ಖಾಸಗಿಯವರಿಂದ ಸಮವಸ್ತ್ರ ಸರಬರಾಜು
ಕನ್ನಡಪ್ರಭ ವಾರ್ತೆ, ಕೊಟ್ಟೂರು, ನ. 4
ಕೂಡ್ಲಿಗಿ ತಾಲೂಕಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮಂಜೂರಾದ ಉಚಿತ ಸಮವಸ್ತ್ರದ ಬಟ್ಟೆ ಖರೀದಿ ವಿಷಯ ಗೊಂದಲಕ್ಕೀಡಾಗಿದ್ದು, ಕೆಲ ವ್ಯಕ್ತಿಗಳು ಬಿಇಒ ಕಚೇರಿ ಸೂಚನೆ ಮೇರೆಗೆ ಸದ್ದಿಲ್ಲದೆ ಶಾಲೆಗಳಿಗೆ ಬೇಕಾದ ವಿದ್ಯಾರ್ಥಿಗಳ ಹೊಸ ಸಮವಸ್ತ್ರಗಳ ಬಟ್ಟೆ ಗಂಟನ್ನು ಸರಬರಾಜು ಮಾಡಿದ್ದಾರೆ.
ಸರ್ಕಾರ 2013-14ನೇ ಸಾಲಿಗೆ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ಬೇಕಾದ ಬಟ್ಟೆ ಖರೀದಿಸುವ ಮತ್ತು ವಿದ್ಯಾರ್ಥಿಗಳಿಗೆ ಅಳತೆಗನುಗುಣವಾಗಿ ಹೊಲಿಗೆ ಮಾಡಿಸುವ ಸಂಪೂರ್ಣ ಅಧಿಕಾರವನ್ನು ಎಸ್ಡಿಎಂಸಿಗಳಿಗೆ ನೀಡಿ ಸರ್ಕಾರಿ ಆದೇಶ ಹೊರಡಿಸಿದೆ. ವಾಸ್ತವ ಸ್ಥಿತಿ ಹೀಗಿದ್ದರೂ ಕೂಡ್ಲಿಗಿ ತಾಲೂಕಿನ ಬಹುತೇಕ ಶಾಲೆಗಳಿಗೆ ಸಮವಸ್ತ್ರದ ಬಟ್ಟೆಯ ತಾನುಗಳನ್ನು ಖಾಸಗಿಯವರು ತಮಗಿರುವ ಪ್ರಭಾವ ಬಳಸಿ ಸರಬರಾಜು ಮಾಡಿ ಎಸ್ಡಿಎಂಸಿಯಿಂದ ಹಣ ಪಡೆಯುವ ಪ್ರಯತ್ನ ಸಾಗಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಜಂಟಿ ಜವಾಬ್ದಾರಿ: ತಾಲೂಕಿನಲ್ಲಿರುವ 1ರಿಂದ 8ನೇ ತರಗತಿವರೆಗಿನ 36,568 ವಿದ್ಯಾರ್ಥಿಗಳಿಗೆ ಸರ್ಕಾರ ಸರ್ವಶಿಕ್ಷಣ ಅಭಿಯಾನದಡಿ ತಲಾ ರು. 200ರಂತೆ ರು. 73,13,600ನ್ನು ಸಂಬಂಧಿಸಿದ ಶಾಲಾ ಎಸ್ಡಿಎಂಸಿಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಸಮವಸ್ತ್ರದ ಬಣ್ಣ, ಡಿಸೈನ್ ನಿರ್ಧರಿಸುವ, ಖರೀದಿಸುವುದು, ಹೊಲಿಗೆ ಮಾಡಿಸಲು ಎಸ್ಡಿಎಂಸಿ ಮತ್ತು ಶಾಲೆಯ ಮುಖ್ಯಗುರುಗಳೆ ಜಂಟಿ ಜವಾಬ್ದಾರಿ ಹೊರಬೇಕೆಂಬುದನ್ನು ಎಂಎಚ್ಆರ್ಡಿ ನಿರ್ದೇಶನದಂತೆ ಸೂಚಿಸಿದೆ. ಎಂಎಚ್ಆರ್ಡಿ ಸಮವಸ್ತ್ರಕ್ಕೆ ಬಿಡುಗಡೆ ಮಾಡಿದ ಅನುದಾನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕೆಂಬ ಕುರಿತು ಎಸ್ಡಿಎಂಸಿಗಳಿಗೆ 14 ಸೂತ್ರಗಳನ್ನು ರಚಿಸಿ ಆದೇಶಿಸಿದೆ. ಸಮವಸ್ತ್ರಕ್ಕಾಗಿ ಬಟ್ಟೆ ಖರೀದಿಸಲು ಮಾರಾಟಗಾರರಿದಂ 3 ದರಪಟ್ಟಿ ಪಡೆದು ಕನಿಷ್ಠ ದರ ನಮೂದಿಸಿದ ಮಾರಾಟಗಾರನಿಗೆ ಕಾರ್ಯಾದೇಶ ನೀಡಲು ಸ್ಪಷ್ಟವಾಗಿ ಸೂಚಿಸಲಾಗಿದೆ.
ಬಂಡಲ್ ಮೇಲೆ ಶಾಲೆ ಹೆಸರು: ಸಮವಸ್ತ್ರ ಖರೀದಿಗೆ ಸಂಬಂಧಿಸಿದಂತೆ ಎಸ್ಡಿಎಂಸಿಯವರು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಪೂರ್ವದಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿ ತಾಲೂಕಿನ ಶಾಲೆಗಳಿಗೆ ಖಾಸಗಿ ವ್ಯಕ್ತಿಯೋರ್ವ ಬಟ್ಟೆ ಸರಬರಾಜು ಮಾಡಿದ್ದಾನೆ. ಖಾಸಗಿ ವ್ಯಕ್ತಿ ಪೂರೈಸಿರುವ ಬಟ್ಟೆಗಳನ್ನು ಇಳಿಸಿಕೊಳ್ಳುವಂತೆ ಬಿಇಒ ಕಾರ್ಯಾಲಯದ ಸಿಬ್ಬಂದಿ ಮೌಖಿಕವಾಗಿ ಸೂಚಿಸಿದೆ. ಅಲ್ಲದೇ ಬಟ್ಟೆಗಳ ಕೆಲ ಬಂಡಲ್ಗಳ ಮೇಲೆ ಕಚೇರಿ ಶಾಲೆಗಳ ಹೆಸರನ್ನು ಸೂಚಿಸಿದೆ. ಬಂಡಲ್ಗಳ ಮೇಲಿನ ಶಾಲೆ ಹೆಸರು ನಮೂದಾಗಿರುವ ಹಿನ್ನೆಲೆಯಲ್ಲಿ ಶಾಲಾ ಮುಖ್ಯಗುರುಗಳು ಬಂಡಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಹೆಸರು ಹೇಳಲಿಚ್ಛಿಸಿದ ಶಾಲೆಯೊಂದರ ಮುಖ್ಯಗುರು, ಬಿಇಒ ಕಾರ್ಯಾಲಯದವರು ಸೂಚಿಸಿರುವ ಹಿನ್ನೆಲೆಯಲ್ಲಿ ತಾವು ಸಮವಸ್ತ್ರಗಳ ಬಂಡಲ್ಗಳನ್ನು ಪಡೆದುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಹಣವನ್ನು ಇದುವರೆಗೂ ಪಾವತಿ ಮಾಡಿಲ್ಲ ಎಂದು ತಿಳಿಸಿದರು.
ಸರ್ವಶಿಕ್ಷ ಅಭಿಯಾನದ ಯೋಜನೆಗಳ ಜಾರಿಗೆ ಸಂಬಂಧಿಸಿದ ಶಾಲೆಗಳಿಗೆ ಅನುದಾನ ನೇರವಾಗಿ ಮಂಜೂರಾಗುತ್ತದೆ. ಇಲಾಖೆ ಸೂಚಿಸಿದ ನಿಯಮಾನುಸಾರ ನಿರ್ಧಾರ ಕೈಗೊಳ್ಳುವ ಅಧಿಕಾರ ಎಸ್ಡಿಎಂಸಿಗಳಿಗೆ ಇದೆ. ಆದರೆ ಈ ಅಧಿಕಾರವನ್ನು ಮೊಟಕುಗೊಳಿಸಿ ಕೆಲ ಪ್ರಭಾವಿಗಳು ತಮ್ಮ ದುಡಿಮೆಗೆ ಬಳಸಿಕೊಳ್ಳಲು ಈ ಸಂಚು ರೂಪಿಸುತ್ತಿರುವುದು ಖಂಡನೀಯ ಎಂಬುದು ಎಸ್ಡಿಎಂಸಿಯವರು ಅಸಮಾಧಾನ.
ಶಾಲೆಗಳ ಸಮವಸ್ತ್ರಗಳನ್ನು ಪೂರೈಸಲು ಯಾವ ಏಜೆನ್ಸಿಯವರಿಗೂ ನೀಡಿಲ್ಲ. ಬಟ್ಟೆ ಖರೀದಿಸುವ ಅಧಿಕಾರ ಎಸ್ಡಿಎಂಸಿಯವರಿಗೆ ಇದೆ. ಸರ್ಕಾರಿ ಶಾಲೆಗಳೆಂದರೆ ಸಾವಿರಾರು ಜನರು ದಿನನಿತ್ಯ ಶಾಲೆಗಳಿಗೆ ಏನೇನೋ ನೀಡುತ್ತಿರುವುದು ತಮಗೆ ಸಂಬಂಧಪಡದ ವಿಷಯ. ನಿಯಮಗಳ ಪ್ರಕಾರ ಬಟ್ಟೆ ಖರೀದಿಸಿ ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಶಾಲಾ ಮುಖ್ಯಗುರುಗಳಿಗೆ ಸ್ಪಷ್ಟವಾಗಿ ಸೂಚಿಸಲಾಗಿದೆ.
- ಮಂಜುನಾಥ, ಕೂಡ್ಲಿಗಿ ಬಿಇಒ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

