3 ವರ್ಷದಲ್ಲಿ ಹಂಪಿ ಹೊಳೆಗೆ 51 ಬಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 12
ವಿಶ್ವವಿಖ್ಯಾತರ ಪ್ರವಾಸಿ ತಾಣ ಹಂಪಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೂರು ವರ್ಷದ ಅವಧಿಯಲ್ಲಿ 50ಕ್ಕೂ ಹೆಚ್ಚು ಜನರು ಕಾಲುವೆ, ಹೊಳೆಯಲ್ಲಿ ಈಜಲು ಹೋಗಿ ಮೃತ ಪಟ್ಟಿದ್ದಾರೆ. ಇದರಲ್ಲಿ ಹಂಪಿ ನೋಡಲು ಬಂದ ಪ್ರವಾಸಿಗರೇ ಹೆಚ್ಚಾಗಿ ಮೃತ ಪಟ್ಟಿರುವುದು ಆತಂಕಕಾರಿ ಸಂಗತಿಯಾಗಿದೆ.
2013ರ 9 ತಿಂಗಳ ಅವಧಿಯಲ್ಲಿ ಹಂಪಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಈಜಲು ಹೋಗಿ 19 ಜನ ಮೃತಪಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ಹಂಪಿ ಹೊಳೆಯಲ್ಲಿ ಮೃತ ಪಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಹಂಪಿ ವಿಭಾಗವೆಂದರೆ ಹಂಪಿ, ಕಂಪ್ಲಿ, ಕಮಲಾಪುರ. ಇಲ್ಲಿ ಹೊಳೆ ಹರಿಯುವುದರಿಂದ ಈಜಲು ಹೋಗಿ ಸೆಳೆವಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿದೆ. 2011ರಿಂದ 2013ರ ವರೆಗೆ 51 ಜನರು ಹೊಳೆಯಲ್ಲಿ, ಕಾಲುವೆಯಲ್ಲಿ ಈಜಲು ಹೋಗಿ ಅಲ್ಲದೆ, ನೀರಿನ ತೊಟ್ಟಿ, ಗುಂಡಿಯಲ್ಲಿ ಬಿದ್ದು ಮೃತ ಪಟ್ಟಿದ್ದಾರೆ. ಇದರಲ್ಲಿ ಬಹುತೇಕರು ಹಂಪಿ ನೋಡಲು ಬರುವ ಪ್ರವಾಸಿಗರೇ ಹೆಚ್ಚಾಗಿದ್ದಾರೆ.
ಡೇಂಜರ್ ಪ್ಲೇಸ್: ಹಂಪಿಯ ವಿಧಿವಿಧಾನ ಮಂಟಪ, ರಾಮಲಕ್ಷ್ಮಣ ದೇವಸ್ಥಾನ ಸಮೀಪದ ಚಕ್ರತೀರ್ಥ ಪ್ರದೇಶದಲ್ಲಿ ಇಂತಹ ಅವಘಡಗಳು ಹೆಚ್ಚಾಗಿ ನಡೆಯುತ್ತವೆ. ಈ ಪ್ರದೇಶದಲ್ಲಿ ವರ್ಷವಿಡೀ ಪ್ರವಾಸಿಗರ ಸಾವು ಎಂಬ ಸುದ್ದಿ ಇದ್ದೇ ಇರುತ್ತದೆ. ಇಲ್ಲಿ ಸುಳಿ ಇದೆ, ಈಜಬಾರದು ಎಂದು ಎಚ್ಚರಿಕೆಯ ನಾಮಫಲಕಗಳನ್ನು ಹಾಕಿದರೂ, ಪ್ರವಾಸಿಗರು ಮೋಜಿನಲ್ಲಿ ಸ್ನಾನಕ್ಕೆ ಈಜಲು ಹೋಗುತ್ತಾರೆ. ಹೀಗೆ ಈಜಲು ಹೋದಾಗ, ಹೊಳೆಯಲ್ಲಿ ಮುಳುಗಿ, ಸೆಳವಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುವ ಅದೆಷ್ಟೋ ಪ್ರಕರಣಗಳಿವೆ. ಇದು ಸಹಜವಾಗಿಯೇ ಪ್ರವಾಸಿಗರ ಆತಂಕಕ್ಕೆ ಕಾರಣವಾಗಿದೆ. ನಾಮಫಲಕ ಹಾಕಿ ಎಚ್ಚರಿಸಿದರೂ, ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.
51 ಜನರ ಸಾವು: ವಿಶ್ವವಿಖ್ಯಾತರ ಹಂಪಿ ಎಂದಾಕ್ಷಣ ರಾಜ್ಯದವರು ಮಾತ್ರವಲ್ಲದೆ, ದೇಶ-ವಿದೇಶದಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿ ತಾಣ ನೋಡಲಿಕ್ಕೆ ಸಂತೋಷದಲ್ಲಿ ಬಂದು ದುಃಖದಲ್ಲಿ ಮರಳಿದ ಸಾಕಷ್ಟು ಉದಾಹರಣೆಗಳಿವೆ. ಇನ್ನು ಹೊಳೆಯಾಗಿರುವುದರಿಂದ ಮೃತ ದೇಹ ಹುಡುಕುವುದೂ ಸಾಹದ ಕೆಲಸವಾಗಿದೆ.
2011ರಲ್ಲಿ ಹಂಪಿ ವಿಭಾಗದಲ್ಲಿ 8 ಜನರು ಮೃತ ಪಟ್ಟಿದ್ದರೆ, ಅದರಲ್ಲಿ 5 ಪುರುಷರು, 3 ಮಹಿಳೆಯರು, ಇನ್ನು 2012ರಲ್ಲಿ 24 ಜನ ಮೃತಪಟ್ಟಿದ್ದರೆ, ಅದರಲ್ಲಿ 16 ಪುರುಷರು ಹಾಗೂ 8 ಮಹಿಳೆಯರಿದ್ದಾರೆ. 2013ರ ಸೆಪ್ಟೆಂಬರ್ ತಿಂಗಳ ವರೆಗೆ 19 ಜನ ಮೃತ ಪಟ್ಟಿದ್ದಾರೆ. ಅದರಲ್ಲಿ 18 ಪುರುಷರು ಹಾಗೂ ಓರ್ವ ಮಹಿಳೆಯರು ಮೃತ ಪಟ್ಟಿದ್ದಾಳೆ.
ಹಂಪಿ ವಿಭಾಗವೆಂದರೆ ಕಂಪ್ಲಿ ಬಂದರೂ, ಹಂಪಿ ಮತ್ತು ಕಮಲಾಪುರದ ಹೊಳೆ, ಕಾಲುವೆಗಳಲ್ಲಿ ಮೃತ ಪ್ರವಾಸಿಗರ ಸಂಖ್ಯೆ ಹೆಚ್ಚೆಂದು ಹೇಳಬಹುದು.
ಕಾವಲು: ಹಂಪಿಗೆ ಬಂದ ಪ್ರವಾಸಿಗರಿಗೆ ರಕ್ಷಣೆ ಒದಗಿಸಲು ಹೊಳೆಯ ಅಪಾಯಕಾರಿ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇನ್ನು ತುರ್ತು ಸಂದರ್ಭದಲ್ಲಿ ಜೀವ ರಕ್ಷಕ ಸಲಕರಣೆಗಳಾದ ಬೋಟ್ ಸೇರಿದಂತೆ ಇತರ ವಸ್ತುಗಳನ್ನು ಹೊಳೆಯ ತೀರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೂ ಹಬ್ಬ, ಹರಿದಿನ, ಸಂಕ್ರಮಣ ಸೇರಿದಂತೆ ಇತರ ವಿಶೇಷ ಸಂದರ್ಭದಲ್ಲಿ ಇಂತಹ ಅವಘಡಗಳು ಸಂಭವಿಸುತ್ತವೆ. ಆದರೂ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ ಎನ್ನುತ್ತಾರೆ ಹಂಪಿ ವಿಭಾಗದ ಡಿವೈಎಸ್ಪಿ ರಶ್ಮಿ ಪರಡ್ಡಿ.
ಎಚ್ಚರಿಕೆ ಅವಶ್ಯಕ: ಸ್ನಾನ, ಈಜಲು ಹೋಗಿ, ನೀರಿನ ಸುಳಿಯಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ. ವಿಶ್ವವಿಖ್ಯಾತ ಹಂಪಿಯಲ್ಲಿ ಇಂತಹ ಅವಘಡಗಳು ನಡೆಯದಂತೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಹೆಚ್ಚಾಗಿದೆ. ಪ್ರವಾಸಿಗರು ಪ್ರವಾಸಿ ತಾಣಗಳನ್ನು ನೋಡಲು ಬಂದಾಗ ಮೋಜಿಗಾಗಿ, ಹುಂಬುತನದಿಂದ ಹೊಳೆಯಲ್ಲಿ ಈಜಾಡುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ನಾಮಫಲಕಗಳೊಂದಿಗೆ ಹೆಚ್ಚಿನ ಭದ್ರತೆ ಒದಗಿಸುವ ಮೂಲಕ ಹೊಳೆಯಲ್ಲಿ ಮೃತಪಡುವವರ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಈ ಮೂಲಕ ಪ್ರವಾಸಿಗರಿಗೆ ಮತ್ತಷ್ಟು ರಕ್ಷಣೆ ನೀಡಬೇಕಿದೆ.
ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

