹಮಾಲಿಯನ್ನಾಗಿಸಿಕೊಂಡಿದ್ದಾನೆ.
ಈಗ ಪಪಂ ಸದಸ್ಯ: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ 5ನೇ ವಾರ್ಡ್ ಸದಸ್ಯ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿತ್ತು.
ಬಿಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಚುನಾಯಿತನಾಗಿರುವ ನಾಗಪ್ಪನಿಗೀಗ 56 ವರ್ಷ. ಜನ ಸೇವೆ ಮಾಡೋ ಉತ್ಕಟ ಬಯಕೆಯಾಗಿದೆ. ಈ ಹಿಂದೆ ಈ ವಾರ್ಡ್‌ನ್ನು ಪ್ರತಿನಿಧಿಸಿದ ಸದಸ್ಯರು ಅಭಿವೃದ್ಧಿಗೆ ಕಾಳಜಿ ವಹಿಸಿಲ್ಲ. ಅತಿ ಜರೂರಾಗಿ ಮಹಿಳೆಯರ ಶೌಚಾಲಯ ಈ ವಾರ್ಡಿನಲ್ಲಿ ಅವಶ್ಯವಿದೆ. ಮೊದಲ ಕೆಲಸವಾಗಿ ಅದನ್ನು ಮಾಡಲು ಮುಂದಾಗುತ್ತೇನೆ ಎಂದು 'ಕನ್ನಡಪ್ರಭ'ಕ್ಕೆ ತನ್ನ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ.
ಚುನಾವಣೆಗೆ ಈ ಬಾರಿ ಸ್ಪರ್ಧಿಸಲೇಬೇಕೆಂದು ಕಾಂಗ್ರೆಸ್ ಮುಖಂಡರ ಬಳಿ ಟಿಕೆಟ್‌ಗಾಗಿ ಅವಲತ್ತುಕೊಂಡೆ. ಆದರೆ ಟಿಕೆಟ್ ನೀಡಲು ನಿರಾಕರಿಸಿದರು. ಚುನಾವಣೆಗೆ ನಿಲ್ಲುವುದಂತೂ ಗ್ಯಾರಂಟಿ ಎನ್ನುವ ಅಭಿಲಾಷೆ ಇರಿಸಿಕೊಂಡು ಸ್ಪರ್ಧೆಗೆ ಅಣಿಯಾಗುತ್ತಿದ್ದಂತೆಯೇ ಬಿಎಸ್ಸಾರ್ ಕಾಂಗ್ರೆಸ್ ಮುಖಂಡರು ನನಗೆ ಟಿಕೆಟ್ ನೀಡಿ ಅವಕಾಶ ಮಾಡಿಕೊಟ್ಟರು. ಚುನಾವಣೆಯಲ್ಲಿ ಮತದಾರರ ಮನಗೆದ್ದು, ಇದೀಗ ಸದಸ್ಯನಾಗಿರುವೆ. ಒಳ್ಳೆಯದನ್ನು ಮಾಡುವುದು ನನ್ನಿಷ್ಟವಾಗಿದೆ. ಅದಕ್ಕೆ ಅವಕಾಶ ಸಿಗಬೇಕು ಅಷ್ಟೇ ಎನ್ನುತ್ತಾನೆ ನಾಗಪ್ಪ.ಜಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.