ಠಕ್ಕರಿಂದ ಬರಿದಾಯ್ತು ನನ್ನೊಡಲು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 18
'ಭ್ರಷ್ಟ ವ್ಯವಸ್ಥೆಯಲ್ಲಿ ಹುಟ್ಟಿಕೊಂಡಿರುವ ರಕ್ತ ಬೀಜಾಸುರರು (ಮರಳು ಅಕ್ರಮ ದಂಧೆಕೋರರು) ಅಟ್ಟಹಾಸಕ್ಕೆ ನನ್ನ ಒಡಲೊಳಗೆ ಹುದುಗಿಕೊಂಡಿರುವ ಅಪಾರ ಸಂಪತ್ತನ್ನು (ಮರಳು) ಲೂಟಿ ಮಾಡಿ, ತಾಯಿಯ ಒಡಲನ್ನೇ ಬರಿದು ಮಾಡಿದ್ದಾರೆ. ಪವಿತ್ರವಾಗಿದ್ದ ನನ್ನನ್ನು ಅಪವಿತ್ರ ಮಾಡಿದ್ದಾರೆ. ಸಕ್ಕರೆಯಷ್ಟು ಸಿಹಿಯಾಗಿರುವ ಜೀವಜಲವನ್ನು ಹಾಲಾಹಲವನ್ನಾಗಿ ಪರಿವರ್ತನೆ ಮಾಡಿದ್ದಾರೆ ಈ ದುಷ್ಟರು.
ಹೀಗೆಂದು ತನ್ನ ಅಂತರಾಳದ ನೋವನ್ನು ತೋಡಿಕೊಂಡಿದ್ದಾಳೆ ಬಯಲು ಸೀಮೆಯ, ಉತ್ತರ ಕರ್ನಾಟಕದ ಜೀವನದಿ ತುಂಗಭದ್ರೆ. ತನ್ನ ಹುಟ್ಟು, ಸಹಾಯ ಹಾಗೂ ಈಗ ತನಗೆ ಬಂದಿರುವ ಕಂಟಕವನ್ನು ನಿವಾರಿಸುವಂತೆ ಕೇಳುತ್ತಿದ್ದಾಳೆ ತುಂಗಭದ್ರೆ.
'ನಾನು ಪಶ್ಚಿಮ ಘಟ್ಟಗಳ ವರಾಹ ಪರ್ವತ ಪ್ರದೇಶದಲ್ಲಿ ಜನ್ಮ ತಾಳಿದ್ದೇನೆ. ಹಚ್ಚ ಹಸಿರಿನ ಪರ್ವತಗಳ ನಡುವೆ, ಗಿರಿ ಗೌಹಾರಗಳ ಮೂಲಕ ಹರಿಯುತ್ತಿರುವ ನಾನು, ಪಂಚಭೂತಗಳಲ್ಲಿ ಒಂದಾಗಿದ್ದೇನೆ. ಜಲಚರ ಸೇರಿದಂತೆ ಸಕಲ ಜೀವ ಸಂಕುಲಕ್ಕೆ ಜೀವನಾಡಿಯಾಗಿ, ಬರಗಳ ನಾಡು, ಬಯಲು ಸೀಮೆಯ ಜೀವನದಿಯಾಗಿರುವ ನಾನೇ ತುಂಗಭದ್ರೆ'.
'ನನ್ನ ಹರುವಿನುದ್ದಕ್ಕೂ ಸಾವಿರಾರು ತೀರ್ಥಸ್ಥಳಗಳು ಜನ್ಮ ತಾಳಿವೆ. ಶೃಂಗೇರಿ ಶಾರದೆ ನನ್ನನ್ನು ಆಧರಿಸಿ ಬೆಳೆದಿದ್ದಾಳೆ. ಹಾಗೆಯೇ ಅನಾದಿ ಕಾಲದ ಅದೆಷ್ಟೋ ಪುಣ್ಯ ಸ್ಥಳಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಸುಂದರ ದೇಗುಲಗಳು ನನ್ನ ತಟದಲ್ಲಿ ಮೇಳೈಸಿವೆ. ತುಂಗ-ಭದ್ರೆ ಕೂಡಲಿ ಎಂಬಲ್ಲಿ ಸಂಗಮಿಸಿ ಮುಂದೆ ಧರ್ಮ, ವರಹ, ತುಂಗ, ಭದ್ರೆ, ಸರಸ್ವತಿರೆಂಬ ಪಂಚನದಿಗಳಾಗಿ ಹರಿಯುತ್ತಿದ್ದೇವೆ. ವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ ಕಾರಣಳಾಗಿ, ಮಂತ್ರಾಲಯದ ಗುರುರಾಯರ ಪವಿತ್ರ ಪಾದಗಳನ್ನು ತೊಳೆದು ಆಂಧ್ರದ ಕರ್ನೂಲು ಜಿಲ್ಲೆಯ ಸಂಗಮೇಶ್ವರಂ ಬಳಿ ಕೃಷ್ಣಾ ನದಿಯೊಂದಿಗೆ ಬಂಗಾಳಕೊಲ್ಲಿಯಲ್ಲಿ ಲೀನವಾಗುತ್ತೇನೆ'.
'ನಾನು 640 ಕಿ.ವೀ. ಉದ್ದ ಹರಿಯುತ್ತೇನೆ. ಕೋಟ್ಯಂತರ ಅನ್ನದಾತರ ಬರಡು ಭೂಮಿಗೆ ನೀರುಣಿಸಿ ರೈತರ ಬಾಳಿಗೆ ಬೆಳಕಾಗಿ, ನೂರಾರು ಕಾರ್ಖಾನೆಗಳ ಉಗಮಕ್ಕೆ ನಾಂದಿಯಾಗಿ ಲಕ್ಷಾಂತರ ಜನರಿಗೆ ಉದ್ಯೋಗ ದೊರಕಿಸಿದ್ದೇನೆ. ಗಂಗಾ ಸ್ನಾನ- ತುಂಗಾ ಪಾನ ಎಂಬ ಮಾತಿದೆ, ಅಂತೆಯೇ ತುಂಗೆಯ ನೀರು ಹರಿಯುತ್ತಿದ್ದರೆ ನೀರಿಗೆ ಇರುವೆಗಳು ಮುತ್ತುತ್ತವೆಯಂತೆ. ಅಷ್ಟು ಸಿಹಿ ನೀರನ್ನು ಯಾಂತ್ರೀಕೃತ ದೋಣಿಗಳಿಂದ ಕಲುಷಿತ ಅನುಪಯುಕ್ತ ಇಂಧನ ಸೋರಿಕೆಯಾಗಿ ಜೀವ ಸಂಕುಲಕ್ಕೆ ಕಂಟಕವಾಗುವ ಪರಿಸ್ಥಿತಿ ಬಂದಿದೆ.
'ನಿತ್ಯ ನನ್ನ ಮೇಲೆ ಯಾಂತ್ರೀಕೃತ ದೋಣಿಗಳ ಅಬ್ಬರ, ಅಪಾರ ಪ್ರಮಾಣದ ಯಂತ್ರಗಳ ಸದ್ದು, ಭಾರಿ ಗಾತ್ರದ ವಾಹನಗಳ ಓಡಾಟ. ಜೆಸಿಬಿಗಳ ಒಡಲು ಅಗೆತಕ್ಕೆ ನಲುಗಿ ಹೋಗಿರುವ ನನ್ನನ್ನು ರಕ್ಷಣೆ ಮಾಡಲು ಯಾರೂ ಸಿದ್ಧರಿಲ್ಲ. ಹೀಗಾಗಿ ನನ್ನ ಕಣ್ಣೀರ ಕಥೆ ಹೇಳುತ್ತಿದ್ದೇನೆ. ದಯಾಮಾಡಿ ಆಲಿಸಿ ನನ್ನನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುತ್ತಿದ್ದೇನೆ'.
'ನನ್ನ ಒಡಲೊಳಗಿರುವ ಸಂಪತ್ತನ್ನು (ಮರಳು) ಹಗಲು ದರೋಡೆ ಮಾಡುತ್ತಿದ್ದಾರೆ. ಈ ದರೋಡೆಕೋರರನ್ನು ನನ್ನ ರಕ್ಷಕರು (ವಿವಿಧ ಸರ್ಕಾರಿ ಇಲಾಖೆ ನೌಕರರು) ಹಿಡಿದು ಎಷ್ಟೇ ಶಿಕ್ಷಿಸಿದರೂ ನನ್ನ ಮೇಲಾಗುತ್ತಿರುವ ಅನ್ಯಾಯ ಮಾತ್ರ ಇನ್ನು ತಪ್ಪಿಲ್ಲ. ನನ್ನಲ್ಲಿರುವ ಸಂಪತ್ತನ್ನು ಲೂಟಿ ಮಾಡಿ ಭಾರೀ ಪ್ರಮಾಣದ ಹಣ ಸಂಪಾದಿಸಿರುವವರು ಮತ್ತಷ್ಟು ಅಕ್ರಮಗಳನ್ನು ಮಾಡಲು ರಾಜಕೀಯ ಮೇಲಾಟದಲ್ಲಿ ಇಳಿದಿದ್ದರು. ಆದರೆ ನನ್ನ ಬಗ್ಗೆ ಕನಿಕರ ಇರುವ ಅದೆಷ್ಟೋ ಜನ ಅವರಿಗೆ ತಕ್ಕಪಾಠ ಕಲಿಸಿ ಮೂಲೆಗುಂಪು ಮಾಡಿದ್ದಾರೆ. ಆದರೂ ತಮಗಾದ ನಷ್ಟ ತುಂಬಿಕೊಳ್ಳಲು ಮತ್ತೆ ನನ್ನ ಸಂಪತ್ತು ಲೂಟಿ ಮಾಡಲು ಸಿದ್ಧರಾಗಿದ್ದಾರೆ.
ಹಗಲು ರಾತ್ರಿ ಎನ್ನದೇ ನಿತ್ಯ ಮರಳು ಮಾಫಿಯಾ ನಡೆಯುತ್ತಿದೆ. ಇದರಲ್ಲಿ ನನ್ನ ರಕ್ಷಣೆ ಮಾಡುವವರೇ ನನ್ನ ಕೊರಳಿಗೆ ಉರುಳಾಗಿದ್ದಾರೆ. ಲೂಟಿಕೋರರಿಗೆ ಬೆಂಗಾವಲಾಗಿ ದಾರಿಯುದ್ದಕ್ಕೂ ನಿಂತು ಮಾಹಿತಿ ರವಾನೆ ಮಾಡುತ್ತಾರೆ. ಮಾಹಿತಿ ಸೋರಿಕೆಯಾಗಿ ಯಾಂತ್ರೀಕೃತ ದೋಣಿಗಳು ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ರವಾನೆಯಾಗಿ ತಪ್ಪಿಸಿಕೊಳ್ಳುತ್ತಿವೆ.
ಹೀಗೆ ನನ್ನ ಮೇಲೆ ನಿರಂತರ ಅನ್ಯಾಯ ಮಾಡುತ್ತಾ ಹೋದರೆ ಮುಂಬರುವ ದಿನಗಳಲ್ಲಿ ಹನಿ ಹನಿ ಜೀವಜಲಕ್ಕೂ ಪರದಾಡುವ ಪರಿಸ್ಥಿತಿ ಎದುರಾಗುವುದು ಖಚಿತ. ಆದರಿಂದ ಅಪಾರ ಪ್ರಮಾಣದ ಉಷ್ಣತೆ ಹೆಚ್ಚಾಗಿ ಬೆಂಕಿ ಉಗುಳುವ ಮುನ್ನವೇ ಎಚ್ಚೆತ್ತುಕೊಂಡು ನನ್ನನ್ನು ರಕ್ಷಣೆ ಮಾಡಿ.
ದಕ್ಷ ಪ್ರಾಮಾಣಿಕ ರಕ್ಷಕನನ್ನು (ಅಧಿಕಾರಿ) ನಾನು ಬಯಸುತ್ತಿದ್ದೇನೆ, ಆಗ ನನ್ನ ಮೂಲ ಸ್ಥಿತಿಗೆ ಬರಲು ಸಾಧ್ಯ. ಮೈತುಂಬಾ ಮರಳು ಹರಡಿಕೊಂಡು ಸುಂದರ ಮದುವಣಗಿತ್ತಿಯಂತೆ ಕಾಣುತ್ತೇನೆ. ಆಗ ಪರಿಸರ, ಶುದ್ಧ ಗುಣಮಟ್ಟದ ನೀರು, ಅಂತರ್ಜಲ ಹೆಚ್ಚಳ ಸೇರಿದಂತೆ ಎಲ್ಲವೂ ಹೆಚ್ಚಾಗಿ ನಿಮಗೆ ಅನುಕೂಲವಾಗುತ್ತದೆ. ಇಷ್ಟು ಹೇಳಿ ನನ್ನ ಕಥೆ ಮುಗಿಸುತ್ತೇನೆ.
ಇಂತಿ ನಿಮ್ಮ ಮನೆ ಮಗಳು ತುಂಗಭದ್ರೆ
-ನಿರೂಪಣೆ: ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

