ಬಳ್ಳಾರಿ

ಇಂದು ಗಾಣಗಟ್ಟೆ ಮಾಯಮ್ಮ ರಥೋತ್ಸವ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಮಾ. 19
ತಾಲೂಕಿನ ಗಡಿಗ್ರಾಮ ಗಾಣಗಟ್ಟೆಯಲ್ಲಿ ಶ್ರೀ ಮಾಯಮ್ಮದೇವಿ ರಥೋತ್ಸವ ಮಾ. 20ರಂದು ಮಧ್ಯಾಹ್ನ 3ಕ್ಕೆ ನಡೆಯಲಿದ್ದು, ರಥೋತ್ಸವ ಸಂದರ್ಭದಲ್ಲಿ ಹೆಲಿಕಾಪ್ಟರ್‌ನಿಂದ ರಥಕ್ಕೆ ಪುಷ್ಪಾರ್ಚನೆ ಮಾಡಲಾಗುವುದು  ಎಂದು ಗಾಣಗಟ್ಟೆ ಗ್ರಾಮಸ್ಥರು ತಿಳಿಸಿದರು.
ಯಾವುದೇ ರಥ ಮುಂದೆ ಸಾಗಬೇಕಾದರೆ ರಥಕ್ಕೆ ಕಟ್ಟಲಾದ ಮಿಣಿ (ಹಗ್ಗ)ಯನ್ನು ಭಕ್ತರು ಎಳೆಯುತ್ತಾರೆ. ಆದರೆ ಗಾಣಗಟ್ಟೆಯಲ್ಲಿ ಪ್ರತಿವರ್ಷ ರಥಕ್ಕೆ ಹಗ್ಗ ಕಟ್ಟದೆ ರಥವನ್ನು ತಳ್ಳುವ ಮೂಲಕ ರಥೋತ್ಸವ ಆಚರಿಸುತ್ತಾರೆ. ಲಕ್ಷಾಂತರ ಭಕ್ತರು ರಥೋತ್ಸವ ನೋಡಲು ಪ್ರತಿವರ್ಷ ಆಗಮಿಸುತ್ತಿದ್ದು, ಈ ಬಾರಿ ಹೆಲಿಕಾಪ್ಟರ್ ಮೂಲಕ ಮಾಯಮ್ಮನ ರಥಕ್ಕೆ ಹೂಮಳೆ ಗೈಯ್ಯುವುದು ಮತ್ತಷ್ಟು ಹೆಚ್ಚು ಭಕ್ತರು ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಗ್ರಾಮಸ್ಥರು.
125 ಅಡಿ ಎತ್ತರದ ಗೋಪುರ: ಗಾಣಗಟ್ಟೆಯಂತಹ ಪುಟ್ಟ ಹಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ 125 ಅಡಿ ಎತ್ತರದ ಗೋಪುರವನ್ನು  ಮಾಯಮ್ಮನ ದೇವಸ್ಥಾನದ ಮುಂದೆ ಗ್ರಾಮಸ್ಥರು ಹಾಗೂ ಭಕ್ತರು ನಿರ್ಮಿಸಿದ್ದು, ಮುಗಿಲೆತ್ತರಕ್ಕೆ ಚುಂಬಿಸುವಂತೆ ಕಾಣುವ ಮಾಯಮ್ಮ ದೇವಿ ಗೋಪುರ ಜಿಲ್ಲೆಯಲ್ಲಿಯೇ ಅತೀ ಎತ್ತರದ ಗೋಪುರಗಳ ಸಾಲಿನಲ್ಲಿ ಬರುವ ಅಪರೂಪದ ಗೋಪುರವಾಗಿದೆ. ಹೀಗಾಗಿ ಗಾಣಗಟ್ಟೆ ಪುಟ್ಟಹಳ್ಳಿಯಾದರೂ ಪ್ರತಿನಿತ್ಯ ಸಹಸ್ರಾರು  ಭಕ್ತರು ಆಗಮಿಸುವುದರಿಂದ ಪ್ರವಾಸಿ ತಾಣದಂತೆ ಈಗ ಕಂಗೊಳಿಸುತ್ತದೆ. ಯಾವುದೇ ದೇವರ ಮೂರ್ತಿಯನ್ನು ಹೂವಿನಿಂದ ಇತರೆ ಪತ್ರಿಗಳಿಂದ ಅಲಂಕಾರ ಮಾಡಿರುತ್ತಾರೆ. ಆದರೆ ಮಾಯಮ್ಮದೇವಿಯ ಮೂರ್ತಿಯನ್ನು ಹಣದಿಂದಲೇ ನಿತ್ಯ ಶೃಂಗಾರ ಮಾಡುತ್ತಿರುವುದು ವಿಶಿಷ್ಟವಾಗಿದೆ. ಮಕ್ಕಳಾಗದೆ ದೇವಿಯಲ್ಲಿ ಬೇಡಿಕೊಳ್ಳುವ ಭಕ್ತರು ಮಕ್ಕಳಾದಲ್ಲಿ ಮಕ್ಕಳ ತೂಕದ ಹಣವನ್ನು ಮಾಯಮ್ಮ ದೇವಿಗೆ ಅರ್ಪಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.