10 ಕೆರೆಗಳಿಗೆ ನೀರು ಭರ್ತಿ ಭಾಗ್ಯ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ನ. 25
ತಾಲೂಕಿನ 10 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಮಹತ್ವದ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.
ನೀರಾವರಿ ನಿಗಮ ನಿರ್ದೇಶಕ ಮಂಡಳಿಯನ್ನು ನೇಮಕಾತಿ ಮಾಡುವ ಮೂಲಕ ಸಿಎಂ ಆ. 28ರಂದು ಸಭೆ ಕರೆದು ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಿರುವುದರಿಂದ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಇದರಿಂದ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಆ. 25ರಂದು 'ಕನ್ನಡಪ್ರಭ' 10 ಕೆರೆಗಳಿಗೆ ಹರಿಯುವಳು ತುಂಗಭದ್ರೆ? ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ರು. 117 ಕೋಟಿ ಟೆಂಡರ್: ತಾಲೂಕಿನ ರೈತರ ದಶಕಗಳ ಕಾಲದ ಬೇಡಿಕೆ ಈಡೇರಿದ್ದು, 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹಿಂದಿನ ಸರ್ಕಾರ ಗುಲ್ಬರ್ಗ ಸಚಿವ ಸಂಪುಟ ಸಭೆಯಲ್ಲಿ ರು. 76.7 ಕೋಟಿ ಕಾಮಗಾರಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿತ್ತು. ಯೋಜನೆ ಮಂಜೂರಾತಿ ವಿಳಂಬದಿಂದ ಈಗ ಬರೋಬ್ಬರಿ ರು. 117 ಕೋಟಿಗೆ ಬಂದು ನಿಂತಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.
10 ಕೆರೆಗಳು: ತಾಲೂಕಿನ 10 ಕೆರೆಗಳು ಸುಮಾರು 687.52 ಮಿಲಿಯನ್ ಕ್ಯುಬಿಕ್ ಫೀಟ್ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ. ಅರಳ್ಳಿಹಳ್ಳಿಕೆರೆ - 106.36, ಹ್ಯಾರಡ ಮಲ್ಲಿಯಮ್ಮನ ಕೆರೆ - 62, ದಾಸನಹಳ್ಳಿ ಕೆರೆ - 39.61, ಹಿರೇಹಡಗಲಿ ಕೆರೆ - 34.99, ಹಗರನೂರು ಕೆರೆ -1 20.67, ಹಿರೇಮಲ್ಲನಕೆರೆ ಕೆರೆ - 35, ದೇವಗೊಂಡನಹಳ್ಳಿ ಕೆರೆ - 64.7, ಮುದೇನೂರು ಕೆರೆ - 70, ತಳಕಲ್ಲು ಕೆರೆ - 38.12, ಬನ್ನಿಕಲ್ಲು ಕೆರೆ - 116.07 (ಎಲ್ಲ ಕೆರೆಗಳ ನೀರಿನ ಸಾಮರ್ಥ್ಯ ಮಿಲಿಯನ್ ಕ್ಯುಬಿಕ್ ಫೀಟ್ಗಳಲ್ಲಿ) ಸೇರಿದಂತೆ ಒಟ್ಟು 687.52ರಷ್ಟು ನೀರಿನ ಸಾಮರ್ಥ್ಯವನ್ನು ಹೊಂದಲಿವೆ ಎಂದು ಯೋಜನೆಯ ಕಾರ್ಯಪಾಲಕ ಅಭಿಯಂತ ಓದೋ ಗಂಗಪ್ಪ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ತುಂಗಭದ್ರಾ ನದಿಯಿಂದ ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಸರ್ವೇ ಕಾರ್ಯಕ್ಕೆ ಸರ್ಕಾರ ರು. 9.90 ಲಕ್ಷ ವಿನಿಯೋಗಿಸಿದೆ. ಬೆಂಗಳೂರಿನ ಬಿವಿಎಚ್ ಕಂಪನಿ ಟೆಂಡರ್ ಪಡೆದು, ನಿಗದಿತ ಅವಧಿಯೊಳಗೆ ಸರ್ವೇ ಕಾರ್ಯ ಸಂಪೂರ್ಣಗೊಳ್ಳಿಸಿದ್ದಾರೆಂದು ತಿಳಿಸಿದರು.
ಅಂತರ್ಜಲ ಹೆಚ್ಚಳ: ಈಗಾಗಲೇ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕುಗಳನ್ನು ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿರುವ ಹಿನ್ನೆಲೆಯಲ್ಲಿ ಬ್ಲಾಕ್ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಕೊಳವೆ ಬಾವಿಯಲ್ಲಿ ನೀರಿಲ್ಲದೇ ಬತ್ತಿ ಹೋಗಿದ್ದು, ಮತ್ತೊಂದು ಕೊಳವೆ ಬಾವಿ ಕೊರೆಸುವ ರೈತರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಪಕ್ಕದಲ್ಲೇ ತುಂಗಭದ್ರೆ ಹರಿದರೂ ನದಿಯಿಂದ ಪೈನ್ಲೈನ್ ಮಾಡಿಕೊಳ್ಳದೇ ಕೊಳವೆ ಬಾವಿಗಳಿಂದ ನೀರಾವರಿ ಮಾಡಿಕೊಂಡಿದ್ದರು. ಸರಾಸರಿ ಮಳೆಯ ಪ್ರಮಾಣ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿ ಹೋಗಿ ರೈತರ ಶ್ರಮಕ್ಕೆ ತಕ್ಕ ಫಲ ಬಾರದೇ ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.
ಇಂತಹ ರೈತರ ಬಾಳಿನ ಬೆಳಕು ಮೂಡಿಸಲು ತಾಲೂಕಿನ 10 ಕೆರೆಗಳಿಗೆ ತುಂಗಭದ್ರೆ ಹರಿದು ತಾಲೂಕಿನ ಬಹುತೇಕ ಭಾಗಗಳಲ್ಲಿ ಅಂತರ್ಜಲ ಹೆಚ್ಚಳ ಮತ್ತು ನಿರಂತರ ನೀರಾವರಿ ಸೌಲಭ್ಯ ಹೊಂದಲಿವೆ.
ನಿರಂತರ ಹಸಿರು ಹೊನ್ನು: ಉತ್ತರ ಕರ್ನಾಟಕ ರೈತರ ಜೀವನಾಡಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ಭಾಗದ 45 ಸಾವಿರ ಎಕರೆಗೆ ನೀರು ಹರಿಸುವ ಯೋಜನೆ ಹಾಗೂ ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ತಾಲೂಕಿನ ಲಕ್ಷಾಂತರ ಖುಷ್ಕಿ ಜಮೀನಿಗೆ ನೀರು ಲಭಿಸಲಿದೆ.
ಚಂದ್ರು ಕೊಂಚಿಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

