ಬಳ್ಳಾರಿ

ಬಿಸಿಲೂರಲ್ಲಿ ಲೋಟ ನೀರಿಗೂ ಪರದಾಟ

Published On :

ಹಗರಿಬೊಮ್ಮನಹಳ್ಳಿ: ಜಿಲ್ಲೆಯಲ್ಲೇ ಸದಾ ಬರಗಾಲ ಮತ್ತು ಕಡಿಮೆ ಅಂತರ್ಜಲ ಇರುವ ತಾಲೂಕುಗಳ ಪೈಕಿ ಬಸಲುಸೀಮೆ ಹಗರಿಬೊಮ್ಮನಹಳ್ಳಿ ಮೊದಲನೇ ಸ್ಥಾನದಲ್ಲಿದೆ. ತಾಲೂಕಾದ್ಯಂತ ಕುಡಿಯುವ ನೀರಿಗೂ ಯಾವಾಗಲೂ ಹಾಹಾಕಾರ ಇದ್ದೇ ಇದೆ. ತಾಲೂಕಿನ ಜನತೆ ಕೊಳವೆಬಾವಿಗಳ ನೀರನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಬಿಸಿಲೂರು ಹಗರಿಬೊಮ್ಮನಹಳ್ಳಿ ತಾಲೂಕಿನ ಇಪ್ಪತ್ತಕ್ಕೂ ಅಧಿಕ ಹಳ್ಳಿಗಳಿಗೆ ಈಗ ಟ್ಯಾಂಕರ್ ಮೂಲಕ ನೀರು ಪೂರೈಸಿ ಅಲ್ಲಿನ ಜನತೆಯ ಬಾಯಾರಿಕೆ ನೀಗಿಲಾಗುತ್ತಿದೆ. ಈ ತಾಲೂಕು ರಚನೆಗೊಂಡ ಮೇಲೆ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿದ್ದು ಬಹುಶಃ ಇದೇ ಮೊದಲು ಎನ್ನಬಹುದು. ಸತತ ಎರಡು ವರ್ಷಗಳಿಂದ ಬರಕ್ಕೆ ತುತ್ತಾದ ತಾಲೂಕಿನ ಜನತೆ, ಈ ಬಾರಿಯ ಬೇಸಿಗೆಯಲ್ಲಂತೂ ತೀವ್ರ ಸಂಕಷ್ಟ ಎದುರಿಸಬೇಕಾಯಿತು.
ಕೊಳವೆಬಾಯಿಯೇ ಜೀವಜಲ: ತಾಲೂಕಿನಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದರೂ ಹಗರಿಬೊಮ್ಮನಹಳ್ಳಿ ಪಟ್ಟಣ ಹೊರತುಪಡಿಸಿದರೆ ತಾಲೂಕಿನ ಯಾವುದೇ ಹಳ್ಳಿಗೂ ತುಂಗಭದ್ರೆಯಿಂದ ನೀರು ಪೂರೈಸುವ ಯೋಜನೆಗಳು ಇಲ್ಲಿಯವರೆಗೂ ಜಾರಿಗೊಂಡಿಲ್ಲ. ಬದಲಾಗಿ ಕೊಳವೆಬಾವಿ ನೀರೇ ತಾಲೂಕಿನ 114 ಗ್ರಾಮಗಳ ಬಾಯಾರಿಕೆ ನೀಗಿಸುವ ಏಕೈಕ ಜಲಮೂಲವಾಗಿದೆ. ಇದಲ್ಲದೇ ಈ ಬಾರಿ ತಾಲೂಕಿನಲ್ಲಿರುವ ಕೆಲವೇ ಕೆಲ ಕೆರೆ, ಕಟ್ಟೆಗಳಿಗೆ ನೀರಿನ ಕ್ಷಾಮ ಸೋಕಿದೆ. ಈ ಕೆರೆ, ಕಟ್ಟೆಗಳಲ್ಲಿ ಕುಡಿಯುವ ನೀರನ್ನು ಸಂಗ್ರಹಿಸುವ ವ್ಯವಸ್ಥೆ ತಾಲೂಕಿನಲ್ಲಿಲ್ಲ. ಹೀಗಾಗಿ ಇಡೀ ತಾಲೂಕಿನ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಕೊಳವೆಬಾವಿಗಳ ಮೇಲೆಯೇ  ಆಧಾರಿತವಾಗಿದೆ.
ಕುಸಿಯುತ್ತಿರುವ ಅಂತರ್ಜಲ: ಈ ಮೊದಲು 40 ಅಡಿ ನೆಲ ಅಗೆದರೆ ನೀರು ಮೇಲಕ್ಕೆ ಚಿಮ್ಮುವಂತಹ ಪರಿಸ್ಥಿತಿ ತಾಲೂಕಿನಲ್ಲಿತ್ತು. ಭೂವಿಜ್ಞಾನಿಗಳು ಹೇಳುವಂತೆ ಸರಾಸರಿ 150 ಅಡಿ ಆಳಕ್ಕೂ ಕೊರೆದರೂ ಒಂದು ಹನಿ ನೀರು ಸಿಗದಷ್ಟರ ಮಟ್ಟಿಗೆ ಅಂತರ್ಜಲ ಮಟ್ಟ ಕುಸಿದಿದೆ. ಹಲವು ಕಡೆಗಳಲ್ಲಿ ಈ ಪ್ರಮಾಣ 300ಕ್ಕೂ ಅಧಿಕ ಅಡಿಗಳಿಗೆ ಮುಟ್ಟಿದೆ. ಈಗ ಎಲ್ಲೆಡೆ ಜಲಕ್ಷಾಮ ತೀವ್ರಸ್ವರೂಪ ಪಡೆದುಕೊಂಡಿದ್ದು, ಇನ್ನೂ ಹದಿನೈದು ದಿನಗಳ ಒಳಗಡೆ ಮಳೆ ಆಗದಿದ್ದರೆ ಅಧಿಕಾರಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದೇ ದೊಡ್ಡ ಸಮಸ್ಯೆಯಾಗಿ ಕಾಡುವುದಂತು ಖಚಿತ.
ತಳ್ಳುಗಾಡಿ ಮೊರೆ ಹೋದ ಜನತೆ: ಈ ಮಧ್ಯೆ ತಾಲೂಕು ಕೇಂದ್ರ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಐದಾರು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹಳ್ಳಿಗಳಲ್ಲಿನ ಹೆಣ್ಣುಮಕ್ಕಳು ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು,  ಗಂಟೆಗಟ್ಟಲೆ ಕುಡಿಯುವ ನೀರಿಗಾಗಿ ಸರದಿಯಲ್ಲಿ ನಿಂತು ಕಾಯಬೇಕಾಗಿದೆ. ಸ್ಥಳೀಯಾಡಳಿತಗಳು ಟ್ಯಾಂಕರ್ ಮೂಲಕ ನೀರು ಪೂರೈಸಿ ಕೆಲವು ಗ್ರಾಮಗಳಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಶಮನಕ್ಕೆ ಮುಂದಾಗಿದೆ. ಅದರೆ ಇದು ಬಕಾಸುರನ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಹೀಗಾಗಿ ಗ್ರಾಮೀಣರು ತಳ್ಳುಗಾಡಿ, ಸೈಕಲ್ಗಳಲ್ಲಿ ಕೊಡ ಇಟ್ಟುಕೊಂಡು ಹಾಗೂ ಎತ್ತಿನ ಬಂಡಿಯಲ್ಲಿ ಡ್ರಮ್ನಲ್ಲಿ ನೀರು ತರುವವರ ಸಂಖ್ಯೆ ನಿತ್ಯ ಹೆಚ್ಚಾಗುತ್ತಲೆ ಇದೆ. ತಾಲೂಕಿನ ಮಾದೂರು ಗ್ರಾಮದಲ್ಲಿ ಮನೆಗೊಂದು ತಳ್ಳುಗಾಡಿಗಳನ್ನಿಟ್ಟುಕೊಂಡು ಅಲ್ಲಿನ ಜನತೆ ನಿತ್ಯ ನೀರು ತರುತ್ತಿದ್ದಾರೆ.
ಕುಡಿಯುವ ನೀರಿನ ನಿರ್ವಹಣೆ ಹೊತ್ತುಕೊಂಡಿರುವ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ ತಾಲೂಕಿನಲ್ಲಿ ಸುಮಾರು 40 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಉಳಿದ ಹಳ್ಳಿಗಳಲ್ಲಿ ಪರಿಸ್ಥಿತಿ ಪರವಾಗಿಲ್ಲ ಎಂದೂ ಹೇಳುವಂತಿಲ್ಲ. ಇನ್ನು ಹದಿನೈದು ದಿನಗಳಲ್ಲಿ ಮಳೆ ಬಾರದಿದ್ದರೆ ಈ ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಲಿದೆ ಎಂದು ತಿಳಿಸುತ್ತಾರೆ.
ಟ್ಯಾಂಕರ್ ಮೂಲಕ ನೀರು ಪೂರೈಕೆ: ಕುಡಿಯವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ತಾಲೂಕಿನ ಕೆಚ್ಚಿನಬಂಡಿ, ಸೊನ್ನ, ರಾಯರಾಳು ತಾಂಡ, ಓಬಾಳಪುರ, ಕೊಗಳಿ ತಾಂಡ, ಕೊಗಳಿ, ಜಿ. ಕೊಡಿಹಳ್ಳಿ, ಹೊಸಕೇರಿ, ಗದ್ದಿಕೇರಿ, ಬಸರಕೋಡು ಸೇರಿದಂತೆ ಸುಮಾರು 16-20 ಹಳ್ಳಿಗಳಲ್ಲಿ ಭೂಮಿಯ ಅಳದಲ್ಲಿ ನೀರಿನ ಸಾಂದ್ರತೆ ಸಂಪೂರ್ಣ ಬತ್ತಿಹೋಗಿದ್ದು, ಕೊಳವೆಬಾವಿ ಕೊರೆಯಿಸಿದರೂ ಒಂದು ಹನಿ ನೀರಿಲ್ಲದ ಪರಿಸ್ಥಿತಿ ಈ ಗ್ರಾಮಗಳಲ್ಲಿ ನಿರ್ಮಾಣವಾಗಿದೆ. ಪಂ.ರಾ.ಎ. ಇಲಾಖೆ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ  ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಈ ಹಳ್ಳಿಗಳಲ್ಲಿ ಹದಗೆಟ್ಟಿರುವ ಕುಡಿಯುವ ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನಗೊಳಿಸುವ ಪ್ರಯತ್ನಗಳು ತಾಲೂಕಾಡಳಿತದಿಂದ ನಿತ್ಯ ನಡೆಯುತ್ತಿವೆ.
ಸಮಸ್ಯೆ ನಿವಾರಿಸಲು ಕ್ರಮ: ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸದ್ಯ ಇರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬೇಸಿಗೆ ಕಾಲ ಆರಂಭವಾದ ದಿನದಿಂದ ಇಲ್ಲಿತನಕವೂ ತಾಲೂಕಿನ ವಿವಿಧ ಕಡೆಗಳಲ್ಲಿ 45 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಈ ಪೈಕಿ 25 ಬೋರ್ಗಳಲ್ಲಿ ನೀರು ಬಂದಿದೆ. ಉಳಿದ 20 ಕೊಳವೆ ಬಾವಿಗಳಲ್ಲಿ ನೀರೇ ಇಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಈಗಾಗಲೇ ರು. 42 ಲಕ್ಷ ವೆಚ್ಚದ ಕ್ರಿಯಾ ಯೋಜನೆಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಈ ನಡುವೆ ಕೊಳವೆ ಬಾವಿಗಳಲ್ಲಿ ನೀರಿನ ಸಾಂದ್ರತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ಶಮನಗೊಳಿಸುವುದು ಕಷ್ಟದ ಕೆಲಸವಾಗಿದೆ. ಆಗಿದ್ದರೂ ಲಭ್ಯ ಇರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಾಲೂಕಿನಲ್ಲಿ ನೀರಿನ ಸಮಸ್ಯೆ ನಿವಾರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಪಂ.ರಾ.ಎ. ಎಇಇ ಕೇಣಿಬಸಪ್ಪ.

ಪರ್ಯಾಯ ವ್ಯವಸ್ಥೆ ಕಲ್ಪಿಸಲಿ
ತಾಲೂಕಿನಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದು, ಈ ನದಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ತಾಲೂಕಿನಲ್ಲಿ ಬೇಸಿಗೆ ಸಮಯ ಸೇರಿದಂತೆ ಎಲ್ಲ ಕಾಲಕ್ಕೂ ಕಾಡುವ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬಹುದು. ಆದರೆ ಇಲ್ಲಿಯವರೆಗೆ ಆಡಳಿತ ನಡೆಸಿರುವವರೆಲ್ಲರೂ ಅಭಾವ ಪರಿಸ್ಥಿತಿಯಡಿಯಲ್ಲಿ ಕೊಳೆವಬಾವಿಗಳನ್ನು ಕೊರೆಯಿಸಿದರೆ ಹೊರತು, ಅವರ್ಯಾರು ಕೂಡ ನದಿ ನೀರಿನಿಂದ ಗ್ರಾಮಗಳಿಗೆ ನೀರು ಪೂರೈಸಬಹುದಾದ ಯೋಜನೆಗಳತ್ತ ಮನಸ್ಸು ಮಾಡಲಿಲ್ಲ. ಹೀಗಾಗಿ ಇವತ್ತು ತಾಲೂಕಿನಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ.
-ತಂಬ್ರಹಳ್ಳಿ ಪ್ರಭಾಕರ, ಎಂಜಿನಿಯರಿಂಗ್ ಪದವೀಧರ

ಮಾಲ್ವಿ ಡ್ಯಾಂಗೆ ನೀರು ತುಂಬಿಸಲಿ
ಜಿಲ್ಲೆಯ ಬೇರೆ ತಾಲೂಕಿಗೆ ಹೋಲಿಸಿದರೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಅವಕಾಶವಿದೆ. ತುಂಗಭದ್ರಾ ಇಲ್ಲವೆ ಭದ್ರಾ ನದಿಯಿಂದ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ತಾಲೂಕಿನ ಜೀವನಾಡಿ ಮಾಲ್ವಿ ಡ್ಯಾಂಗೆ ನೀರು ತುಂಬಿಸಿದರೆ ತಾಲೂಕಿನ 70ಕ್ಕೂ ಅಧಿಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಬಹುದು. ಈ ದಿಸೆಯಲ್ಲಿ ಸರ್ಕಾರ ಮಾಲ್ವಿ ಡ್ಯಾಂಗೆ ನೀರು ತುಂಬಿಸುವ ಯೋಜನೆ ಜಾರಿಯತ್ತ ಮಾನಸ್ಸು ಮಾಡಬೇಕು. ಆ ಮೂಲಕ ಭವಿಷ್ಯತ್ತಿನಲ್ಲಿ ಒದಗಬಹುದಾದ ಭಾರೀ ನೀರಿನ ಕ್ಷಾಮವನ್ನು ತಪ್ಪಿಸಬಹುದು.
-ಸೋಮಲಿಂಗಪ್ಪ, ಉಲವತ್ತಿ ಗ್ರಾಮದ ರೈತ

-ಹುಳ್ಳಿ ಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.