ಬಳ್ಳಾರಿ

ಎಸ್‌ಬಿಐ ಕಚೇರಿ ಸ್ಥಳಾಂತರ: ಧರಣಿ

Published On :

ಬಳ್ಳಾರಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಳ್ಳಾರಿ ಪ್ರಾದೇಶಿಕ ಕಚೇರಿಯನ್ನು ಹೊಸಪೇಟೆಗೆ ಸ್ಥಳಾಂತರಿಸುವ ಕ್ರಮ ಖಂಡಿಸಿ ಕರವೇ (ರೈತ, ಕಾರ್ಮಿಕ, ಶೋಷಿತ, ಕನ್ನಡಪರ, ಸಂಘಟನೆಗಳ ಒಕ್ಕೂಟ) ಬಳ್ಳಾರಿ ಜಿಲ್ಲಾ ಘಟಕ ಬುಧವಾರ ಬಳ್ಳಾರಿಯ ಎಸ್‌ಬಿಐನ ಮುಖ್ಯ ಶಾಖೆ ಮುಂದೆ ಪ್ರತಿಭಟನೆ ನಡೆಸಿತು.
ದೇಶದಲ್ಲಿ ಅಗ್ರಗಣ್ಯ ಬ್ಯಾಂಕ್ ಎಂದು ಹೆಸರು ಪಡೆದಿರುವ ಎಸ್‌ಬಿಐ ಪ್ರಾದೇಶಿಕ ಕಚೇರಿಯನ್ನು ಏಕಾಏಕಿ ಹೊಸಪೇಟೆಗೆ ಸ್ಥಳಾಂತರಿಸುವುದು ಆಶ್ಚರ್ಯ ಮೂಡಿಸುತ್ತದೆ. ಯಾವ ಕಾರಣಗಳಿಂದ ಕಚೇರಿ ಸ್ಥಳಾಂತರಿಸಲಾಗಿದೆ ಎಂಬ ವಿಷಯವೇ ಬಹಿರಂಗವಾಗಿಲ್ಲ. ಬಳ್ಳಾರಿ ಜಿಲ್ಲೆಯ ಬಹುದಿನಗಳ ಹೋರಾಟದ ಫಲವಾಗಿ ಬಳ್ಳಾರಿ ನಗರದಲ್ಲಿ ಎಸ್‌ಬಿಐ ಪ್ರಾದೇಶಿಕ ಕಚೇರಿ ಆರಂಭಿಸಲಾಗಿತ್ತು. ಇದೀಗ ಹೊಸಪೇಟೆಗೆ ಸ್ಥಳಾಂತರಿಸುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕರವೇ ಜಿಲ್ಲಾಧ್ಯಕ್ಷ ಕುರುಗೋಡು ಚನ್ನಬಸವರಾಜ್ ಮಾತನಾಡಿ, ಬಳ್ಳಾರಿ ಎಸ್‌ಬಿಐ ಪ್ರಾದೇಶಿಕ ಕಚೇರಿ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡಿದೆ. ಕೊಪ್ಪಳ ಜಿಲ್ಲೆಯ ಗ್ರಾಹಕರಿಗೆ ಹತ್ತಿರವಾಗುತ್ತದೆ ಎಂದು ಸ್ಥಳಾಂತರ ಮಾಡಿದ್ದರೆ, ರಾಯಚೂರು ಗ್ರಾಹಕರಿಗೆ ತೊಂದರೆಯಾಗುತ್ತದೆ. ಯಾವ ಉದ್ದೇಶದಿಂದ ಪ್ರಾದೇಶಿಕ ಕಚೇರಿಯನ್ನು ಸ್ಥಳಾಂತರಿಸಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿಸದಿರುವುದು ಆಶ್ಚರ್ಯ ಮೂಡಿಸುತ್ತದೆ ಎಂದರು.
ಇದೀಗ ಹೊಸಪೇಟೆಗೆ ಸ್ಥಳಾಂತರಿಸಿದ ಪ್ರಾದೇಶಿಕ ಕಚೇರಿಯನ್ನು ಕೂಡಲೇ ಬಳ್ಳಾರಿಗೆ ಮರಳಿ ಸ್ಥಳಾಂತರ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕಿನ ವಿರುದ್ಧ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ. ನಿರ್ಲಕ್ಷ್ಯ ಧೋರಣೆ ತಾಳಿದರೆ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಬ್ಯಾಂಕಿನ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಕುರುಗೋಡು ಚನ್ನಬಸವರಾಜ್, ಯು. ಹನುಮೇಶ್, ಡಿ.ಪಿ. ಅಂಬರೇಶ್, ಯು. ದುರುಗೇಶ್, ಎಚ್.ಕೆ. ಶ್ರೀಕಾಂತ್, ತಮ್ಮಣ್ಣ, ಸುನೀಲ್, ಚಂದ್ರಣ್ಣ, ರಾಘವೇಂದ್ರ, ಈರನಗೌಡ, ರಮೇಶ್, ಸಂತೋಷ್ ಕುಮಾರ್, ಸುಬ್ಬಣ್ಣ, ಡಿ. ಚಂದ್ರಪ್ಪ, ಮಹೇಶ್, ಮಂಜುನಾಥ್, ಮೌನೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.