ಪ್ರತಿ ಬಜೆಟ್ನಲ್ಲಿ ರೈತರಿಗಾಗಿ 10 ಸಾವಿರ ಕೋಟಿ: ಎಚ್ಡಿಕೆ ಭರವಸೆ
ಹಗರಿಬೊಮ್ಮನಹಳ್ಳಿ: ಜೆಡಿಎಸ್ನ್ನು ಅಧಿಕಾರಕ್ಕೆ ತಂದರೆ ರೈತರ ಎಲ್ಲ ಬೆಳೆಗೆ ಸರ್ಕಾರದಿಂದಲೇ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ. ಬೆಳೆ ಹಾಗೂ ಬೆಲೆ ನಷ್ಟದಿಂದ ರೈತರನ್ನು ರಕ್ಷಿಸುವ ಸಲುವಾಗಿಯೇ ಪ್ರತಿ ಬಜೆಟ್ನಲ್ಲೂ 10 ಸಾವಿರ ಕೋಟಿ ತೆಗೆದಿರಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಬುಧವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಐದು ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ ಪ್ರತಿ ಹಂತದಲ್ಲೂ ರೈತ ಹಾಗೂ ಜನವಿರೋಧಿ ನೀತಿ ಅನುಸರಿಸಿದೆ' ಎಂದು ಆರೋಪಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ 24 ಗಂಟೆಗಳ ಒಳಗೆ ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡುತ್ತೇವೆ. ರು. 65 ಸಾವಿರ ಕೋಟಿ ಹಣದಲ್ಲಿ ಅರ್ಧಕ್ಕೆ ನಿಂತಿರುವ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತ ವರ್ಗಕ್ಕೆ ಅನುಕೂಲ ಮಾಡಿಕೊಡುವ ಕೆಲಸವನ್ನು ಜೆಡಿಎಸ್ ಮಾಡಲಿದೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ, ಕೇಂದ್ರ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಈ ಎರಡೂ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸಬೇಕು. ಈ ಎರಡೂ ಪಕ್ಷಗಳನ್ನು ರಾಜ್ಯದಿಂದ ಒದ್ದೋಡಿಸಬೇಕು. ರೈತರ ಏಳಿಗೆಗಾಗಿಯೇ ಜನ್ಮ ತಾಳಿರುವ ಜೆಡಿಎಸ್ ರೈತರ ಹಿತರಕ್ಷಣೆಗಾಗಿ ಶ್ರಮಿಸಲಿದೆ. ಅಧಿಕಾರಕ್ಕೇರಿದ ಬಳಿಕ ರೈತರನ್ನು ಮರೆಯದು. ನನ್ನ ಮೇಲೆ ನಂಬಿಕೆಯಿಟ್ಟು ಈ ಬಾರಿ ಜೆಡಿಎಸ್ ಬೆಂಬಲಿಸಿ ಎಂದು ಕೈಮುಗಿದು ರೈತರಲ್ಲಿ ಬೇಡಿಕೊಂಡರು.
ಐದು ವರ್ಷಗಳಲ್ಲಿ ಜನಸಾಮಾನ್ಯರಿಗೆ ಸ್ಪಂದಿಸುವ ಕೆಲಸ ರಾಜ್ಯದಲ್ಲಿ ಆಗಿಲ್ಲ. ಎರಡೂವರೆ ವರ್ಷಗಳಿಂದ ಇರುವ ಭೀಕರ ಬರಗಾಲ ನಿಭಾಯಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿವೆ. ಅಧಿಕಾರ ದಾಹದಲ್ಲಿರುವ ಈ ಎರಡು ಪಕ್ಷಗಳಿಗೆ ಸರಿಯಾದ ಪಾಠ ಕಲಿಸುವ ಮೂಲಕ ರಾಜ್ಯದಲ್ಲಿ ಜನಪರ ಅಳ್ವಿಕೆ ಆರಂಭಿಸಲು ಜನತೆ ಜೆಡಿಎಸ್ಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಭೀಮಾನಾಯ್ಕ, ಮುಖಂಡರಾದ ಎಂ.ಎಂ.ಜೆ. ಹರ್ಷವರ್ಧನ, ಕೆ. ಶಿವಮೂರ್ತಿ, ವೈ. ಮಲ್ಲಿಕಾರ್ಜುನ, ಗೋವಿಂದ ಪರಶುರಾಮ, ಎಚ್.ಎಂ. ಚೋಳರಾಜ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ, ಹಂಚಿನಮನಿ ಹನುಮಂತಪ್ಪ, ಹೆಗ್ಡಾಳ ಶ್ರೀನಿವಾಸ, ಸಂಪತ್ಕುಮಾರ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

