ಮಿಶ್ರಫಲ ಕೊಟ್ಟ ಸ್ಟಾರ್ಗಳ ಪ್ರಚಾರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 9
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜನಾಥ್ ಸಿಂಗ್ ಪ್ರಚಾರ ಹಾಗೂ ವೈಯಕ್ತಿಕ ವರ್ಚಸ್ಸಿನಿಂದಾಗಿ ಆನಂದ್ ಸಿಂಗ್ ಗೆಲವು ಸಾಧಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಆನಂದ್ ಸಿಂಗ್ ಪರ ಪ್ರಚಾರ ನಡೆಸಿದ್ದು, ಆನಂದ್ ಸಿಂಗ್ಗೆ ವರ್ಕೌಟಾಗಿದೆ. ಆ ಮೂಲಕ ಸಿಂಗ್ 30,632 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ.
ಆನಂದ್ ಸಿಂಗ್ ಬಿಜೆಪಿ ಬಿಟ್ಟು ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ತೋರಿದ ಹಿನ್ನೆಲೆಯಲ್ಲಿ ರಾಜನಾಥ್ ಸಿಂಗ್ ಅವರು ಬುದ್ಧಿ ಹೇಳುವ ಮೂಲಕ ಬಿಜೆಪಿಯಲ್ಲಿ ನಿಲ್ಲುವಂತೆ ಮಾಡಿದ್ದರು. ಆಗ ಮನಸ್ಸು ಬದಲಾಯಿಸಿದ ಆನಂದ್ ಸಿಂಗ್ ಅವರು ಬಿಜೆಪಿಯಲ್ಲಿದ್ದು, ಅದೇ ಪಕ್ಷದಿಂದ ಸ್ಪರ್ಧಿಸಿದ್ದರಿಂದ ರಾಜನಾಥ್ ಸಿಂಗ್ ಅವರು ವಿಜಯನಗರ ಕ್ಷೇತ್ರಕ್ಕೆ ಆಗಮಿಸಿ ಸಿಂಗ್ ಪರ ಪ್ರಚಾರ ಮಾಡಿದರು. ಆನಂದ್ ಸಿಂಗ್ ಅವರ ವೈಯಕ್ತಿಕ ವರ್ಚಸ್ಸು, ಉಸ್ತುವಾರಿ ಸಚಿವರಾದ ಸಂದರ್ಭದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ರಾಜನಾಥ್ ಸಿಂಗ್ ಅವರ ಪ್ರಚಾರ ಫಲ ನೀಡಿದೆ.
ಫಲ ನೀಡದ ಬಿಎಸ್ವೈ, ಶೋಭಾ ಪ್ರಚಾರ: ಯಡಿಯೂರಪ್ಪ ಅವರ ಜಾತಿ ಲೆಕ್ಕಾಚಾರ ಕಂಪ್ಲಿ ಹಾಗೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಫಲಿಸಿಲ್ಲ. ಕಂಪ್ಲಿಯಲ್ಲಿ ಹೊರಗಿನಿಂದ ಎಚ್.ಡಿ. ಬಸವರಾಜ್ ಬಂದಿರುವುದರಿಂದ ಅಲ್ಲಿನ ಮತದಾರರು ಕೆಜೆಪಿ ಕೈ ಹಿಡಿದಿಲ್ಲ. ಜಾತಿ ಲೆಕ್ಕಾಚಾರದಲ್ಲೂ ಮತಗಳನ್ನು ಕೆಜೆಪಿ ಸೆಳೆದುಕೊಳ್ಳುವಲ್ಲಿ ವಿಫಲವಾಗಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ, ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕೆಜೆಪಿ ಪರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಚಾರ ಮಾಡಿದರೂ ಫಲ ನೀಡಿಲ್ಲ. ಕಂಪ್ಲಿ ಕೆಜೆಪಿ ಅಭ್ಯರ್ಥಿ ಎಚ್.ಡಿ. ಬಸವರಾಜ್ ಅವರು 5,494 ಮತ ಪಡೆದಿದ್ದರೆ, ಬಿಎಸ್ಸಾರ್ನ ಸುರೇಶ್ಬಾಬು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಇನ್ನು ಸಿರುಗುಪ್ಪ ಅಭ್ಯರ್ಥಿ ನರಸಿಂಹ ನಾಯಕ್ ಅವರು 2,254 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ.
ಫಲಿಸದ ಬಿಎಸ್ವೈ ಲೆಕ್ಕಾಚಾರ: ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು 52 ಸಾವಿರ ಇದ್ದರೂ, ಕೆಜೆಪಿ ಅಭ್ಯರ್ಥಿ ಕೇವಲ 2,254 ಮತಗಳ ಪಡೆದಿರುವುದು ಸಹಜವಾಗಿಯೇ ಕ್ಷೇತ್ರದ ಮತದಾರ ಯಡಿಯೂರಪ್ಪ ಅವರ ಬಗ್ಗೆ ಒಲವು ತೋರಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾನೆ. ಆ ಮೂಲಕ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರು ಕೈಗೊಂಡ ಪ್ರಚಾರ ಫಲ ನೀಡಲಿಲ್ಲ. ಅಂತೆಯೇ ಹೂವಿನಹಡಗಲಿ ಕ್ಷೇತ್ರದಲ್ಲಿ ಮಧುನಾಯಕ್ ಪರ ಯಡಿಯೂರಪ್ಪ ಅವರು ನಡೆಸಿದ ಪ್ರಚಾರ ಕೂಡ ವರ್ಕೌಟಾಗಿಲ್ಲ. ಮಧುನಾಯ್ಕ 18,178 ಮತಗಳನ್ನು ಮಾತ್ರ ಪಡೆದಿದ್ದಾರೆ. ಹೂವಿನಹಡಗಲಿ ಕ್ಷೇತ್ರದಲ್ಲಿ ಕೆಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರವನ್ನು ಮತದಾರ ಹುಸಿಗೊಳಿಸಿದ್ದಾನೆ. ಯಡಿಯೂರಪ್ಪ ಅವರ ಅಲೆ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಬಳ್ಳಾರಿ ಜಿಲ್ಲೆ ಮಟ್ಟಿಗೆ ಯಡಿಯೂರಪ್ಪ ಅವರ ಎಲ್ಲ ಲೆಕ್ಕಾಚಾರಗಳು ತಲೆ ಕೆಳಗೆ ಆಗುವಂತೆ ಮಾಡಿದೆ.
ಜಿಲ್ಲೆಯಲ್ಲಿ ಖಾತೆ ತೆರೆದ ಜೆಡಿಎಸ್: ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಭೀಮಾನಾಯ್ಕ್ ಪರ ನಡೆಸಿದ ಪ್ರಚಾರ, ಜೆಡಿಎಸ್ ಜಿಲ್ಲೆಯಲ್ಲಿ ಖಾತೆ ತೆರೆಯುವಂತೆ ಮಾಡಿದೆ. ಜೆಡಿಎಸ್ ಪಕ್ಷವು ಅಲ್ಪ ಅಂತರದಿಂದ ಗೆಲವು ಸಾಧಿಸಲು ಯಶಸ್ವಿಯಾಗಿದೆ. ಕ್ಷೇತ್ರದಲ್ಲಿ ಬಿಜೆಪಿಯ ನೇಮಿರಾಜ ನಾಯ್ಕ್ ಪ್ರಾಬಲ್ಯ ಇದ್ದರೂ, ಕುಮಾರಸ್ವಾಮಿ ಅವರು ಭೀಮನಾಯ್ಕ್ ಪರ ಪ್ರಚಾರ ಮಾಡಿದ್ದು ಹಾಗೂ ಹರ್ಷವರ್ಧನ್ ಸೇರಿದಂತೆ ಇತರರು ಜೆಡಿಎಸ್ಗೆ ಸೇರ್ಪಡೆಯಾಗುವ ಮೂಲಕ ಜೆಡಿಎಸ್ ಬಲಗೊಂಡು ಜೆಡಿಎಸ್ನ ಭೀಮಾನಾಯ್ಕ್ ಕೇವಲ 125 ಮತಗಳ ಅಂತರದಿಂದ ಬಿಜೆಪಿಯ ನೇಮಿರಾಜನಾಯ್ಕ ಅವರನ್ನು ಸೋಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

