ಕಾಂಗ್ರೆಸ್ ಕಣ್ಣು ಜಿಪಂ ಮ್ಯಾಗೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 24
ಛಿದ್ರವಾಗಿದ್ದ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ ಹಂತ ಹಂತವಾಗಿ ಯಶಸ್ವಿಯಾಗುತ್ತಾ ಸಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದ ಕಾಂಗ್ರೆಸ್, ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆಲವು ಸಾಧಿಸಿತ್ತು. ಇದೀಗ ಜಿಲ್ಲಾ ಪಂಚಾಯ್ತಿಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ಕಾಂಗ್ರೆಸ್ನ ಜಿಪಂ ಸದಸ್ಯರೇ ಕಸರತ್ತು ಆರಂಭಿಸಿದ್ದಾರೆ.
ಬಳ್ಳಾರಿಯಲ್ಲಿ ಕಾಂಗ್ರೆಸ್ ಅಲೆ ರೆಡ್ಡಿಗಳ ಪ್ರಾಬಲ್ಯಕ್ಕೆ ಕೊಡಲಿಪೆಟ್ಟು ನೀಡುತ್ತಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ವಿಧಾನಸಭಾ ಹಾಗೂ ಲೋಕಸಭೆ ವರೆಗೆ ಈ ಮೊದಲು ರೆಡ್ಡಿಗಳ ಪ್ರಾಬಲ್ಯವೇ ಹೆಚ್ಚಾಗಿತ್ತು. ಅದೃಷ್ಟ ಇದ್ದಾಗ ಮುಟ್ಟಿದ್ದೆಲ್ಲ ಚಿನ್ನವಾಗುವಂತೆ ಪ್ರತಿ ಹಂತದಲ್ಲೂ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ರೆಡ್ಡಿಗಳು ಯಶಸ್ವಿಯಾಗಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಜಿಲ್ಲೆಯ ಶಕ್ತಿಕೇಂದ್ರವಾಗಿರುವ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದಾಯ್ತು. ಅಂತೆಯೇ ಮಹಾನಗರ ಪಾಲಿಕೆ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದೂ ಆಯ್ತು, ಈಗ ಕಾಂಗ್ರೆಸ್ ಕಣ್ಣು ಜಿಲ್ಲಾ ಪಂಚಾಯಿತಿ ಮೇಲೆ ಬಿದ್ದಿದೆ.
ಆಪರೇಷನ್ ಕಮಲ: ಜಿಪಂ ಹಾಗೂ ತಾಪಂ ಚುನಾವಣೆ ಸಂದರ್ಭದಲ್ಲಿ ರೆಡ್ಡಿ ಬಳಗ ಬಿಜೆಪಿಯಲ್ಲಿತ್ತು. ಆಗ ಬಿಜೆಪಿ 18, ಕಾಂಗ್ರೆಸ್ 17 ಹಾಗೂ ಜೆಡಿಎಸ್ ಒಂದು ಸ್ಥಾನದಲ್ಲಿ ಗೆಲವು ಸಾಧಿಸಿತ್ತು.
ಅಧಿಕಾರ ಸ್ಥಾಪನೆಗಾಗಿ ರೆಡ್ಡಿ ಸಹೋದರರು ತಮ್ಮ ಪ್ರಾಬಲ್ಯ ಸಾಧಿಸಿ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ನ ಹಳೆಕೋಟೆ ಜಿಪಂ ಸದಸ್ಯೆ ನಾಗರತ್ನಮ್ಮ ಹಾಗೂ ಜೆಡಿಎಸ್ನ ಹಚ್ಚೊಳ್ಳಿ ಕ್ಷೇತ್ರದ ಸರಸ್ವತಿ ಅವರನ್ನು ಸೆಳೆದು ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅದು ಬಹಳ ದಿನ ಉಳಿಯಲ್ಲೇ ಇಲ್ಲ ಎನ್ನುವುದೂ ಸತ್ಯ.
ಬಿಜೆಪಿಯಿಂದ ಬಿಎಸ್ಸಾರ್ ತೆಕ್ಕೆಗೆ: ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಸೆಪ್ಟೆಂಬರ್ 2012ರಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕರುಣಾಕರ ರೆಡ್ಡಿ ಹೊರತುಪಡಿಸಿ ರೆಡ್ಡಿ ಸಹೋದರರು ಬಿಜೆಪಿಯಿಂದ ದೂರ ಸರಿದಿದ್ದರೆ, ಶ್ರೀರಾಮುಲು ಬಿಎಸ್ಸಾರ್ ಪಕ್ಷ ಕಟ್ಟಿದ್ದರು. ಬಿಜೆಪಿಯ ಬಹುತೇಕ ಸದಸ್ಯರು ಬಿಎಸ್ಸಾರ್ನಲ್ಲಿ ಗುರುತಿಸಿಕೊಂಡರು.
ಆಗ ಶತಾಯ ಗತಾಯ ಜಿಪಂನಲ್ಲಿ ಬಿಎಸ್ಸಾರ್ ಬಾವುಟ ಹಾರಿಸಬೇಕೆಂದು ಕಾಂಗ್ರೆಸ್ನ ಕೆಲ ಸದಸ್ಯರ ಬೆಂಬಲದೊಂದಿಗೆ ಬಿಎಸ್ಸಾರ್ ಜಿಪಂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. ಆದರೀಗ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ. ಬಿಸ್ಸಾರ್ಗೆ ಪೆಟ್ಟು ನೀಡಲು ಕಾಂಗ್ರೆಸ್ ತೆರೆಮರೆಯ ಯತ್ನ ನಡೆಸಿದೆ.
ಕುಸಿಯುತ್ತಿರುವ ಬಿಎಸ್ಸಾರ್ ಸದಸ್ಯ ಬಲ: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷದ ಜಿಪಂ ಸದಸ್ಯರು ಹೇಗಾದರೂ ಮಾಡಿ ಜಿಪಂನಲ್ಲಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸಬೇಕು ಎಂದು ಗಂಭೀರ ಪ್ರಯತ್ನ ನಡೆಸಿದ್ದಾರೆ. ಒಟ್ಟು 36 ಸದಸ್ಯರ ಬಲ ಬಳ್ಳಾರಿ ಜಿಪಂಗಿದೆ. ಸದ್ಯ ಬಿಸ್ಸಾರ್ ಸದಸ್ಯ ಬಲ ಹೆಚ್ಚಿದ್ದು, ತನ್ನ ಸಂಖ್ಯಾಬಲ ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನು ಆಪರೇಷನ್ ಕಮಲಕ್ಕೆ ಬಲಿಯಾದ ಹಳೆಕೋಟೆ ಸದಸ್ಯೆ ನಾಗರತ್ನಮ್ಮ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದರು. ಜೆಡಿಎಸ್ನ ಸರಸ್ವತಿ ಅವರು ಕೂಡ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿರುವ ಮಾತುಗಳು ಕೇಳಿಬರುತ್ತಿವೆ. ಇದರಿಂದಾಗಿ ಬಿಎಸ್ಸಾರ್ ತನ್ನ ಬಲವನ್ನು ಕಳೆದುಕೊಳ್ಳುತ್ತಿದೆ.
ಹೆಚ್ಚಿದ ಕಾಂಗ್ರೆಸ್ನ ಸಂಖ್ಯಾಬಲ: ಕಾಂಗ್ರೆಸ್ನಿಂದಲೇ ಜಿಪಂಗೆ ಆಯ್ಕೆಯಾದ ಎಸ್. ಭೀಮಾನಾಯ್ಕ್ ಅವರು ಶಾಸಕರಾಗಿದ್ದರಿಂದ ಒಂದು ಸಂಖ್ಯೆ ಕಡಿಮೆಯಾಯಿತು. ಆದರೂ, ನಾಗರತ್ನಮ್ಮ, ಸರಸ್ವತಿ ಸೇರಿ 17 ಸದಸ್ಯ ಬಲವನ್ನು ಕಾಂಗ್ರೆಸ್ ಹೊಂದಿದೆ. 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಬಿಎಸ್ಸಾರ್ಗೆ ಬೆಂಬಲ ನೀಡಿದ್ದರು ಎಂಬ ಕಾರಣಕ್ಕೆ ಭೀಮಾನಾಯ್ಕ್, ಶಶಿಧರ ಸ್ವಾಮಿ, ರೋಗಾಣಿ ಹುಲುಗಪ್ಪ, ಮಮತಾ ಸುರೇಶ್ ವಿರುದ್ಧ ಕಾಂಗ್ರೆಸ್ ಕಿಡಿಕಾರಿತ್ತು. ಆದರೆ ಇದೀಗ ಇವರು ಕೂಡ ಕಾಂಗ್ರೆಸ್ನಲ್ಲಿರಲು ಮುಂದಾಗಿದ್ದಾರೆ. ಕಾಂಗ್ರೆಸ್ಗೆ 17ರ ಸಂಖ್ಯಾಬಲವಿದ್ದರೆ, ಬಿಎಸ್ಸಾರ್ ಮತ್ತು ಬಿಜೆಪಿ ಸೇರಿ 18 ಸಂಖ್ಯಾಬಲ ಇದೆ. ಬಿಜೆಪಿ ಸದಸ್ಯರು ಬಿಎಸ್ಸಾರ್ಗೆ ಬೆಂಬಲ ನೀಡುವುದು ಕಷ್ಟದ ಮಾತು. ಹೀಗಾಗಿ ಕಾಂಗ್ರೆಸ್ ಸದಸ್ಯರ ಯತ್ನ ಕೈಕೂಡಬಹುದು ಎನ್ನಲಾಗುತ್ತಿದೆ.
ಇದೇ ಹಿನ್ನೆಲೆಯಲ್ಲಿ ಮುಂದಿನ ಜಿಪಂ ಸಾಮಾನ್ಯ ಸಭೆ ಅನಂತರ ಈಗಿನ ಅಧ್ಯಕ್ಷೆ ಬಿಎಸ್ಸಾರ್ನ ಸುಮಂಗಳಮ್ಮ ಗುಬಾಜಿ ವಿರುದ್ಧ ಅವಿಶ್ವಾಸ ನಿರ್ಣಯಿಸುವ ಮೂಲಕ ಕಾಂಗ್ರೆಸ್ ಜಿಪಂನಲ್ಲಿ ತನ್ನ ಅಧಿಕಾರ ಸ್ಥಾಪಿಸುವ ಯೋಚನೆಯಲ್ಲಿ ತೊಡಗಿದೆ. ಇದಕ್ಕಾಗಿ ಈಗಾಗಲೇ ಕಾರ್ಯತಂತ್ರ ರೂಪಿಸಿದೆ. ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯಾದ 6 ತಿಂಗಳ ಅನಂತರ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಯತ್ನ ನಡೆಸಿದೆ.
ಬಳ್ಳಾರಿಯಲ್ಲಿ ಮೊದಲಿನಿಂದಲೂ ಪ್ರಾಬಲ್ಯ ಸ್ಥಾಪಿಸಿದ್ದ ಕಾಂಗ್ರೆಸ್, ರೆಡ್ಡಿ ಬಳಗದಿಂದಾಗಿ ವರ್ಚಸ್ಸನ್ನು ಕಳೆದುಕೊಂಡಿತ್ತು. ಆದರೀಗ ಪರಿಸ್ಥಿತಿ ಕಾಂಗ್ರೆಸ್ ಪರ ಇರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಕಳೆದುಹೋದ ಪ್ರಾಬಲ್ಯವನ್ನು ಮರಳಿ ಪಡೆಯುವ ಎಲ್ಲ ಪ್ರಯತ್ನಕ್ಕೂ ಕೈ ಹಾಕಿದೆ. ಈ ಪ್ರಯತ್ನದಲ್ಲಿ ಅದೆಷ್ಟು ಯಶ ಕಾಣುತ್ತದೆ ಎಂಬುದನ್ನು ಜಿಲ್ಲೆಯ ಜನತೆ ಕಾದುನೋಡುತ್ತಿದೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

