ಬಳ್ಳಾರಿ

ಸಚಿವ ಪಾಟೀಲ್ ಹರಿಸುವರೇ ಚಿತ್ತ?

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 14
ಉತ್ತರ ಕರ್ನಾಟಕ ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಮುಳುಗಡೆ ಗ್ರಾಮಗಳ ಪುನರ್ ವಸತಿ ಮತ್ತು ಪುನರ್ ನಿರ್ಮಾಣ, ಕಾಲುವೆ ನಿರ್ಮಾಣ, ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ, ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.
ಮೊದಲ ಬಾರಿಗೆ ನ. 15ರಂದು ಯೋಜನಾ ಸ್ಥಳಕ್ಕೆ ಭೇಟಿ ನೀಡುತ್ತಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಈ ಯೋಜನೆಯ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವರೇ ಎಂಬ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆಯಲ್ಲಿ ರೈತ ಸಮುದಾಯವಿದೆ.
ಯೋಜನೆ ಹಿನ್ನೀರಿನಲ್ಲಿ 4 ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ. ಬಲದಂಡೆ ಭಾಗದ ಅಲ್ಲಿಪುರ, ಎಡದಂಡೆ ಭಾಗದ ಗುಮ್ಮಗೋಳ, ಬಿದರಹಳ್ಳಿ ಮತ್ತು ವಿಠಲಾಪುರ ಗ್ರಾಮಗಳ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಸ್ಥಳದಲ್ಲಿ ಇಲ್ಲಿಯವರೆಗೂ ಕುಡಿಯುವ ನೀರಿನ ಕಾಮಗಾರಿ ಹೊರತುಪಡಿಸಿದರೆ ವಿದ್ಯುತ್ ಸಂಪರ್ಕ, ಶಾಲೆ ಕಟ್ಟಡ, ಅಂಗನವಾಡಿ ಕೇಂದ್ರಗಳ ಕಾಮಗಾರಿ ಆರಂಭವಾಗಿಲ್ಲ.
ಯೋಜನೆಯ ವ್ಯಾಪ್ತಿಯಲ್ಲಿನ ಕಾಲುವೆಗಳು ಬಹುತೇಕ ಅವೈಜ್ಞಾನಿಕವಾಗಿರುವುದರಿಂದ ಜಮೀನು ನೀರಾವರಿ ವ್ಯಾಪ್ತಿಗೆ ಒಳಪಟ್ಟರೂ ನೀರಿನ ಸೌಲಭ್ಯ ಮಾತ್ರ ಮರೀಚಿಕೆಯಾಗಿದೆ. ಕಾಲುವೆಗಳಿಗೆ ಪೈಪ್‌ಲೈನ್ ಮಾಡಿದ್ದಾರೆ. ಅನೇಕ ಕಡೆಗಳಲ್ಲಿ ಮುಖ್ಯ ಕಾಲುವೆಗಳನ್ನೇ ಒಡೆದು ಹಾಕಿದ್ದು ಇದರಿಂದ ಸಾಕಷ್ಟು ನೀರು ಹಳ್ಳದಲ್ಲಿ ಪೋಲಾಗುತ್ತಿದೆ.
ಪರಿಹಾರ ಸಿಕ್ಕಿಲ್ಲ
ಇನ್ನು ಯೋಜನೆಯ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ರೈತರಿಗೆ ಇಲ್ಲಿಯವರೆಗೂ ಪರಿಹಾರ ವಿತರಣೆಯಾಗಿಲ್ಲ. 189.46 ಎಕರೆ ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಂಡು 3 ವರ್ಷ ಕಳೆದಿವೆ. ಹೊಳಗುಂದಿ, ಮುದೇನೂರು, ನಂದಿಹಳ್ಳಿ, ದಾಸರಹಳ್ಳಿ, ದೇವಗೊಂಡನಹಳ್ಳಿ,  ಮಾಗಳ, ಹಗರನೂರು, ಹಿರೇಹಡಗಲಿ, ನವಲಿ, ಅಲ್ಲಿಪುರ, ಹಾಳ್ ತಿಮ್ಲಾಪುರ ಗ್ರಾಮಗಳ ರೈತರಿಗೆ ಪರಿಹಾರ ವಿತರಿಸಿಲ್ಲ. ಇಲ್ಲಿನ ವಿಶೇಷ ಭೂಸ್ವಾಧೀನಾಧಿಕಾರಿಗಳು ಕಾಯಂ ಅಲ್ಲದ ಕಾರಣ ನಿತ್ಯ ಸಂತ್ರಸ್ತರು ಕಚೇರಿಗೆ ಅಲೆದು ಸುಸ್ತಾಗಿದ್ದಾರೆ.
ಅಲ್ಲಿಪುರ ಸ್ಥಳಾಂತರ ಗ್ರಾಮದಲ್ಲಿ ರು. 134ಗಳಲ್ಲಿ 55 ಲಕ್ಷ, ಬಿದರಹಳ್ಳಿಗೆ ರು. 196.6 ಲಕ್ಷಗಳಲ್ಲಿ ರು. 128 ಲಕ್ಷ, ಗುಮ್ಮಗೋಳಕ್ಕೆ ರು. 120 ಲಕ್ಷಗಳಲ್ಲಿ 60 ಲಕ್ಷ ಬಳಕೆಯಾಗಿದೆ. ಉಳಿದಂತೆ ವಿದ್ಯುತ್ ಸಂಪರ್ಕ, ಕುಡಿವ ನೀರಿಗೆ ಒಟ್ಟು ರು. 462.94 ಲಕ್ಷಗಳ 4 ಗ್ರಾಮಗಳಿಗೆ ಕ್ರಿಯಾಯೋಜನೆ ಮಂಜೂರಾಗಿದೆ.
ಅಲ್ಲಿಪುರಕ್ಕೆ ಕುಡಿವ ನೀರಿಗೆ ರು. 90.10 ಲಕ್ಷ, ವಿದ್ಯುತ್ ಸಂಪರ್ಕಕ್ಕೆ ರು. 40.62 ಲಕ್ಷ, ಗುಮ್ಮಗೋಳ ವಿದ್ಯುತ್ ಸಂಪರ್ಕಕ್ಕೆ ರು. 35.69 ಲಕ್ಷ, ಕುಡಿವ ನೀರಿಗೆ ರು. 110.20 ಲಕ್ಷ, ಬಿದರಹಳ್ಳಿ ಕುಡಿವ ನೀರಿಗೆ ರು. 108.4 ಲಕ್ಷ, ವಿದ್ಯುತ್ ಸಂಪರ್ಕಕ್ಕೆ ರು. 78.91 ಮರು ಟೆಂಡರ್ ಹಂತದಲ್ಲಿದೆ. ಯೋಜನೆಯಿಂದ 1.60 ಲಕ್ಷ ಎಕರೆ ಪ್ರದೇಶ ನೀರಾವರಿಯಾಗಿದೆ. ಬಳ್ಳಾರಿ, ಕೊಪ್ಪಳ, ಗದಗ ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟಿದೆ. ಎಡದಂಡೆ ಭಾಗಕ್ಕೆ ಹೋಲಿಸಿದರೆ ಬಲದಂಡೆ ಭಾಗದ ರೈತರಿಗೆ ತೀರಾ ಅನ್ಯಾಯವಾಗಿದೆ. ಬಳ್ಳಾರಿ ಜಿಲ್ಲೆಗೆ ಕೇವಲ ರು. 45 ಸಾವಿರ ಎಕರೆ ಪ್ರದೇಶ ಮಾತ್ರ ನೀರಾವರಿ ಸೌಲಭ್ಯ ಹೊಂದಿದೆ. ಆದರಿಂದ ಬಳ್ಳಾರಿ ಜಿಲ್ಲೆಗೆ ಹನಿ ನೀರಾವರಿ ಸೌಲಭ್ಯ ಮಂಜೂರು ಮಾಡಬೇಕೆಂದು ಈ ಭಾಗದ ರೈತರ ಒತ್ತಾಯವಾಗಿದೆ. ಜಲಸಂಪನ್ಮೂಲ ಸಚಿವರು ಇತ್ತ ಪ್ರವಾಸ ಕೈಗೊಂಡಿದ್ದು, ಗಮನ ಹರಿಸುವರೇ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.