ಸಾವಯವ ಗೀಳು ಹೊಲ ತುಂಬ ಎರೆಹುಳು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 11
ದುಬಾರಿ ರಸಗೊಬ್ಬರ, ನಕಲಿ ಬೀಜದ ಹಾವಳಿ, ಸಕಾಲಕ್ಕೆ ಬಾರದ ಮಳೆ, ಒಂದು ವೇಳೆ ಬಂದರೂ ಸಾಲಶೂಲ ಮಾಡಿ ಬಿತ್ತನೆ ಮಾಡಿದ್ದರೂ ಬಂದ ಫಸಲಿಗೆ ಬೆಂಬಲ ಬೆಲೆ ಸಿಗದೇ ಕಂಗಾಲಾಗಿರುವ ಅನ್ನದಾತ ಸಾವಯವ ಕೃಷಿಯತ್ತ ದಾಪುಗಾಲು ಇಡುತ್ತಿದ್ದಾನೆ.
ಕಾರ್ಖಾನೆಗಳಲ್ಲಿ ನೌಕರಿಗಾಗಿ ಅಲೆದಾಡದೇ ಕೃಷಿ ನಂಬಿರುವ ತಾಲೂಕಿನ ಮಾಗಳ ಗ್ರಾಮದ ರಾಜು ನಸಿಪುಡಿ ಐಟಿಐ ಮುಗಿಸಿರುವ ನಿರುದ್ಯೋಗಿ ಕೈ ಹಿಡಿದ್ದು ಸಾವಯವ ಕೃಷಿ, ಹೈನುಗಾರಿಕೆ, ಮೊಲ ಸಾಕಾಣಿಕೆ ಮತ್ತು ಸಮಗ್ರ ಕೃಷಿ ಪದ್ದತಿ.
ಯುವಕ ರಾಜು ಯಾವ ನೌಕರಿ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ತಂದೆಯ ಮಾರ್ಗದರ್ಶನದಲ್ಲಿ 3.67 ಎಕರೆ ಪ್ರದೇಶದಲ್ಲಿ ಸಂಪೂರ್ಣ ಸಾವಯವ ಕೃಷಿಯ ಜತೆಗೆ ಹೈನುಗಾರಿಕೆ, ಮೊಲ ಸಾಕಾಣಿಕೆ ಮತ್ತು ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.
ಹೊಲ ತುಂಬೆಲ್ಲ ಎರೆಹುಳು: 2006-07ರಲ್ಲಿ ಕೃಷಿ ಇಲಾಖೆ ಹಾಗೂ ಜ್ಞಾನ ಸಂಪದ ಟ್ರಸ್ಟ್ ಸಹಯೋಗದಲ್ಲಿ ರಾಸಾಯನಿಕ ಗೊಬ್ಬರದಿಂದಾಗುವ ಅನಾಹುತ ಮತ್ತು ಅಧಿಕ ವೆಚ್ಚಗಳ ಬಗ್ಗೆ ತಿಳಿಸಲಾಗಿತ್ತು. ಎರೆಹುಳು ಗೊಬ್ಬರ ತಯಾರಿಕೆ, ಬಳಕೆ ಕುರಿತು ಇಲಾಖೆ ಪ್ರಾತ್ಯಕ್ಷಿಕೆ ಮೂಲಕ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಹೊಂದಿದ್ದಾರೆ.
ಧಾರವಾಡ ಕೃಷಿ ಮೇಳ ಹಾಗೂ ನುರಿತ ಸಾವಯವ ರೈತರ ತೋಟಗಳಿಗೆ ಭೇಟಿ ನೀಡಿ, ಅವರಿಂದ ಸಾವಯವ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಎರೆಹುಳು ಗೊಬ್ಬರದ ಬಗ್ಗೆ ಇದ್ದ ತಪ್ಪು ಕಲ್ಪನೆ ಮಾಯವಾಗಿದೆ. ಅಧಿಕ ವೆಚ್ಚವಿಲ್ಲದೆ ಮನೆಯಲ್ಲೇ ತಯಾರಿಸಬಹುದಾದ ಸಾವಯವ ಗೊಬ್ಬರದ ಕುರಿತಂತೆ ತಿಳಿದುಕೊಂಡಿದ್ದಾರೆ.
ಕಳೆದ ಬಾರಿ ಎಕರೆಯೊಂದಕ್ಕೆ 50-55 ಟನ್ ಕಬ್ಬು ಬೆಳೆ ಬಂದಿದೆ. ತೋಟದಲ್ಲಿರುವ ತೆಂಗಿನಗಿಡಕ್ಕೆ ತಗುಲುವ ನುಸಿ ರೋಗ ಸಾವಯವ ಕೃಷಿ ಪದ್ಧತಿಯಿಂದ ಮಾಯವಾಗಿದೆ. 400ಕ್ಕೂ ಹೆಚ್ಚು ತೇಗ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇದಕ್ಕೆ ಯಾವುದೇ ಔಷಧೋಪಚಾರ, ರಸಗೊಬ್ಬರ ಬಳಕೆ ಮಾಡಿಲ್ಲ ಎನ್ನುತ್ತಾರೆ ಅವರು.
ಕೃಷಿಯೊಂದಿಗೆ ಹೈನುಗಾರಿಕೆ ಮಾಡುತ್ತಿರುವ ರಾಜು ಸಹೋದರ ಸಂತೋಷ 7-8 ಹಸುಗಳನ್ನು ಸಾಕಿ ಪ್ರತಿದಿನ ಎರಡು ಬಾರಿ ಸೇರಿ ಡೈರಿಗೆ 60-70 ಲೀಟರ್ ಹಾಲು ಹಾಕುತ್ತಾರೆ. ಸಾವಯವ ಗ್ರಾಮ ಯೋಜನೆಯಡಿ ಎರೆಹುಳು ಘಟಕ, ಬಯೋ ಡೈಜಸ್ಟರ್, ಅಜೋಲ್ಲಾ, ಘಟಕ, ತೋಟಗಾರಿಕೆ, ಅರಣ್ಯೀಕರಣದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
-ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

