ಅಕ್ಕಿ ಫಲಾನುಭವಿ ಕಕ್ಕಾಬಿಕ್ಕಿ
ಹೂವಿನಹಡಗಲಿ: ರಾಜ್ಯ ಸರ್ಕಾರ ರು. 1ಗೆ 1 ಕೆಜಿ ಅಕ್ಕಿ ಮಂಜೂರು ಮಾಡುವ ಭರವಸೆ ಬೆನ್ನಲ್ಲೇ ಬಡವ ಶ್ರೀಮಂತ ಎನ್ನದೇ ಬಿಪಿಎಲ್, ಅಂತೋದ್ಯಯ ಪಡಿತರ ಚೀಟಿಗಳನ್ನು ಪಡೆಯಲು ತಾಲೂಕು ಕಚೇರಿಯಲ್ಲಿ ಪರದಾಟ ಶುರುವಾಗಿದೆ.
ಈ ಹಿಂದೆ ವಿತರಣೆ ಮಾಡಿರುವ ಪಡಿತರ ಚೀಟಿಗಳಿಗೆ ಭಾವಚಿತ್ರ, ಹೆಬ್ಬೆಟ್ಟು ನೀಡಲು ಈಗಾಗಲೇ ಹತ್ತಾರು ಬಾರಿ ತಾಲೂಕು ಕೇಂದ್ರಕ್ಕೆ ಕಡು ಬಡವರು ಅಲೆದಾಡಿ ಸುಸ್ತಾಗಿದ್ದಾರೆ. ಈಗ ಮತ್ತೆ ಈ ಹಿಂದೆ ಪಡೆದಿರುವ ಪಡಿತರ ಚೀಟಿಗೆ ಹೆಬ್ಬೆಟ್ಟು ನೀಡಬೇಕೆಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ತಮ್ಮ ದೈನಂದಿನ ಬದುಕು ಮತ್ತು ಕೂಲಿ ಬದಿಗಿಟ್ಟು ತಾಲೂಕು ಕಚೇರಿ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ.
ಬೆಳಗಿನಿಂದ ಸರತಿ: ಬೆಳಗಿನ ಜಾವದಲ್ಲೆ ತಾಲೂಕು ಕೇಂದ್ರಕ್ಕೆ ಬರುತ್ತಿರುವ ಫಲಾನುಭವಿಗಳು, ಊಟ, ನಿದ್ರೆ ಇಲ್ಲದೇ ಸರತಿ ಸಾಲಲ್ಲಿ ನಿಂತು ಪಡಿತರ ಚೀಟಿ ಪಡೆಯುವ ಅನಿವಾರ್ಯತೆ ಎದುರಾಗಿದೆ. ಮುಂಬರುವ ದಿನಗಳಲ್ಲಿ ತಮಗೆ 30 ಕೆಜಿ ಅಕ್ಕಿ ತಪ್ಪುವ ಸಾಧ್ಯತೆ ಮತ್ತು ಯಾವ ಸೌಲಭ್ಯಗಳೂ ಇಲ್ಲ ಎಂಬ ಭಯದಲ್ಲಿರುವ ಜನತೆ ಸಂಜೆಯವರೆಗೂ ಕಾಯುತ್ತಿದ್ದಾರೆ.
ಆದರೆ ತಾಲೂಕು ಕಚೇರಿಯಲ್ಲಿ ಪಡಿತರ ಚೀಟಿಯನ್ನು ಕೇವಲ ಒಂದೇ ಒಂದು ಗಣಕ ಯಂತ್ರದಿಂದ ಮಾತ್ರ ವಿತರಣೆ ಮಾಡುತ್ತಿದ್ದಾರೆ. ಇದರಿಂದ ಬೆಳಗ್ಗಿನಿಂದ ರೈತ ಕೂಲಿ ಕಾರ್ಮಿಕರು ವಿಧಿಯಿಲ್ಲದೇ ನಿಲ್ಲುತ್ತಿದ್ದಾರೆ. ಐದು ವರ್ಷಗಳಿಂದ ಈ ಪಡಿತರ ಚೀಟಿ ವ್ಯವಸ್ಥೆ ಮತ್ತು ವಿತರಣೆ ಕ್ರಮವನ್ನು ಸರಿಯಾಗಿ ನಿಭಾಯಿಸುವಲ್ಲಿ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳದ ಕಾರಣ, ಜನರನ್ನು ವಿನಾ ಕಾರಣ ಅಲೆದಾಡಿಸುತ್ತಿದ್ದಾರೆ. ಒಮ್ಮೆ ಬಿಪಿಎಲ್ ಪಡಿತರ ನೀಡಿ ಮತ್ತೊಂದು ತಿಂಗಳಿನಲ್ಲಿ ಎಪಿಎಲ್ ಪಡಿತರ ಚೀಟಿಯಾಗಿ ಬದಲಾವಣೆಗೊಂಡಿರುತ್ತದೆ. ಹೀಗೆಯೇ ಆದರೆ ನಮಗೆ ಪಡಿತರ ಚೀಟಿಗಾಗಿ ಅಲೆದಾಟಕ್ಕೆ ಮುಕ್ತಿ ಸಿಗುವುದು ಯಾವಾಗ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.
ಕಾರ್ಡ್ಗಾಗಿ ದುಂಬಾಲು: ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಸರ್ಕಾರ ಸೈಕಲ್ ವಿತರಣೆ, ಭಾಗ್ಯಲಕ್ಷ್ಮಿ ಬಾಂಡ್ ಮತ್ತು ಹೆರಿಗೆ ಭತ್ಯೆ, ಮಡಿಲು ಕಿಟ್ ಸೇರಿದಂತೆ ನಾನಾ ಯೋಜನೆಗಳಿಗೆ ಮಾನದಂಡವಾಗಿರುವ ಈ ಬಿಪಿಎಲ್ ಪಡಿತರ ಚೀಟಿಯನ್ನು ಕಡ್ಡಾಯ ಮಾಡಿದ್ದಾರೆ. ಆದರಿಂದ ಈ ಎಲ್ಲ ಸೌಲಭ್ಯಗಳಿಂದ ತಾವು ವಂಚಿತರಾಗುತ್ತೇವೆ ಎಂಬ ಹಿನ್ನೆಲೆಯಲ್ಲಿ ಜನ ಬಿಪಿಎಲ್ ಕಾರ್ಡ್ ಪಡೆಯಲು ಉಳ್ಳವರು ದುಂಬಾಲು ಬಿದ್ದಿದ್ದಾರೆ. ಆದರೆ ಸಾವಿರಾರು ಬಡ ಕುಟುಂಬಗಳಿಗೆ ಈವರೆಗೂ ಬಿಪಿಎಲ್ ಪಡಿತರ ಚೀಟಿ ತಲುಪಿಲ್ಲ, ಸರ್ಕಾರ ಈವರೆಗೂ ಹೊಸ ಅರ್ಜಿ ನೀಡಲು ಅವಕಾಶ ನೀಡದ ಕಾರಣ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆಂದು ಜನರು ದೂರುತ್ತಾರೆ.
ಈಗಾಗಲೇ ಬಂದು ಹೋಗಿರುವ ಸರ್ಕಾರಗಳು ಈ ಬಗ್ಗೆ ಸರಿಯಾದ ನೀತಿ, ನಿಯಮಗಳನ್ನು ಪಾಲನೆ ಮಾಡಿ ಇದಕ್ಕೆ ಇತಿಶ್ರೀ ಹಾಡಿಲ್ಲ. ಈ ಹಿಂದೆ ಕಡುಬಡವರು ಪಡಿತರ ಪಡೆಯಲು ಸಾವಿರಾರು ರು. ಕಳೆದುಕೊಂಡಿದ್ದರು. ಈಗಲಾದರೂ ಪಡಿತರ ಸಿಕ್ಕಿತಲ್ಲ ಎಂದು ನಿಟ್ಟುಸಿರುವ ಬಿಡುವ ಬೆನ್ನಲ್ಲೇ ಈಗ ಮತ್ತೆ ಕೇಂದ್ರ ಸ್ಥಳಕ್ಕೆ ಬಂದು ಹೆಬ್ಬೆಟ್ಟು ಸಹಿ ನೀಡಿ ಎಂದು ಆದೇಶದ ಹಿಂದಿರುವ ಹುನ್ನಾರವೇನು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

