ಕೊಟ್ಟೂರೇಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ನ. 5
ದೀಪಾವಳಿ ಪಾಡ್ಯದ ದಿನವಾದ ಸೋಮವಾರ ರಾತ್ರಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಮೂಲ ಮೂರ್ತಿಯನ್ನು ಹೊತ್ತೊಯ್ಯುವ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗುವುದರೊಂದಿಗೆ ಕಾರ್ತೀಕ ತಿಂಗಳಿಡೀ ನಡೆಯುವ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರೆಯಿತು.
ಹಿರೇಮಠದಲ್ಲಿ ಹಬ್ಬದ ನಿಮಿತ್ತ ಶ್ರೀಸ್ವಾಮಿಯನ್ನು ಬಂಗಾರದ ಮೂರ್ತಿಯನ್ನು ರಾತ್ರಿ 10.30ರ ಸುಮಾರಿಗೆ ಸಂಪ್ರದಾಯದಂತೆ ಕುಳ್ಳಿರಿಸುತ್ತಿದ್ದಂತೆಯೇ ಪಲ್ಲಕ್ಕಿ ಉತ್ಸವ ಆರಂಭಗೊಂಡಿತು. ಕ್ರಿಯಾಮೂರ್ತಿ ಮಲ್ಲಿಕಾರ್ಜುನ ಸ್ವಾಮೀಜಿ, ಹಿರೇಮಠದ ಫ್ರಧಾನ ಧರ್ಮಕರ್ತ ಎ.ಎಂ.ಬಿ. ಕೊಟ್ರಯ್ಯ ಅವರ ಮಂಚೂಣಿಯಲ್ಲಿ ಸಮಾಳ, ನಂದಿಕೋಲು, ಮಂಗಳವಾದ್ಯಗಳೊಂದಿಗೆ ಮುಂದುವರೆದ ಪಲ್ಲಕ್ಕಿ ಉತ್ಸವ ತೊಟ್ಟಿಲುಮಠ, ಗಚ್ಚಿನಮಠದವರೆಗೆ ಸಾಗಿ ಪುನಃ ಹಿರೇಮಠಕ್ಕೆ ರಾತ್ರಿ 11.30ರ ಸುಮಾರಿಗೆ ಬಂದು ತಲುಪಿತು.
ಶ್ರೀಸ್ವಾಮಿಯ ಮೂಲ ಮೂರ್ತಿಯನ್ನು ಪ್ರತಿ ದೀಪಾವಳಿ ಪಾಡ್ಯದ ದಿನದಂದು ಆರಂಭಗೊಳ್ಳುವ ಬೆಳ್ಳಿ ಪಲ್ಲಕ್ಕಿ ಮಹೋತ್ಸವ ಕಾರ್ತೀಕ ಬರುವ ಪ್ರತಿ ಸೋಮವಾರ ಮತ್ತು ಗುರುವಾರ ರಾತ್ರಿ ನಡೆಯಲಿದೆ. 12 ಪಲ್ಲಕ್ಕಿ ಉತ್ಸವಗಳು ಜರುಗಿ, 13ನೇ ಉತ್ಸವವಾಗಿ ಬೆಳ್ಳಿ ರಥೋತ್ಸವ ಶ್ರೀಸ್ವಾಮಿಯ ಕಾರ್ತೀಕ ಮಹೋತ್ಸವದ ದಿನವಾದ ಡಿ. 16ರ ಸೋಮವಾರ ಜರುಗುವುದರೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.
ಪೂರ್ವಭಾವಿ ದೀಪೋತ್ಸವ ಆರಂಭ
ಕೊಟ್ಟೂರು: ಉಜ್ಜಿನಿ ಸದ್ಧರ್ಮಪೀಠದ ಜಗದ್ಗುರು ಮಹಾ ಮರುಳಸಿದ್ಧೇಶ್ವರ ಸ್ವಾಮಿ ಕಾರ್ತೀಕ ಮಾರ್ಗಶಿರ ಮಾಸಗಳ ಲಕ್ಷದೀಪೋತ್ಸವ ಡಿಸೆಂಬರ್ 16ರಂದು ಜರುಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಪೀಠದಲ್ಲಿ ದೀಪೋತ್ಸವ ಆರಂಭಗೊಂಡಿದೆ. ಲಕ್ಷದೀಪೋತ್ಸವ ದಿನವಾದ ಡಿಸೆಂಬರ್ 16ರ ಸೋಮವಾರ ಶ್ರೀಸ್ವಾಮಿಗೆ ಹೊಸ ವರ್ಷದ ಹಿಟ್ಟು ಉಂಡೆ ನೈವೇದ್ಯ ಸಮರ್ಪಣೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 1008 ಜಗದ್ಗುರು ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಜಗದ್ಗುರು ಮರುಳಸಿದ್ಧರಾಜ ದೇಶೀಕೇಂದ್ರ ಭಗವತ್ಪಾದರ 2ನೇ ಪುಣ್ಯಾರಾಧನೆ ಮತ್ತು ಸಾಮೂಹಿಕ ವಿವಾಹದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೀಠದ ವ್ಯವಸ್ಥಾಪಕ ಬಿ. ಲಿಂಗಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

