ದ್ರೋಹ ಬಗೆಯದೆ ಸೇವೆ ಸಲ್ಲಿಸುವೆ
ಕೊಟ್ಟೂರು: ತಾವು ಶಾಸಕರಾಗಿ ಆಯ್ಕೆಯಾಗಲು ಕೊಟ್ಟೂರಿನ ಮತದಾರರ ಪಾತ್ರ ಮಹತ್ವದ್ದು, ತಮ್ಮನ್ನು ಕೈಹಿಡಿದ ಪಟ್ಟಣದ ಜನತೆಯ ಋಣಕ್ಕೆ ಎಂದೂ ದ್ರೋಹ ಬಗೆಯದೆ ಸೇವೆ ಸಲ್ಲಿಸುವೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಹೇಳಿದರು.
ಶುಕ್ರವಾರ ಸಂಜೆ ಇಲ್ಲಿನ ಬಳ್ಳಾರಿ ಕ್ಯಾಂಪ್ ಪ್ರದೇಶದ ಜಾಮಿಯಾ ಮಸೀದಿಯ ಇಲಾಹಿ ಮದರಸಾ ಸಮಿತಿಯವರು ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದ ಜನತೆಯ ಪ್ರೀತಿ ನನ್ನನ್ನು ಶಾಸಕನನ್ನಾಗಿಸಿತು. ಕೊಟ್ಟೂರು ನೂತನ ತಾಲೂಕಾಗಿ ಘೋಷಿತವಾಗಿದೆ. ಶೀಘ್ರದಲ್ಲೇ ಸರ್ಕಾರಿ ಕಾರ್ಯಾಲಯಗಳು ಮತ್ತು ಅಧಿಕಾರಿಗಳು ಕಾರ್ಯನಿರ್ವಹಿಸುವ ಸಂಬಂಧ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದರು.
ರೈಲು ಸಂಚಾರಕ್ಕೆ ಯತ್ನ: ಕೊಟ್ಟೂರು-ಹರಿಹರ ನೂತನ ರೈಲು ಮಾರ್ಗದ ಕಾಮಗಾರಿ ಸಂಪೂರ್ಣಗೊಂಡಿದ್ದರೂ ಹಿಂದಿನ ಜನಪ್ರತಿನಿಧಿಗಳ ನಿಷ್ಕಾಳಜಿ ಕಾರಣಕ್ಕಾಗಿ ರೈಲು ಓಡಾಟ ಆರಂಭಗೊಂಡಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರೈಲು ಸಂಚರಿಸುವಂತೆ ಮಾಡುವೆ. ಕೊಟ್ಟೂರಿನಲ್ಲಿ ಮುಸ್ಲಿಮರ ಮದುವೆ, ಇತರ ಕಲ್ಯಾಣ ಕಾರ್ಯಗಳು ಜರುಗಲು ಶಾದಿ ಮಹಲ್ ನಿರ್ಮಾಣ, ಮದರಸಾ ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಅನುದಾನ ದೊರಕಿಸಿಕೊಡುತ್ತೇನೆ ಎಂದ ಅವರು, ಪಪಂ ಆಡಳಿತ ಕೂಡ ಜೆಡಿಎಸ್ನದೇ ಆಗುವುದರಿಂದ ಎಲ್ಲ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು.
ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಮಾತನಾಡಿ, ಕೊಟ್ಟೂರು ಪಪಂ ಆಡಳಿತ ನಿರ್ವಹಣೆ ಇತ್ತೀಚಿನವರೆಗೂ ಕೆಟ್ಟುಹೋಗಿತ್ತು. ಇದೀಗ ಬದಲಾವಣೆ ಕಾಣುವ ನಿಟ್ಟಿನಲ್ಲಿ ಸದಸ್ಯರುಗಳನ್ನು ಜನತೆ ಚುನಾಯಿಸಿದ್ದಾರೆ. ಆಡಳಿತ ನಮ್ಮ ಪಕ್ಷದ್ದೇ ಆಗುವುದರಿಂದ ಎಲ್ಲ ಬಗೆಯ ಸೌಲಭ್ಯಗಳನ್ನು ತಡವಿಲ್ಲದೇ ಜನತೆಗೆ ಒದಗಿಸಿಕೊಡಲು ಶ್ರಮಿಸುವೆ. ಈ ಸಲ ಚುನಾಯಿತಗೊಂಡ ತಮ್ಮ ಬಳಗದ ಯಾವುದೇ ಸದಸ್ಯ ಪಕ್ಷಾಂತರ ಮಾಡದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದರು.
ಮಸೀದಿ ಕೆಡವಿಸಿದ್ದರು: ಜಾಮಿಯಾ ಮಸೀದಿ ಅಧ್ಯಕ್ಷ ಹಮೀದ್ ಸಾಬ್ ಮಾತನಾಡಿ, ಬಿಜೆಪಿ ಶಾಸಕನಾಗಿದ್ದ ಮಹಾಶಯ ಸಮೀಪದ ಹಳ್ಳಿಯೊಂದರಲ್ಲಿ ನಿರ್ಮಿಸಿದ ಮಸೀದಿ ಕೆಡವಿ ಮುಸ್ಲಿಂ ಬಾಂಧವರ ಮನಕಲುಕಿದ್ದ. ಆತನಿಗೆ ಜನತೆ ಸರಿಯಾದ ಪಾಠ ಕಲಿಸಿದ್ದಾರೆ. ನೂತನ ಶಾಸಕ ಭೀಮಾನಾಯ್ಕ್ ಎಲ್ಲ ವರ್ಗದ ಜನರ ಹಿತ ಕಾಪಾಡಬೇಕು ಎಂದರು.
ಪಪಂ ಸದಸ್ಯರಾದ ಕರಡಿ ಕೊಟ್ರೇಶ್, ಸೋಡಾ ಗುರುಬಸವರಾಜ್, ಕವಿತಾ ಬಸವರಾಜ್, ಬುಗ್ಗಳ್ಳಿ ಕೊಟ್ರೇಶ್, ಮದರಸಾ ಸಮಿತಿ ಅಧ್ಯಕ್ಷ ಆಯೂಬ್ಖಾನ್, ಕಲಂದರ್, ಅಲ್ತಾಫ್, ಹೆಗಡೆ ಮಾಬು, ನಜೀರ್, ಷೆಕ್ಷಾವಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

