ಕೊಂಡಯ್ಯಗೆ ನೋಟಿಸ್: ಡಾ.ಪರಮೇಶ್ವರ
ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.11
ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಮಂಜೂರಾದ ಜಾಗವನ್ನು ಸ್ವಂತಕ್ಕೆ ಬಳಸಿಕೊಂಡಿರುವ ಕೆ.ಸಿ. ಕೊಂಡಯ್ಯ ಅವರಿಗೆ ವಿವರಣೆ ಕೇಳಿ ನೋಟಿಸ್ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಹೇಳಿದ್ದಾರೆ.
ಕೊಂಡಯ್ಯ ಅವರು ಜಾಗವನ್ನು ಸ್ವಂತಕ್ಕೆ ಬಳಸಿಕೊಂಡಿರುವುದನ್ನು ದೃಢೀಕರಿಸಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ವರದಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ ಅವರು, ಜಿಲ್ಲಾ ಕಾಂಗ್ರೆಸ್ ವರದಿ ಪ್ರಕಾರ ಅವರ ಮೇಲಿನ ಆರೋಪ ಸಾಬೀತಾಗಿದೆ. ಆದರೂ ಸಹಜ ನ್ಯಾಯ ಪದ್ಧತಿ ಪ್ರಕಾರ ಅವರಿಂದ ಕಾರಣ ಕೇಳುತ್ತೇನೆ. ಬಳಿಕ ಕಾಂಗ್ರೆಸ್ ಸಂವಿಧಾನದ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ರಾಜೀವ್ ಗಾಂಧಿ ಸ್ಮಾರಕ ಟ್ರಸ್ಟ್ ಹೆಸರಿನಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಿಸುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ದಿವಂಗತ ಎಂ.ವೈ.ಘೋರ್ಪಡೆ ಅವರು ಅಧ್ಯಕ್ಷರಾಗಿದ್ದು, ಅಲ್ಲಂ ವೀರಭದ್ರಪ್ಪ, ದಿವಾಕರ ಬಾಬು ಹಾಗೂ ಕೊಂಡಯ್ಯ ಸದಸ್ಯರಾಗಿದ್ದರು. ಘೋರ್ಪಡೆಯವರನ್ನು ಹೊರತು ಪಡಿಸಿ ಉಳಿದ ಟ್ರಸ್ಟಿಗಳು ಇನ್ನು ಜೀವಂತವಾಗಿದ್ದಾರೆ. ಆದರೆ ಟ್ರಸ್ಟ್ನಲ್ಲಿ ಆಗ ಬೇರೆ ಸದಸ್ಯರು ಸೇರಿಕೊಂಡಿದ್ದಾರೆ. ಅವರು ಕೊಂಡಯ್ಯ ಹಾಗೂ ಅವರ ಕುಟುಂಬ ವರ್ಗದವರಾಗಿದ್ದು, ಜಿಲ್ಲಾಡಳಿತ 99 ವರ್ಷಗಳ ಭೋಗ್ಯಕ್ಕೆ ಮಂಜೂರು ಮಾಡಿದ ಜಾಗದಲ್ಲಿ ಕೊಂಡಯ್ಯನವರು ಖಾಸಗಿ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವರದಿಯಲ್ಲಿ ಹೇಳಿದೆ ಎಂದರು.
ಕೊಂಡಯ್ಯನವರು ನಮ್ಮ ಪಕ್ಷದ ಗೌರವಾನ್ವಿತ ಮುಖಂಡರು. ಆದರೆ ಕಟ್ಟಡ ಕಟ್ಟುವಾಗ ಅವರು, ನನ್ನ ಅಥವಾ ಜಿಲ್ಲಾ ಕಾಂಗ್ರೆಸ್ ಗಮನಕ್ಕಾಗಲಿ ತಂದಿಲ್ಲ. ಅಗತ್ಯ ಬಿದ್ದರೆ ಈ ಸಂಬಂಧ ಜಿಲ್ಲಾಧಿಕಾರಿಗಳ ಜತೆ ಚರ್ಚೆ ನಡೆಸಿ ಕಾನೂನು ಕ್ರಮದ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.
ನಾನು 'ಗೌರವಾನ್ವಿತ' ಕೊಂಡಯ್ಯನವರ ಬಳಿ ಕೇಳುವುದಿಷ್ಟೇ. ನೀವು ಏಕೆ ಈ ರೀತಿ ಮಾಡಿದಿರಿ? ಹಾಗಾದರೆ ಕಟ್ಟಡವನ್ನು ಕಟ್ಟಿದ ನಂತರ ಅದರ ಕೀಲಿಯನ್ನು ಕಾಂಗ್ರೆಸ್ಗೆ ಹಸ್ತಾಂತರಿಸುತ್ತೀರಾ? ಎಂದು ಪ್ರಶ್ನಿಸುತ್ತೇನೆ. ಪಕ್ಷದ ಕಚೇರಿ ನಿರ್ಮಾಣ ಉದ್ದೇಶಕ್ಕೆ ಮಂಜೂರಾದ ಜಾಗವನ್ನು ಪರಭಾರೆ ಮಾಡುವುದಿಲ್ಲ ಎಂದರು.
ಒಂದೊಮ್ಮೆ ಕೊಂಡಯ್ಯನವರು ಕಟ್ಟಡ ನಿರ್ಮಿಸಿಕೊಟ್ಟರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಹಜ ನ್ಯಾಯ ಪದ್ಧತಿಯನ್ನು ಅನುಸರಿಸುತ್ತೇನೆ. ಅದು ಈ ದೇಶದ ಕಾನೂನು ಪದ್ಧತಿಯೂ ಹೌದು. ಕಳ್ಳನಿಗೂ ತನ್ನ ಮೇಲಿನ ಆರೋಪ ಸುಳ್ಳು ಎಂದು ಸಮರ್ಥಿಸಿಕೊಳ್ಳುವುದಕ್ಕೆ ಕಾನೂನು ಅವಕಾಶ ನೀಡುತ್ತದೆ. ಆದರೆ ಕೊಂಡಯ್ಯನವರು ನಮ್ಮ ಪಕ್ಷದ ಗೌರವಾನ್ವಿತ ಮುಖಂಡರು ಎಂದು ಹೇಳಿದರು.
ಚುನಾವಣೆ ನಂತರ ಸಮಿತಿ ಸಭೆ
ಪಂಚರಾಜ್ಯಗಳ ಚುನಾವಣೆ ಮುಗಿದ ನಂತರ ಸಮನ್ವಯ ಸಮಿತಿ ಸಭೆ ಕರೆಯಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯವಿದೆ. ಅದನ್ನು ಇನ್ನಷ್ಟು ಬಲಪಡಿಸುವುದಕ್ಕೆ ಸಮಿತಿ ರಚಿಸಲಾಗಿದೆ. ಪಂಚರಾಜ್ಯಗಳ ಚುನಾವಣೆ ಮುಗಿದ ನಂತರ ಸಭೆ ಕರೆಯಲಾಗುವುದು ಎಂದರು. ಅದೇ ರೀತಿ ಲೋಕಸಭಾ ಚುನಾವಣೆಗೆ ಪಕ್ಷ ಈಗಾಗಲೇ ತಯಾರಿ ನಡೆಸಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

